ದಲಿತ, ಬಂಡಾಯ ಹಣೆಪಟ್ಟಿ ತಾತ್ಕಾಲಿಕ, ಉಳಿಯೋದು ಸಾಹಿತ್ಯ ಮಾತ್ರ : ಬಂಡಾಯ ಕವಿ ಡಾ.ಸಿದ್ಧಲಿಂಗಯ್ಯ

Update: 2019-12-07 16:10 GMT

ಉಡುಪಿ, ಡಿ.7: ದಲಿತ, ಬಂಡಾಯ ಮುಂತಾದ ಸಾಹಿತ್ಯಿಕ ಹಣೆಪಟ್ಟಿಗಳು ತಾತ್ಕಾಲಿಕ. ಕೊನೆಯಲ್ಲಿ ಉಳಿಯೋದು ನೀವು ಬರೆದ ಸಾಹಿತ್ಯ ಮಾತ್ರ. ಆದುದರಿಂದ ಜನರಲ್ಲಿ ಲವಲವಿಕೆ ಉಂಟುಮಾಡುವ ಸಾಹಿತ್ಯ ರಚನೆ ಆಗಬೇಕು ಎಂದು ಬಂಡಾಯ ಸಾಹಿತಿ, ಪ್ರಸಿದ್ಧ ಕವಿ, ಮಾನವತಾವಾದಿ ಡಾ. ಸಿದ್ಧಲಿಂಗಯ್ಯ ಹೇಳಿದ್ದಾರೆ.

ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಎಂಜಿಎಂ ಕಾಲೇಜು, ಕನ್ನಡ ಸಾಹಿತ್ಯ ಪರಿಷತ್ ಉಡುಪಿ, ಪಂಚಮಿ ಟ್ರಸ್ಟ್ ಉಡುಪಿ, ಸುಹಾಸಂ ಉಡುಪಿ ಹಾಗೂ ಪರ್ಕಳದ ವಿಟ್ಲ ಜೋಷಿ ಪ್ರತಿಷ್ಠಾನಗಳ ಸಹಯೋಗದಲ್ಲಿ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಇಂದು ಸಂಜೆ ಸಾಹಿತಿ, ನಾಟಕಾರ್ತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ಹನ್ನೊಂದು ಕೃತಿಗಳ ಲೋಕಾರ್ಪಣೆಗೊಳಿಸಿ ಅವರು ಮಾತನಾಡುತಿದ್ದರು.

ಮಾನವೀಯತೆಗೆ ಪಂಥಗಳ ಮಿತಿಯಿಲ್ಲ. ದಲಿತ ಬಂಡಾಯ ಸಾಹಿತಿಗಳೇ ಸಮಾನತೆಯ ಬಗ್ಗೆ ಮಾತನಾಡಬೇಕೆಂದಿಲ್ಲ. ಪಂಪನಿಂದ ಆದಿಯಾಗಿ ಎಲ್ಲಾ ಸಾಹಿತಿಗಳು ಈ ಬಗ್ಗೆ ಮಾತನಾಡುತ್ತಾ ಬಂದಿದ್ದಾರೆ. ಸಮಾನತೆಯ ಪ್ರತಿಪಾದನೆಗೆ ಪಂಥದ ಗಡಿಗೆರೆಗಳಿಲ್ಲ. ಕಾತ್ಯಾಯಿನಿ ಕೂಡಾ ಸಮಾನತೆಯ ಪ್ರತಿಪಾದನೆ ಮಾಡಿದ್ದಾರೆ. ಇದು ಸಾಹಿತ್ಯದ ಚಲನೆಯ ಧ್ಯೋತಕ. ಕಾವ್ಯಕ್ಕೆ ತನ್ನದೇ ವಿಶಿಷ್ಟತೆ ಇದೆ. ಮಾನವೀಯತೆ ಮತ್ತು ಖಚಿತವಾದ ವೈಚಾರಿಕತೆಯನ್ನು ಇದರಲ್ಲಿ ಕಾಣಬಹುದು. ಕವಿತೆಗೆ ತನ್ನದೇ ಶಕ್ತಿ ಇದೆ. ಕವಿಗಳು ಜವಾಬ್ದಾರಿ ಯುತವಾಗಿ ಲೇಖನಿ ಬಳಸಬೇಕು ಎಂದವರು ಕಿವಿಮಾತು ಹೇಳಿದರು.

ಬದುಕಿಗೆ ಬೇಕಾದ ಜಾಗೃತಿ ಮತ್ತು ಅರಿವು ಕೊಡುವ ಶಕ್ತಿ ಕಾವ್ಯಕ್ಕಿದೆ. ತುಳಸಿದಾಸರು ರಾಮಚರಿತ ಮಾನಸವನ್ನು ಬರೆಯುವಾಗ ಮಾಳಿಗೆ ಮೇಲೆ ಬರೀತಾ ಇದ್ರಂತೆ, ಆಂಜನೇಯನ ಪ್ರಸಂಗ ಬರೆಯುವಾಗ ಮಾಳಿಗೆಯಿಂದ ಹಾರಿದರಂತೆ... ಹೀಗೆ ಕವಿಗಳು ತಮ್ಮದೇ ಲೋಕದಲ್ಲಿ ಇರ್ತಾರೆ. ಕವಿಗಳ ಜಗತ್ತೇ ಸ್ವಾರಸ್ಯಕರವಾಗಿರುತ್ತೆ. ಹೀಗಾಗಿ ಕಾವ್ಯ ಮಾತ್ರವಲ್ಲ...ಕವಿಗಳ ಜೀವನದ ಸ್ವಾರಸ್ಯವ್ನು ಕೂಡಾ ಗ್ರಹಿಸಬೇಕು ಎಂದರು.

ಬದುಕಿಗೆ ಬೇಕಾದ ಜಾಗೃತಿ ಮತ್ತು ಅರಿವು ಕೊಡುವ ಶಕ್ತಿ ಕಾವ್ಯಕ್ಕಿದೆ. ತುಳಸಿದಾಸರು ರಾಮಚರಿತ ಮಾನಸವನ್ನು ಬರೆಯುವಾಗ ಮಾಳಿಗೆ ಮೇಲೆ ಬರೀತಾ ಇದ್ರಂತೆ, ಆಂಜನೇಯನ ಪ್ರಸಂಗ ಬರೆಯುವಾಗ ಮಾಳಿಗೆಯಿಂದ ಹಾರಿದರಂತೆ... ಹೀಗೆ ಕವಿಗಳು ತಮ್ಮದೇ ಲೋಕದಲ್ಲಿ ಇರ್ತಾರೆ. ಕವಿಗಳ ಜಗತ್ತೇ ಸ್ವಾರಸ್ಯಕರವಾಗಿರುತ್ತೆ. ಹೀಗಾಗಿ ಕಾವ್ಯ ಮಾತ್ರವಲ್ಲ...ಕವಿಗಳ ಜೀವನದ ಸ್ವಾರಸ್ಯವನ್ನು ಕೂಡಾ ಗ್ರಹಿಸಬೇಕು ಎಂದರು. ಕವಿಗಳ ಬದುಕಿನ ಸ್ವಾರಸ್ಯಕರ ವಿಚಾರಗಳು ದಾಖಲಾಗಬೇಕು. ಬದುಕು ಸಹ್ಯವಾಗಿಸುವ ಸಾಹಿತ್ಯ ರಚನೆಯಾಗಬೇಕು. ಸಮಾಜದ ವಿಕೃತಿ ಅಳಿಸಿ, ಸಮಾನತೆಯ ಸಮಾಜ ನಿರ್ಮಾಣಕ್ಕೆ ಸಾಹಿತಿಗಳು ಪ್ರಯತ್ನಿಸಬೇಕು ಎಂದ ದಲಿತರು ಬರುವರು ದಾರಿ ಬಿಡಿ ಎಂದು ತಮ್ಮ ಯೌವನದ ದಿನಗಳಲ್ಲಿ ಬರೆದ ಡಾ.ಸಿದ್ಧಲಿಂಗಯ್ಯ ನುಡಿದರು.

ಡಾ.ಸಿದ್ದಲಿಂಗಯ್ಯ ತಮ್ಮ ಮಾತಿನ ನಡುವೆ ಹಲವು ಸ್ವಾರಸ್ಯಕರ ಕತೆಗಳನ್ನು ಹೇಳಿ ಕೇಳುಗರನ್ನು ರಂಜಿಸಿದರು. ಗೆಳತಿ... ಓ.. ಗೆಳತಿ.. ಹಾಡು ಬರೆದದ್ದಕ್ಕೆ ಬಂಡಾಯ ಸಾಹಿತಿಗಳು ನನ್ನನ್ನು ವಿಚಾರಣೆ ಮಾಡಿದರು. ಆಮೇಲೆ ಕ್ಷಮೆ ಕೇಳುವ ಪರಿಸ್ಥಿತಿ ಬಂತು ಎಂದು ಅವರು ನೆನಪಿಸಿಕೊಂಡರು.

ಸಂಸ್ಕೃತಿ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅವರು ಕಾತ್ಯಾಯಿನಿ ಅವರ ಕಾಯಕಾವ್ಯ ಕವನ ಸಂಕಲನವನ್ನು ಪರಿಚಯಿಸಿದರೆ, ಬೆಂಗಳೂರಿನ ಸಾಹಿತಿ ಶೂದ್ರ ಶ್ರೀನಿವಾಸ ತೊಗಲುಗೊಂಬೆ ಕಾದಂಬರಿ, ರಂಗ ನಿರ್ದೇಶಕ ಗೋಪಾಲ ಕೃಷ್ಣ ನಾಯರಿ ಜೋಡಿ ಕಾಯಿ, ಪಗಡೆಹಾಸು ನಾಟಕ ಕೃತಿಗಳನ್ನು, ಬೆಂಗಳೂರಿನ ಲೇಖಕ ವಿಮರ್ಶಕ ಎಚ್.ದಂಡಪ್ಪ ತೀರದ ಹೆಜ್ಜೆ, ಅಕ್ಕಕೇಳವ್ವ ವಿಮರ್ಶಾ ಕೃತಿ, ಪಂಜೆ ಮಂಗೇಶರಾಯರು ವಾಚಿಕೆ ಕೃತಿ, ಬೆಂಗಳೂರಿನ ಕವಿ ಮುದಲ್ ವಿಜಯ್ ಅವರು ಜೀವ ವಿಹಂಗಮ ಕಥಾ ಸಂಕಲನ ಹಾಗೂ ಪಳಕಳ ಸೀತಾರಾಮ ಭಟ್ಟ ಬದುಕು ಬರಹ ಕೃತಿ ಮತ್ತು ಸಾಹಿತಿ ಡಾ.ನಿಕೇತನ ಅವರು ಗುಳಿಯಪ್ಪ, ಕೋರೆಹಲ್ಲು ಸಹಿತ ಮಕ್ಕಳ ಐದು ನಾಟಕ ಕೃತಿಗಳನ್ನು ಪರಿಚಯಿಸಿದರು.

ಮಣಿಪಾಲ ಅಕಾಡೆಮಿ ಆಪ್ ಜನರಲ್ ಎಜ್ಯುಕೇಷನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಂ ಅವರು ಅಧ್ಯಕ್ಷತೆ ವಹಿಸಿದ್ದರು. ಯು.ವಿಶ್ವನಾಥ ಶೆಣೈ ಉಪಸ್ಥಿತರಿದ್ದರು. ಪ್ರೊ.ಶಂಕರ್ ಸ್ವಾಗತಿಸಿದರೆ, ಶಿಲ್ಪಾ ಜೋಶಿ ಕಾರ್ಯಕ್ರಮ ನಿರೂಪಿಸಿದರು.

ಪುಸ್ತಕ ಬಿಡುಗಡೆ ಕಾರ್ಯಕ್ರಮದೊಂದಿಗೆ ಮಣಿಪಾಲದ ಪಂಡಿತ್ ರವಿಕಿರಣ್ ಇವರಿಂದ ಹಿಂದೂಸ್ತಾನಿ ಸಂಗೀತ ಹಾಗೂ ವೈದೇಹಿ ಅವರ ನಾಟಕ ‘ಕಮಲಾದೇವಿ ಚಟ್ಟೋಪಾಧ್ಯಾಯ-ಕೆಲವು ನೆನಹು’ ಭಾಗೀರತಿ ಬಾಯಿ ಇವರ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News