ಆದಿತ್ಯನಾಥ್ ಭೇಟಿ ನೀಡದೆ ಅಂತ್ಯಸಂಸ್ಕಾರವಿಲ್ಲ: ಉನ್ನಾವೊ ಸಂತ್ರಸ್ತೆಯ ಕುಟುಂಬದ ಆಕ್ರೋಶ

Update: 2019-12-08 08:22 GMT

ಲಕ್ನೋ: ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಕೊನೆಯುಸಿರೆಳೆದು ಎರಡು ದಿನ ಕಳೆದರೂ, ಆಕೆಯ ಶವಸಂಸ್ಕಾರಕ್ಕೆ ಸಂತ್ರಸ್ತೆಯ ಕುಟುಂಬ ನಿರಾಕರಿಸಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳನ್ನು ಗಲ್ಲಿಗೇರಿಸುವ ಭರವಸೆ ನೀಡಬೇಕು ಎಂದು ಕುಟುಂಬದವರು ಪಟ್ಟು ಹಿಡಿದಿದ್ದಾರೆ.

"ಆದಿತ್ಯನಾಥ್ ಇಲ್ಲಿಗೆ ಬರುವವರೆಗೂ ನಾವು ನಮ್ಮ ಸಹೋದರಿಯ ಅಂತ್ಯಸಂಸ್ಕಾರ ನೆರವೇರಿಸುವುದಿಲ್ಲ. ಆದಿತ್ಯನಾಥ್ ಜತೆಗೆ ನಾವು ವೈಯಕ್ತಿಕವಾಗಿ ಮಾತನಾಡಬೇಕಿದೆ" ಎಂದು ಸಂತ್ರಸ್ತೆಯ ಸಹೋದರಿ ಸ್ಪಷ್ಟಪಡಿಸಿದ್ದಾರೆ.

ಸಂತ್ರಸ್ತೆಯ ಅಂತ್ಯಸಂಸ್ಕಾರಕ್ಕೆ ಜಿಲ್ಲಾಡಳಿತ ಸಿದ್ಧತೆಗಳನ್ನು ನಡೆಸುತ್ತಿರುವ ಮಧ್ಯೆಯೇ, ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗದ ಭರವಸೆ ನೀಡದೇ ಶವಸಂಸ್ಕಾರ ನೆರವೇರಿಸುವುದಿಲ್ಲ ಎಂದು ಅವರು ಖಡಾಖಂಡಿತವಾಗಿ ಹೇಳಿದ್ದಾರೆ. ಆರೋಪಿಗಳಿಗೆ ತಕ್ಷಣ ಮರಣದಂಡನೆ ವಿಧಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

ಮರಣದಂಡನೆ ವಿಧಿಸುವುದು ನ್ಯಾಯಾಲಯದ ಕೆಲಸ ಎಂದು ಹೇಳಿದಾಗ, "ನ್ಯಾಯಾಲಯಕ್ಕೆ ಸುತ್ತಾಡುವುದು ಯಾರು?" ಎಂದು ಪ್ರಶ್ನಿಸಿದರು. ಬಿಗಿ ಭದ್ರತೆಯ ನಡುವೆ ಮೃತದೇಹವನ್ನು ಗ್ರಾಮಕ್ಕೆ ಶನಿವಾರ ಸಂಜೆ ತರಲಾಗಿದೆ. ಸಂತ್ರಸ್ತೆಯ ಸಾವನ್ನು ದುರದೃಷ್ಟಕರ ಎಂದು ಬಣ್ಣಿಸಿದ ಆದಿತ್ಯನಾಥ್, ಈ ಬಗ್ಗೆ ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದರು. ಸಂತ್ರಸ್ತೆಯ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News