ಅಂಡರ್-19 ವಿಶ್ವಕಪ್‌ಗೆ ಪಾಕಿಸ್ತಾನ ತಂಡ

Update: 2019-12-06 18:22 GMT

ಲಾಹೋರ್, ಡಿ.6: ಪಾಕಿಸ್ತಾನದ ಯುವ ವೇಗದ ಬೌಲರ್ ನಸೀಂ ಶಾ ದಕ್ಷಿಣ ಆಫ್ರಿಕಾದಲ್ಲಿ ಮುಂದಿನ ವರ್ಷದ ಜನವರಿ 17ರಿಂದ ಫೆಬ್ರವರಿ 9ರ ತನಕ ನಡೆಯಲಿರುವ ಅಂಡರ್-19 ವಿಶ್ವಕಪ್‌ಗೆ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಕಟಿಸಿರುವ 15 ಸದಸ್ಯರುಗಳನ್ನು ಒಳಗೊಂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಶಾ ಕಳೆದ ತಿಂಗಳು ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿದ್ದರು. 154 ರನ್ ಗಳಿಸಿದ್ದ ಆಸೀಸ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ವಿಕೆಟ್‌ನ್ನು ಪಡೆದಿದ್ದರು. 16ರ ಹರೆಯದ ನಸೀಂ ಆಸ್ಟ್ರೇಲಿಯ ನೆಲದಲ್ಲಿ ಚೊಚ್ಚಲ ಟೆಸ್ಟ್ ಕ್ರಿಕೆಟ್ ಆಡಿರುವ ಕಿರಿಯ ವಯಸ್ಸಿನ ಕ್ರಿಕೆಟಿಗನಾಗಿದ್ದರು. 16 ವರ್ಷ, 279ನೇ ದಿನದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿರಿಸಿದ್ದ ನಸೀಂ ದಕ್ಷಿಣ ಆಫ್ರಿಕಾ ವಿರುದ್ಧ 1953ರಲ್ಲಿ 17ನೇ ವಯಸ್ಸಿನಲ್ಲಿ ಚೊಚ್ಚಲ ಟೆಸ್ಟ್ ಕ್ರಿಕೆಟ್ ಆಡಿದ್ದ ಆಸ್ಟ್ರೇಲಿಯದ ಮಾಜಿ ನಾಯಕ ಇಯಾನ್ ಕ್ರೆಗ್ ದಾಖಲೆಯನ್ನು ಮುರಿದಿದ್ದರು.

ಇದೇ ವೇಳೆ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರೊಹೈಲ್ ನಝೀರ್ ಟೂರ್ನಮೆಂಟ್‌ನಲ್ಲಿ ಪಾಕಿಸ್ತಾನವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಆರಂಭಿಕ ಆಟಗಾರ ಹೈದರ್ ಅಲಿ ಉಪ ನಾಯಕನಾಗಿ ಆಯ್ಕೆಯಾಗಿದ್ದಾರೆ.

  ಪಾಕಿಸ್ತಾನ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ 2004 ಹಾಗೂ 2006ರಲ್ಲಿ ಚಾಂಪಿಯನ್ ಆಗಿತ್ತು. ಮೂರು ಬಾರಿ ರನ್ನರ್ಸ್-ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು. 16 ತಂಡಗಳು ಭಾಗವಹಿಸುತ್ತಿರುವ 2020ರ ಕಿರಿಯರ ವಿಶ್ವಕಪ್‌ನಲ್ಲಿ ಸಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಪಾಕ್ ಜ.19ರಂದು ಸ್ಕಾಟ್ಲೆಂಡ್ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಜ.22ರಂದು ಝಿಂಬಾಬ್ವೆ ವಿರುದ್ಧ 2ನೇ ಹಾಗೂ ಜ.24ರಂದು ಬಾಂಗ್ಲಾದೇಶ ವಿರುದ್ಧ ಮೂರನೇ ಹಾಗೂ ಕೊನೆಯ ಗ್ರೂಪ್ ಪಂದ್ಯವನ್ನು ಆಡಲಿದೆ.

ಪ್ರತಿ ನಾಲ್ಕು ಗುಂಪುಗಳಲ್ಲಿನ ಅಗ್ರ-2 ತಂಡಗಳು ಸೂಪರ್ ಲೀಗ್‌ಗೆ ಪ್ರವೇಶಿಸಲಿವೆ. ಉಳಿದ ತಂಡಗಳು ಪ್ಲೇಟ್ ಚಾಂಪಿಯನ್‌ಶಿಪ್‌ಗೆ ತೇರ್ಗಡೆಯಾಗಲಿವೆ.

ಸೂಪರ್ ಲೀಗ್ ಜ.28ರಿಂದ ಆರಂಭವಾಗಲಿದೆ. ಅಗ್ರ-4 ತಂಡಗಳು ಸೆಮಿ ಫೈನಲ್‌ಗೆ ಅರ್ಹತೆ ಪಡೆಯಲಿವೆ. ಫೆ.9ರಂದು ಫೈನಲ್ ಪಂದ್ಯ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News