ಟೇಬಲ್ ಟೆನಿಸ್: ಸಿಂಗಲ್ಸ್ ಪ್ರಶಸ್ತಿ ಗೆದ್ದ ಅಮಲ್‌ರಾಜ್, ಸುತೀರ್ಥಾ
ಕಠ್ಮಂಡು, ಡಿ.6: ಇಲ್ಲಿ ನಡೆಯುತ್ತಿರುವ ದಕ್ಷಿಣ ಏಶ್ಯನ್ ಕ್ರೀಡಾಕೂಟದ ಟೇಬಲ್ ಟೆನಿಸ್‌ನ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಅಂತೋನಿ ಅಮಲ್‌ರಾಜ್ ಮತ್ತು ಮಹಿಳೆಯರ ಸಿಂಗಲ್ಸ್ ನಲ್ಲಿ ಸುತೀರ್ಥಾ ಮುಖರ್ಜಿ ಪ್ರಶಸ್ತಿ ಬಾಚಿಕೊಂಡಿದ್ದಾರೆ.
ಶುಕ್ರವಾರ ನಡೆದ ಟೇಬಲ್ ಟೆನಿಸ್‌ನ ಫೈನಲ್‌ನಲ್ಲಿ ಅಮಲ್‌ರಾಜ್ ಅವರು ತನ್ನ ಎದುರಾಳಿ ಭಾರತದವರೇ ಆಗಿರುವ ಹರ್ಮಿತ್ ದೇಸಾಯಿ ಅವರನ್ನು 6-11, 9-11, 10-12, 11-7, 11-4, 11-9, 11-7 ಅಂತರದಲ್ಲಿ ಮಣಿಸಿ ಪ್ರಶಸ್ತಿ ಬಾಚಿಕೊಂಡರು. ಇದರೊಂದಿಗೆ ಭಾರತಕ್ಕೆ ಪುರುಷರ ಸಿಂಗಲ್ಸ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ದೊರೆಯಿತು. ಮಹಿಳೆಯರ ಸಿಂಗಲ್ಸ್ ನಲ್ಲಿ ಅಹಿಕಾರನ್ನು ಸುತೀರ್ಥಾ 8-11, 11-8, 6-21, 11-4, 13-11, 11-8 ಅಂತರದಿಂದ ಮಣಿಸಿ ಚಿನ್ನದ ನಗೆ ಬೀರಿದರು. ಏಳು ಚಿನ್ನ ಮತ್ತು ಐದು ಬೆಳ್ಳಿಯೊಂದಿಗೆ ಭಾರತದ ಟೇಬಲ್ ಟೆನಿಸ್ ಆಟಗಾರರು ಗರಿಷ್ಠ ಪದಕಗಳನ್ನು ಗೆದ್ದಿದ್ದಾರೆ.
ಫೈನಲ್‌ನ ಆರಂಭದಲ್ಲಿ 0-3 ಅಂತರದಲ್ಲಿ ಹಿನ್ನಡೆ ಅನುಭವಿಸಿದ್ದ ಅಮಲ್‌ರಾಜ್ ಬಳಿಕ ತಿರುಗೇಟು ನೀಡಿ ಜಯ ಗಳಿಸಿದರು. ಅಹಿಕಾ ವಿರುದ್ಧ ಕೆಟ್ಟದಾಗಿ ಆಟ ಪ್ರಾರಂಭಿಸಿದ ಸುತೀರ್ಥಾ ಗೆಲುವು ಸಹ ಸುಲಭವಾಗಿರಲಿಲ್ಲ. ಆದರೆ ಕೊನೆಯ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದರು.
ಇದಕ್ಕೂ ಮುನ್ನ ನಡೆದ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತ ಹರ್ಮಿತ್ 11-5, 11-4, 11-1, 11-4ರಿಂದ ನೇಪಾಳದ ಪುರುಷೋತ್ತಮ್ ಬಿ. ಅವರನ್ನು ಸೋಲಿಸಿದರು ಮತ್ತು ಅಮಲ್‌ರಾಜ್ 11-4, 12-10, 11-8, 11-2 ಅಂತರಿಂದ ನೇಪಾಳದ ಸಾಂತೋ ಶ್ರೀಶ್ತಾ ವಿರುದ್ಧ ಜಯ ಗಳಿಸಿ ಫೈನಲ್ ಪ್ರವೇಶಿಸಿದರು.
ಮಹಿಳಾ ಸೆಮಿಫೈನಲ್‌ನಲ್ಲಿ ಸುತೀರ್ಥಾ ಮತ್ತು ಅಹಿಕಾ ಕ್ರಮವಾಗಿ ಶ್ರೀಲಂಕಾದ ಎದುರಾಳಿಗಳಾದ ಇಶಾರಾ ಮಧುರಂಗಿ (11-7,11-4, 11-7, 11-5) ಮತ್ತು ಎರಾಂಡಿ ದಿಲುಶಿಕಾ (11-7, 11-9, 11-4, 11-) ಅವರನ್ನು ಸೋಲಿಸಿದರು.