ಮಹಾರಾಷ್ಟ್ರ ಬಿಜೆಪಿಯಲ್ಲಿ ಭಿನ್ನಮತ: 15 ಶಾಸಕರು ಮೈತ್ರಿ ಕೂಟ ಸೇರ್ಪಡೆ ಸಾಧ್ಯತೆ

Update: 2019-12-06 16:44 GMT

ಮುಂಬೈ, ಡಿ. 6: ತಾನೊಂದು ವಿಭಿನ್ನ ಪಕ್ಷವೊಂದು ಹೇಳಿಕೊಳ್ಳುವ ಬಿಜೆಪಿ ಈಗ ಮಹಾರಾಷ್ಟ್ರದಲ್ಲಿ ಭಿನ್ನಮತದ ಬಿರುಗಾಳಿ ಎದುರಿಸಬೇಕಾಗಿ ಬಂದಿದೆ.

ಬಿಜೆಪಿಯ 105 ಶಾಸಕರಲ್ಲಿ ಕನಿಷ್ಠ 15 ಶಾಸಕರು ಈಗ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್‌ಸಿಪಿಯ ಮೈತ್ರಿ ಕೂಟವಾದ ಮಹಾ ವಿಕಾಸ್ ಅಘಾಡಿ (ಎಂವಿಪಿ)ಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಿನ್ನಮತೀಯ ಶಾಸಕರು ಇದುವರೆಗೆ ತಮ್ಮ ನಡೆಯ ಬಗ್ಗೆ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಅವು ತಿಳಿಸಿವೆ.

ದಿವಂಗತ ಕೇಂದ್ರ ಸಚಿವ ಗೋಪಿನಾಥ್ ಮುಂಢೆ ಅವರ ಪುತ್ರಿ, ಕೇಂದ್ರದ ಮಾಜಿ ಸಹಾಯಕ ಸಚಿವೆ ಪಂಕಜಾ ಮುಂಢೆ ಪಕ್ಷ ತ್ಯಜಿಸುವ ಸೂಚನೆ ನೀಡುವುದರೊಂದಿಗೆ ಬಿಜೆಪಿಯೊಳಗಿನ ಭಿನ್ನಮತ ಮುನ್ನೆಲೆಗೆ ಬಂದಿತ್ತು. ಪಂಕಜಾ ಮುಂಢೆ ಜನಪ್ರಿಯ ಹಿಂದುಳಿದ ವರ್ಗದ ನಾಯಕಿ. ಆದರೆ, ಅವರು ಅಕ್ಟೋಬರ್‌ನಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಬೀಡ್ ಕ್ಷೇತ್ರದಲ್ಲಿ ಸೋತಿದ್ದರು.

ಪಂಕಜಾ ಮುಂಢೆಯಂತೆ ಇತರ ಹಿಂದುಳಿದ ವರ್ಗಕ್ಕೆ ಸೇರಿದ 15 ಶಾಸಕರು ಇದ್ದಾರೆ. ಮಾಜಿ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ನೇತೃತ್ವದ ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಭಾವನೆ ಈ ಶಾಸಕರಿಗೆ ಇದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದಾಗ ಈ ಶಾಸಕರು ಮೌನವಾಗಿದ್ದರು. ಆದರೆ, ಬಿಜೆಪಿ ಸರಕಾರ ರಚಿಸಲು ವಿಫಲವಾದಾಗ ಈ ಶಾಸಕರು ಪಕ್ಷದ ರಾಜ್ಯ ನಾಯಕತ್ವದ ವಿರುದ್ಧ ತಮ್ಮ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News