ಪ್ಲಾಸ್ಟಿಕ್ ತ್ಯಾಜ್ಯದಿಂದ ರಸ್ತೆ ನಿರ್ಮಾಣಕ್ಕೆ ತರಬೇತಿ: ದಿನಕರ ಬಾಬು

Update: 2019-12-06 14:53 GMT

ಉಡುಪಿ, ಡಿ.6: ಜಿಲ್ಲೆಯಲ್ಲಿ ಸಂಗ್ರಹವಾಗುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯದಿಂದ ರಸ್ತೆ ನಿರ್ಮಾಣ ಮಾಡುವ ಕುರಿತಂತೆ ಡಿ.10ರಂದು ತರಬೇತಿಯೊಂದನ್ನು ಆಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ತಿಳಿಸಿದ್ದಾರೆ.

ಶುಕ್ರವಾರ ಮಣಿಪಾಲದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಪ್ಲಾಸ್ಟಿಕ್ ತ್ಯಾಜ್ಯದಿಂದ ರಸ್ತೆ ನಿರ್ಮಾಣ ಮಾಡುವ ಕುರಿತಂತೆ ಮಧುರೈನ ವಾಸುದೇವನ್ ಅವರು ಡಿ.10ರಂದು ಉಡುಪಿಗೆ ಆಗಮಿಸಿ ತರಬೇತಿಯನ್ನು ನೀಡಲಿದ್ದು, ಲೋಕೋಪಯೋಗಿ, ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಮತ್ತು ರಸ್ತೆ ಕಾಮಗಾರಿ ಕೈಗೊಳ್ಳುವ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜಿಪಂನ ಎಲ್ಲಾ ಜನಪ್ರತಿನಿಧಿಗಳು ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪ್ಲಾಸ್ಟಿಕ್‌ತ್ಯಾಜ್ಯದಿಂದ ರಸ್ತೆ ನಿರ್ಮಿಸುವ ಮೂಲಕ ಜಿಲ್ಲೆಯ ಪ್ಲಾಸ್ಟಿಕ್ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ದಿನಕರಬಾಬು ನುಡಿದರು.

ಜಿಲ್ಲೆಯ ಎಲ್ಲಾ ಗ್ರಾಪಂಗಳಲ್ಲಿ ಜನವರಿ 1ರಿಂದ ಒಣತ್ಯಾಜ್ಯ ಸಂಗ್ರಹ ಮಾಡುವ ಕುರಿತಂತೆ ಸೂಚನೆ ನೀಡಲಾಗಿದೆ. ಒಣಕಸದ ಸಮರ್ಪಕ ವಿಲೇವಾರಿ ಕುರಿತಂತೆ ಎಲ್ಲಾ ಪಂಚಾಯತ್ ಅಧ್ಯಕ್ಷರು ಮತ್ತು ಪಿಡಿಓಗಳಿಗೆ ತರಬೇತಿ ಯನ್ನೂ ಸಹ ನೀಡಲಾಗುತ್ತದೆ. ಒಣ ಕಸ ಸಂಗ್ರಹಣೆಗೆ ಕಟ್ಟಡಗಳನ್ನು ಗುರುತಿಸು ವಂತೆ ಎಲ್ಲಾ ಪಂಚಾಯತ್‌ಗಳಿಗೆ ಸೂಚಿಸಲಾಗಿದೆ ಎಂದು ದಿನಕರ ಬಾಬು ಹೇಳಿದರು.

ಅಂಬಲಪಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಒಳಚರಂಡಿ ಅವ್ಯವಸ್ಥೆಯಿಂದ ಅಂಬಲಪಾಡಿ ಮತ್ತು ಕಡೆಕಾರು ವ್ಯಾಪ್ತಿಯ ಸುಮಾರು 400 ಮನೆಗಳ 150 ಕ್ಕೂ ಹೆಚ್ಚು ಬಾವಿಗಳ ನೀರು ಕಲುಷಿತಗೊಂಡಿದ್ದು, ಈ ಬಗ್ಗೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ದಿ ಕೋಶದ ಅಧಿಕಾರಿಗಳಿಗೆ ದಿನಕರ ಬಾಬು ಸೂಚಿಸಿದರು.

ಶಾಲಾ ಸಂಪರ್ಕ ಸೇತುವೆ ಯೋಜನೆಯಡಿ 119 ಸೇತುವೆಗಳ ಕಾಮಗಾರಿ ಗಳು ಮುಕ್ತಾಯವಾಗಿದ್ದು, 117 ಪ್ರಗತಿಯಲ್ಲಿವೆ. 97 ಸೇತುವೆಗಳಿಗೆ ಟೆಂಡರ್ ಕರೆಯಲಾಗಿದ್ದು, 83ಮಂಜೂರಾತಿ ಹಂತದಲ್ಲಿವೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಶಾಲಾ ಕಟ್ಟಡಗಳಲ್ಲಿ ಬಾಕಿ ಇರುವ ಶೌಚಾಲಯ ಕಾರ್ಯವನ್ನು ಅವಧಿಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ವಸತಿ ನಿಗಮದ ಮೂಲಕ ನಿರ್ಮಿಸಲಾಗುತ್ತಿರುವ ಮನೆಗಳ ನಿರ್ಮಾಣ ಕಾಮಗಾರಿ, ಹಣಬಿಡುಗಡೆ ಕುಂಠಿತಗೊಂಡಿ ರುವ ಬಗ್ಗೆ ಸಬೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಜಿಲ್ಲೆಯ ಗ್ರಾಪಂಗಳ ವ್ಯಾಪ್ತಿಯಲ್ಲಿ ಹೋರ್ಡಿಂಗ್ ಅಳಡಿಸಲಾಗುತ್ತಿದ್ದು, ಇದು ಯಾರದು ಎಂಬ ಮಾಹಿತಿ ಇರುವುದಿಲ್ಲ ಹಾಗೂ ಪಂಚಾಯತ್‌ಗೆ ಯಾವುದೇ ಶುಲ್ಕವನ್ನು ಪಾವತಿಸುವುದಿಲ್ಲ. ಆದ್ದರಿಂದ ಹೋರ್ಡಿಂಗ್ ಅಳವಡಿಸುವವರು ಸಂಬಂಧಪಟ್ಟ ಪಂಚಾಯತ್‌ನ ಅನುಮತಿ ಪಡೆಯುವ ಕುರಿತಂತೆ ನಿರ್ಣಯ ಮಾಡಿ ಸರಕಾರಕ್ಕೆ ಕಳುಹಿಸಲು ನಿರ್ಧರಿಸಲಾಯಿತು.

ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಹಿಂಗಾರು ಅವಧಿ ಯಲ್ಲಿ ನೆಲಗಡಲೆ, ದ್ವಿದಳ ಧಾನ್ಯ ಮತ್ತು ಭತ್ತದ ಬೀಜಗಳ ವಿತರಣೆ ನಡೆಸಿದ್ದು, ಬಿತ್ತನೆ ನಡೆಸಲಾಗಿದೆ. ಜಿಲ್ಲೆಯಲ್ಲಿ ರಸಗೊಬ್ಬರ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಸಭೆಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ 954 ಶಾಲೆಗಳಲ್ಲಿ ಬಿಸಿ ಊಟ ನೀಡಲಾಗುತಿದ್ದು, ಆಯಾಯ ಶಾಲೆಗಳೇ ಬಿಸಿಊಟದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿವೆ. ಜಿಲ್ಲೆಯಲ್ಲಿ ಮಕ್ಕಳು ಶಾಲೆಯಿಂದ ಹೊರಗುಳಿಯುವ ಪ್ರಕರಣ ಇಲ್ಲ. ಕೇವಲ ವಲಸೆ ಕಾರ್ಮಿಕರ ಮಕ್ಕಳು ಮಾತ್ರ ಶಾಲೆಯಿಂದ ಹೊರಗುಳಿದಿದ್ದು, 1-5ನೇ ತರಗತಿಯವರೆಗಿನ 15 ಮಕ್ಕಳು, ಪ್ರೌಢಶಾಲಾ ವಿಭಾಗದಲ್ಲಿ 13 ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಲಾಗಿದೆ ಎಂದು ಶಿಕ್ಷಣ ಇಲಾಖಾಧಿಕಾರಿ ಮಾಹಿತಿ ನೀಡಿದರು.

ಗ್ರಾಪಂ ವ್ಯಾಪ್ತಿಯ ತೆರಿಗೆ ಪರಿಷ್ಕರಣೆಯಲ್ಲಿ ಅಕ್ಟೋಬರ್ ಅಂತ್ಯದವರೆಗಿನ ಸಾಧನೆ ನಿರೀಕ್ಷೆಗಿಂತ ಕಡಿಮೆ ಇದ್ದು, ಎಲ್ಲಾ ಪಂಚಾಯತ್‌ಗಳು ಕನಿಷ್ಠ ಶೇ.92 ಸಾಧನೆ ಮಾಡಬೇಕು. ಇದಕ್ಕಾಗಿ ವಾರಕೊಮ್ಮೆ ಪ್ರಗತಿ ಪರಿಶೀಲನೆ ನಡೆಸಿ ಸಾಧನೆಯನ್ನು ದಾಖಲಿಸಬೇಕು. ಕುಡಿಯುವ ನೀರಿನ ಯೋಜನೆಯಲ್ಲಿ ಶೇ.45 ಸಾಧನೆ ಮಾಡಿದ್ದು, ಇಲ್ಲೂ ಕೂಡಾ ಕಡಿಮೆ ಸಾಧನೆ ಮಾಡಿರುವ ಪಂಚಾಯತ್‌ಗಳನ್ನು ಗುರಿಯಾಗಿಸಿಕೊಂಡು ಹೆಚ್ಚು ಪ್ರಗತಿ ದಾಖಲಿಸಬೇಕು ಎಂದು ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ.ಕೆ.ಶೆಟ್ಟಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ ಹೆಗ್ಡೆ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಜಿ. ಪುತ್ರನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್, ಉಪ ಕಾರ್ಯದರ್ಶಿ ಕಿರಣ್ ಪಡ್ನೇಕರ್, ಯೋಜನಾ ನಿರ್ದೇಕ ಗುರುದತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News