ಅಪ್ರಾಪ್ತರ ಅತ್ಯಾಚಾರಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು ಅವಕಾಶ ನೀಡಬಾರದು: ರಾಷ್ಟ್ರಪತಿ

Update: 2019-12-06 13:45 GMT

ಹೊಸದಿಲ್ಲಿ, ಡಿ.6: ಅಪ್ರಾಪ್ತ ವಯಸ್ಸಿನವರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಅಪರಾಧ ಸಾಬೀತಾದವರಿಗೆ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಲು ಅವಕಾಶವನ್ನೇ ನೀಡಕೂಡದು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.

ಮಹಿಳೆಯರ ಸುರಕ್ಷೆ ಗಂಭೀರ ವಿಷಯವಾಗಿದ್ದು ಮಹಿಳೆಯರ ಮೇಲೆ ನಡೆಯುತ್ತಿರುವ ಪೈಶಾಚಿಕ ದಾಳಿಗಳು ದೇಶದ ಆತ್ಮಸಾಕ್ಷಿಯನ್ನೇ ನಡುಗಿಸಿಬಿಟ್ಟಿದೆ. ಪೋಕ್ಸೊ ಕಾಯ್ದೆಯಡಿ ಅಪರಾಧ ಸಾಬೀತಾದವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು ಅವಕಾಶವನ್ನೇ ನೀಡಬಾರದು. ಅಲ್ಲದೆ ಕ್ಷಮಾದಾನದ ಅರ್ಜಿಯನ್ನು ಸಂಸತ್ತು ಪರಿಶೀಲಿಸಬೇಕು ಎಂದು ರಾಜಸ್ತಾನದ ಸಿರೋಹಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರಪತಿ ಅಭಿಪ್ರಾಯಪಟ್ಟರು.

 ಈ ಮಧ್ಯೆ, 2012ರಲ್ಲಿ ನಡೆದಿದ್ದ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಶರ್ಮ ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸುವಂತೆ ದಿಲ್ಲಿ ಸರಕಾರ ಮಾಡಿರುವ ಶಿಫಾರಸನ್ನು ಕೇಂದ್ರ ಗೃಹ ಇಲಾಖೆ ರಾಷ್ಟ್ರಪತಿಗಳಿಗೆ ರವಾನಿಸಿದೆ ಎಂದು ವರದಿಯಾಗಿದೆ. ಕ್ಷಮಾದಾನದ ಅರ್ಜಿಯನ್ನು ತಿರಸ್ಕರಿಸಿದ್ದ ದಿಲ್ಲಿ ಸರಕಾರ ಬಳಿಕ ಅದನ್ನು ಕೇಂದ್ರ ಗೃಹ ಇಲಾಖೆಗೆ ಕಳಿಸಿತ್ತು. ಅರ್ಜಿಯನ್ನು ತಿರಸ್ಕರಿಸುವ ಸಲಹೆಯನ್ನು ಅನುಮೋದಿಸಿರುವ ಗೃಹ ಇಲಾಖೆ ಅರ್ಜಿಯನ್ನು ರಾಷ್ಟ್ರಪತಿಗಳಿಗೆ ಕಳುಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News