‘ಎನ್‌ಕೌಂಟರ್ ಅಲ್ಲ, ನಿರ್ದಯ ಕಗ್ಗೊಲೆಗಳು’: ಹೈ ಕೋರ್ಟ್ ಮಾಜಿ ನ್ಯಾಯಾಧೀಶ ಕಮಾಲ್‌ ಪಾಶಾ

Update: 2019-12-07 06:22 GMT

ಹೈದರಾಬಾದ್,ಡಿ.7: ಪಶುವೈದ್ಯೆಯ ಅತ್ಯಾಚಾರ ಆರೋಪಿಗಳನ್ನು ಹೈದರಾಬಾದ್‌ ನಲ್ಲಿ ಪೊಲೀಸರು ಎನ್‌ಕೌಂಟರ್ ನಡೆಸಿ, ಹತ್ಯೆಗೈದಿರುವುದನ್ನು ಕೇರಳ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಬಿ.ಕಮಾಲ್ ಪಾಶಾ ಖಂಡಿಸಿದ್ದಾರೆ.

  “ನಾನು ಇದನ್ನು ಎನ್‌ಕೌಂಟರ್ ಎಂಬುದಾಗಿ ಕರೆಯಲಾರೆ. ಇದೊಂದು ನಿರ್ದಯವಾದ ಕಗ್ಗೊಲೆಗಳಾಗಿವೆ. ಒಂದು ವೇಳೆ ಜನತೆ ಆರೋಪಿಗಳನ್ನು ಕೊಲ್ಲಬೇಕೆಂದು ಬಯಸಿದ್ದರೂ, ಪೊಲೀಸರು ಹಾಗೆ ಮಾಡಬಾರದಾಗಿತ್ತು” ಎಂದು ಅವರು ಆಂಗ್ಲ ಸುದ್ದಿಪತ್ರಿಕೆಗೆ ದೂರವಾಣಿ ಮೂಲಕ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆರಂಭದಲ್ಲಿ ಪೊಲೀಸರು ಪಶುವೈದ್ಯೆ ನಾಪತ್ತೆಯಾಗಿದ್ದಾರೆಂಬ ದೂರಿಗೆ ಕಿವುಡಾಗಿ ವರ್ತಿಸಿದ್ದರು. ಆನಂತರ ಆಕೆಯ ವಿರೂಪಗೊಂಡ ಶವಪತ್ತೆಯಾದಾಗ ಜನರು ಉರಿದೆದ್ದರು. ಈಗ ಪೊಲೀಸರು ತಮ್ಮನ್ನು ರಕ್ಷಿಸಿಕೊಳ್ಳಲು ಬಯಸಿದ್ದಾರೆ. ಇದಕ್ಕಾಗಿ ಅವರು ಆರೋಪಿಗಳನ್ನು ಗುಂಡಿಕ್ಕಿ ಸಾಯಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ವ್ಯವಸ್ಥೆಯಲ್ಲಿ ವಿವರಿಸಲಾದ ಶಿಕ್ಷೆಯ ವಿಧಾನ ಇದಲ್ಲ. ಆರೋಪಿಗಳಿಗೆ ಈ ನೆಲದ ಅತ್ಯಂತ ಗರಿಷ್ಠವಾದ ಶಿಕ್ಷೆಯನ್ನು ವಿಧಿಸಬೇಕೆಂದು ನಾನು ಬಯಸುತ್ತೇನೆ. ಆದರೆ ಅದನ್ನು ಅನುಷ್ಠಾನಗೊಳಿಸುವ ವಿಧಾನ ಇದಲ್ಲ ಎಂದು ಕಮಾಲ್ ಪಾಶಾ ಹೇಳಿದ್ದಾರೆ.

 2018ರ ಮೇನಲ್ಲಿ ನಿವೃತ್ತರಾಗಿರುವ ನ್ಯಾಯಮೂರ್ತಿ ಪಾಶಾ ಅವರು ಕೇರಳ ಹೈಕೋರ್ಟ್‌ನ ಕೊಚ್ಚಿ ಪೀಠದ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದರು. ಮಾನವಹಕ್ಕುಗಳು ಸೇರಿದಂತೆ ವಿವಿಧ ಜ್ವಲಂತ ವಿಷಯಗಳ ಬಗ್ಗೆ ಅವರು ಧ್ವನಿಯೆತ್ತಿದ್ದಾರೆ.

ನ್ಯಾಯಾಲಯಗಳ ಬಗ್ಗೆ ಜನರಿಗಿರುವ ವಿಶ್ವಾಸ ಮರಳಬೇಕಾದರೆ ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯಲ್ಲಿ ಅಸಾಧಾರಣ ಬದಲಾವಣೆಗಳಾಗಬೇಕೆಂದು ಪಾಷಾ ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News