ಪೀಲೆ ಧರಿಸಿದ್ದ ಜರ್ಸಿ 30,000 ಯುರೋಗೆ ಹರಾಜು

Update: 2019-12-06 18:10 GMT

ಮಿಲನ್, ಡಿ.6: ಬ್ರೆಝಿಲ್ ಫುಟ್ಬಾಲ್ ದಂತಕತೆ ಪೀಲೆ ತನ್ನ ತಂಡದ ಪರ ಕೊನೆಯ ಬಾರಿ ಧರಿಸಿದ್ದ ಜರ್ಸಿಯನ್ನು ಇಟಲಿಯಲ್ಲಿ ಹರಾಜಿಗಿಡಲಾಗಿದ್ದು ಅದು 30,000 ಯುರೋಗೆ ಮಾರಾಟವಾಗಿದೆ. ಮೂರು ಬಾರಿ ವಿಶ್ವಕಪ್ ಜಯಿಸಿರುವ ಪೀಲೆ 1971ರ ಜುಲೈನಲ್ಲಿ ರಿಯೋ ಡಿ ಜನೈರೊದ ಮರಕಾನ ಸ್ಟೇಡಿಯಂನಲ್ಲಿ ಯುಗೊಸ್ಲಾವಿಯಾ ವಿರುದ್ಧ ನಡೆದಿದ್ದ ಸೌಹಾರ್ದ ಪಂದ್ಯದಲ್ಲಿ ಕೊನೆಯ ಬಾರಿ ಬ್ರೆಝಿಲ್ ತಂಡದ ಜರ್ಸಿ ಧರಿಸಿ ಆಡಿದ್ದರು. ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರನಾಗಿರುವ 79ರ ವಯಸ್ಸಿನ ಪೀಲೆ ಐದು ಬಾರಿ ವಿಶ್ವಕಪ್ ಜಯಿಸಿರುವ ಬ್ರೆಝಿಲ್ ತಂಡದ ಪರವಾಗಿ 92 ಪಂದ್ಯಗಳಲ್ಲಿ ಆಡಿದ್ದು ಒಟ್ಟು 77 ಗೋಲುಗಳನ್ನು ಗಳಿಸಿದ್ದಾರೆ. ಗುರುವಾರ ಟರಿನ್‌ನ ಬೊಲಾಫಿ ಹರಾಜು ಹೌಸ್‌ನಲ್ಲಿ ಪೀಲೆ ಧರಿಸಿದ್ದ ಶರ್ಟ್ ಹೆಚ್ಚು ಗಮನ ಸೆಳೆದಿತ್ತು. ಹರಾಜಿನಲ್ಲಿದ್ದ ಇತರ ಕ್ರೀಡಾ ಸ್ಮರಣಿಕೆಗಳ ಪೈಕಿ ಇಟಲಿಯ ಸೈಕ್ಲಿಂಗ್ ಸ್ಟಾರ್ ಫೌಸ್ಟಾ ಕೊಪಪಿ 1952ರ ಟೂರ್ ಡಿ ಫ್ರಾನ್ಸ್ ಪ್ರಶಸ್ತಿ ಜಯಿಸಿದಾಗ ಧರಿಸಿದ್ದ ಜರ್ಸಿ 25,000 ಯುರೋಗೆ ಬಿಕರಿಯಾಗಿದೆ. ಅರ್ಜೆಂಟೀನದ ಲೆಜೆಂಡ್ ಡಿಯಾಗೊ ಮರಡೋನ 1989-90ರ ಋತುವಿನಲ್ಲಿ ನಪೋಲಿ ತಂಡದ ಪರ ಆಡುತ್ತಿದ್ದಾಗ ಧರಿಸಿದ್ದ ಶರ್ಟ್ 7,500 ಯುರೋಗೆ ಮಾರಾಟವಾಗಿದೆ. ಯುಎಸ್ ಬಾಸ್ಕೆಟ್‌ಬಾಲ್ ದಿಗ್ಗಜ ಮೈಕಲ್ ಜೋರ್ಡನ್ ಬೇಸ್‌ಬಾಲ್‌ಗೆ ಬಳಸಿದ್ದ ಬ್ಯಾಟ್ 425 ಯುರೋಗೆ ಹರಾಜಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News