ಮೂರು ಎನ್‍ ಕೌಂಟರ್ ಗಳು, ಒಂದೇ ಪೊಲೀಸ್ ಅಧಿಕಾರಿ, ಅದೇ ವಿವರಣೆ

Update: 2019-12-07 12:45 GMT

ಹೈದರಾಬಾದ್: ಹನ್ನೊಂದು ವರ್ಷಗಳ ಹಿಂದೆ, 2008ರಲ್ಲಿ ಮೂವರು ಆ್ಯಸಿಡ್ ದಾಳಿ ಪ್ರಕರಣದ ಆರೋಪಿಗಳನ್ನು ಎನ್‍ ಕೌಂಟರ್ ನಲ್ಲಿ ಕೊಂದ ಘಟನೆ,  2016ರಲ್ಲಿ ನಡೆದ ಮಾಜಿ ನಕ್ಸಲನೊಬ್ಬನ ಹತ್ಯೆ ಹಾಗೂ ಇದೀಗ ಪಶುವೈದ್ಯೆ ಅತ್ಯಾಚಾರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್‍ಕೌಂಟರ್‍ ನಲ್ಲಿ ಕೊಂದ ಘಟನೆ- ಈ ಮೂರೂ ಪ್ರಕರಣಗಳಲ್ಲಿ ಪೊಲೀಸರು ಒಂದೇ ರೀತಿಯಲ್ಲಿ ಕಾರ್ಯಾಚರಿಸಿದ್ದರಲ್ಲದೆ, ಮೂರೂ ಪ್ರಕರಣಗಳಲ್ಲಿ ಅವರು ನೀಡಿದ ವಿವರಣೆ ಕೂಡ ಒಂದೇ ಆಗಿತ್ತು.

ತಮ್ಮ ಮೇಲೆ ದಾಳಿ ನಡೆದಿದ್ದರಿಂದ ಆತ್ಮರಕ್ಷಣೆಗೆ ಗುಂಡು ಹಾರಿಸಬೇಕೆಂಬ ವಿವರಣೆ ನೀಡಲಾಗಿತ್ತು. ಮೂರೂ ಪ್ರಕರಣಗಳಲ್ಲಿ ಪೊಲೀಸ್ ತಂಡದ ನೇತೃತ್ವ ವಹಿಸಿದ್ದ ಅಧಿಕಾರಿಯ ಹೆಸರು ಕೂಡ ವಿ.ಸಿ. ಸಜ್ಜನರ್.

1996 ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಸಜ್ಜನರ್ ಅವರು ವಾರಂಗಲ್ ಎಸ್‍ಪಿಯಾಗಿದ್ದಾಗ ಡಿಸೆಂಬರ್ 2008ರಲ್ಲಿ ಮೋಟಾರ್ ಸೈಕಲ್‍ ನಲ್ಲಿದ್ದ ಮೂವರು ಯುವಕರು ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದ ಇಬ್ಬರು ಯುವತಿಯರ ಮೇಲೆ ಆ್ಯಸಿಡ್ ಎರಚಿದ್ದರು. ಘಟನೆ ಭಾರೀ ಕೋಲಾಹಲಕ್ಕೆ ಕಾರಣವಾಗಿ ಪ್ರತಿಭಟನೆಗಳೂ ನಡೆದಿದ್ದವು. ಆರೋಪಿಗಳ ಬಂಧನವಾದ ಮರುದಿನವೇ ಮೂವರನ್ನೂ ಪೊಲೀಸರು ವಾರಂಗಲ್‍ ನಿಂದ 30 ಕಿ.ಮೀ. ದೂರದ ಮಮುನುರ್ ಅರಣ್ಯದಲ್ಲಿ ರಾತ್ರಿ ಗುಂಡಿಕ್ಕಿ ಸಾಯಿಸಿದ್ದರು.

ಸಾಕ್ಷ್ಯ (ಆ್ಯಸಿಡ್  ಹಾಗೂ ಮೋಟಾರ್ ಸೈಕಲ್) ಸಂಗ್ರಹಿಸಲು ಅವರನ್ನು ಕರೆದುಕೊಂಡು ಹೋಗಿದ್ದ ವೇಳೆ ಅವರಲ್ಲೊಬ್ಬ ದೇಶಿ ನಿರ್ಮಿತ ಪಿಸ್ತೂಲು ಹೊರತೆಗೆದುಪೊಲೀಸರತ್ತ ಗುರಿಯಾಗಿಸಿದ್ದನೆಂದು ಸಜ್ಜನರ್ ಆಗ ಹೇಳಿದ್ದರು. ಆರೋಪಿಗಳು ಪೊಲೀಸರ ಮೇಲೆ ಆ್ಯಸಿಡ್ ಕೂಡ ಎರಚಿದ್ದರಿಂದ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತು ಎಂದೂ ಹೇಳಿದ್ದರು. ಆರೋಪಿಗಳಿಗೆ ಕೈಕೋಳ ತೊಡಿಸಲಾಗಿರಲಿಲ್ಲ ಹಾಗೂ ಅವರ ಕೈಗೆ ಪಿಸ್ತೂಲ್ ಏಕೆ ಬಂತೆಂಬುದಕ್ಕೂ ವಿವರಣೆಯಿರಲಿಲ್ಲ.

ಆಗಸ್ಟ್ 2016ರಲ್ಲಿ ಸಜ್ಜನರ್ ನೇತೃತ್ವದ ನಕ್ಸಲ್ ನಿಗ್ರಹ ತಂಡ (ಗ್ರೇಹೌಂಡ್ಸ್ ಟೀಂ) ಮಾಜಿ ನಕ್ಸಲ್ ಮುಹಮ್ಮದ್ ನಯೀಮುದ್ದೀನ್ ಎಂಬಾತನನ್ನು ಹೈದರಾಬಾದ್ ಹೊರವಲಯದಲ್ಲಿ ಗುಂಡಿಕ್ಕಿ ಸಾಯಿಸಿತ್ತು. ಆತ ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಎಂದು ಪೊಲೀಸರು ವಿವರಣೆ ನೀಡಿದ್ದರು. ಆತ ತನ್ನ ಜೀಪಿನೊಳಗಡೆಯಿಂದ ಎಕೆ 47 ಪಿಸ್ತೂಲಿನಿಂದ ಗುಂಡು ಹಾರಿಸಿದ್ದ ಎಂದೂ ಪೊಲೀಸರು ಹೇಳಿದ್ದರು.

ಪಶುವೈದ್ಯೆ ಅತ್ಯಾಚಾರ ಕೊಲೆ ಪ್ರಕರಣದ ಆರೋಪಿಗಳು ಆಕೆಯ ಮೊಬೈಲ್ ಫೋನ್, ಕೈಗಡಿಯಾರ ಹಾಗೂ ಪವರ್ ಬ್ಯಾಂಕ್ ಅಡಗಿಸಿಟ್ಟಿದ್ದ ಸ್ಥಳವನ್ನು ಪೊಲೀಸರಿಗೆ ತೋರಿಸುತ್ತಿದ್ದಾಗ ದಾಳಿ ನಡೆಸಿದ್ದರು. ಆಕೆಯ ವಸ್ತುಗಳನ್ನು ಹುಡುಕಲು ಹೇಳಿದ್ದರಿಂದ ಅವರ ಕೈಗಳಿಗೆ ಕೋಳ ತೊಡಿಸಲಾಗಿರಲಿಲ್ಲ ಎಂದು ಸಜ್ಜನರ್ ವಿವರಣೆ ನೀಡಿದ್ದರು.

ಸೈಬರಾಬಾದ್ ಪೊಲೀಸ್ ಆಯುಕ್ತರಾಗಿ ನಿಯುಕ್ತಿಗೊಳ್ಳುವ ಮುನ್ನ ಅವರು ವಿಶೇಷ ಗುಪ್ತಚರ ವಿಭಾಗದ ಐಜಿ ಆಗಿದ್ದರಲ್ಲದೆ ಆ ಸಂದರ್ಭ ಹಲವು ನಕ್ಸಲರ ಶರಣಾಗತಿ ಹಾಗೂ ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News