×
Ad

ಬುಮ್ರಾಗೆ ‘ಬೇಬಿ ಬೌಲರ್’ ಎಂದ ಅಬ್ದುಲ್ ರಝಾಕ್‌ಗೆ ಇರ್ಫಾನ್ ಪಠಾಣ್ ತಿರುಗೇಟು

Update: 2019-12-06 23:46 IST

ಹೊಸದಿಲ್ಲಿ, ಡಿ.6: ಭಾರತದ ಪ್ರಮುಖ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾಗೆ ‘ಬೇಬಿ ಬೌಲರ್’ ಎಂದು ಕರೆದು ವ್ಯಂಗ್ಯವಾಡಿರುವ ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಅಬ್ದುಲ್ ರಝಾಕ್‌ರನ್ನು ಭಾರತದ ಹಿರಿಯ ವೇಗದ ಬೌಲರ್ ಇರ್ಫಾನ್ ಪಠಾಣ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಇಂತಹ ಅತಿರೇಕದ ಹೇಳಿಕೆಗಳಿಗೆ ಕ್ರಿಕೆಟ್ ಅಭಿಮಾನಿಗಳು ಹೆಚ್ಚು ಗಮನ ನೀಡಬಾರದು. ಅದರ ಬದಲಿಗೆ ಈ ಹೇಳಿಕೆಯನ್ನು ಲಘುವಾಗಿ ಪರಿಗಣಿಸಬೇಕು ಎಂದು ಪಠಾಣ್ ವಿನಂತಿಸಿಕೊಂಡಿದ್ದಾರೆ.

ನನ್ನ ವೃತ್ತಿಜೀವನದಲ್ಲಿ ಸಾಕಷ್ಟು ವಿಶ್ವದರ್ಜೆಯ ವೇಗದ ಬೌಲರ್‌ಗಳನ್ನು ಎದುರಿಸಿದ್ದೇನೆ. ಹಾಗಾಗಿ ನನಗೆ ಬುಮ್ರಾರಂತಹ ಬೌಲರ್‌ಗಳನ್ನು ಎದುರಿಸುವುದಕ್ಕೆ ಕಷ್ಟವಾಗುವುದಿಲ್ಲ. ನಾನು ಗ್ಲೆನ್ ಮೆಗ್ರಾತ್ ಹಾಗೂ ವಸೀಂ ಅಕ್ರಂರಂತಹ ಶ್ರೇಷ್ಠ ಬೌಲರ್‌ಗಳ ವಿರುದ್ಧ ಆಡಿದ್ದೇನೆ. ನನ್ನ ಎದುರು ಬುಮ್ರಾ ‘ಬೇಬಿ ಬೌಲರ್’. ನಾನು ಅವರನ್ನು ಸುಲಭವಾಗಿ ಎದುರಿಸಬಲ್ಲೆ ಎಂದು ರಝಾಕ್ ಕ್ರಿಕೆಟ್ ಪಾಕಿಸ್ತಾನಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಗುರುವಾರ ರಝಾಕ್ ಹೇಳಿಕೆಯನ್ನು ಪ್ರಸ್ತಾವಿಸಿದ ಪಠಾಣ್ 2004ರಲ್ಲಿ ತನ್ನ ಕುರಿತು ಪಾಕಿಸ್ತಾನದ ಮಾಜಿ ನಾಯಕ ಜಾವೆದ್ ಮಿಯಾಂದಾದ್ ನೀಡಿದ್ದ ಹೇಳಿಕೆಯನ್ನು ನೆನಪಿಸಿದರು.

ಪಾಕಿಸ್ತಾನದಲ್ಲಿ ಪಠಾಣ್‌ರಂತಹ ಬೌಲರ್‌ಗಳು ಗಲ್ಲಿಗಲ್ಲಿಯಲ್ಲೂ ಕಾಣಸಿಗುತ್ತಾರೆ. ನಾವು ಪಠಾಣ್ ಬಗ್ಗೆ ತಲೆಕಡಿಸಿಕೊಳ್ಳುವುದಿಲ್ಲ ಎಂದು ಮಿಯಾಂದಾದ್ ಹೇಳಿಕೆ ನೀಡಿದ್ದರು. 2004ರಲ್ಲಿ ಪಾಕಿಸ್ತಾನ ತಂಡ ಸ್ವದೇಶದಲ್ಲಿ ಭಾರತ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲು ಸಜ್ಜಾಗುತ್ತಿದ್ದ ವೇಳೆ ಮಿಯಾಂದಾದ್ ಇಂತಹ ಕೆರಳಿಸುವಂತಹ ಹೇಳಿಕೆಯನ್ನು ನೀಡಿದ್ದರು. ಮಿಯಾಂದಾದ್ ಹೇಳಿಕೆ ನೀಡಿದ್ದ 24 ತಿಂಗಳೊಳಗೆ ಕರಾಚಿ ಟೆಸ್ಟ್ ನಲ್ಲಿ ಪಠಾಣ್ ಪಂದ್ಯದ ಮೊದಲ ಓವರ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಟೆಸ್ಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಕೀರ್ತಿಗೂ ಭಾಜನರಾಗಿದ್ದರು.

ಸದ್ಯ ಬುಮ್ರಾ ಏಕದಿನದಲ್ಲಿ ವಿಶ್ವದ ನಂ.1 ಬೌಲರ್ ಆಗಿದ್ದು, ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಕಳೆದ ಕೆಲವು ಸಮಯದಿಂದ ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿದಿರುವ ಬುಮ್ರಾ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಜನಿಕಾಂತ್‌ರಿಂದ ಫಿಟ್ನೆಸ್‌ಗೆ ಸಂಬಂಧಿಸಿದ ಅಭ್ಯಾಸ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News