ಅಜಿತ್ ಜೊತೆ ಮೈತ್ರಿ, ಶರದ್ ಪವಾರ್-ಮೋದಿ ಭೇಟಿ ಬಗ್ಗೆ ಕೊನೆಗೂ ಪ್ರತಿಕ್ರಿಯಿಸಿದ ಫಡ್ನವೀಸ್

Update: 2019-12-08 09:05 GMT

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಕೈಜೋಡಿಸಲು ಅಜಿತ್ ಪವಾರ್ ಸ್ವಂತ ನಿರ್ಧಾರದ ಮೇಲೆ ಆಗಮಿಸಿದ್ದರು. ಎನ್‍ ಸಿಪಿ ಮುಖಂಡ ಶರದ್ ಪವಾರ್ ಅವರಿಗೂ ಈ ನಡೆಯ ಬಗ್ಗೆ ಅರಿವು ಇದೆ ಎಂಬ ಭಾವನೆ ಮೂಡಿಸಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಶರದ್ ಪವಾರ್ ಅವರ ನಡುವೆ ನಡೆದ ಚರ್ಚೆಯ ಅಂಶಗಳನ್ನು ಅನುಕೂಲಕ್ಕೆ ತಕ್ಕಂತೆ ಪವಾರ್ ಬಹಿರಂಗಪಡಿಸಿದ್ದಾರೆ. ಉಳಿದ ಮಾಹಿತಿಯನ್ನು ಸೂಕ್ತ ಸಮಯದಲ್ಲಿ ಬಹಿರಂಗಪಡಿಸುವುದಾಗಿ ಫಡ್ನವೀಸ್ ಹೇಳಿದರು.

ಮರಾಠಿ ಸುದ್ದಿವಾಹಿನಿ ಝೀ 24 ಥಾಸ್‍ ಗೆ ನೀಡಿದ ಸಂದರ್ಶನದಲ್ಲಿ, "ಕಾಂಗ್ರೆಸ್ ಜತೆಗಿನ ಮೈತ್ರಿ ಸಾಧ್ಯವಿಲ್ಲ ಎಂಬ ಕಾರಣದಿಂದ ಬಹುತೇಕ ಎನ್‍ಸಿಪಿ ಸದಸ್ಯರು ಬಿಜೆಪಿ ಜತೆ ಹೋಗಲು ಬಯಸಿದ್ದಾರೆ ಎಂದು ಅಜಿತ್ ಪವಾರ್ ಹೇಳಿದ್ದರು. ಫಲಿತಾಂಶ ಬಂದು ತಿಂಗಳ ಬಳಿಕ ಕೂಡಾ ಅಜಿತ್ ಪವಾರ್ ಆಗಮಿಸುವವರೆಗೆ ಶಾಸಕರ ಖರೀದಿಗೆ ಅಥವಾ ಪಕ್ಷದ ವಿಭಜನೆಗೆ ನಾವು ಕೈಹಾಕಲಿಲ್ಲ. ನವೆಂಬರ್ 23ರಂದು ಪ್ರಮಾಣವಚನ ಸ್ವೀಕರಿಸುವ ಕೆಲ ದಿನಗಳ ಮೊದಲು ಬಂದ ಅಜಿತ್, ಪಕ್ಷದ ಎಲ್ಲ ಸದಸ್ಯರು ನಮ್ಮೊಂದಿಗೆ ಕೈಜೋಡಿಸಲು ಸಿದ್ಧರಿದ್ದಾರೆ ಎಂದು ಹೇಳಿದ್ದರು. ಕೆಲ ಶಾಸಕರನ್ನು ನಮ್ಮೊಂದಿಗೆ ಮಾತನಾಡಿಸಿದರು. ಈ ನಡೆಯ ಬಗ್ಗೆ ಶರದ್ ಪವಾರ್ ಅವರಿಗೂ ಅರಿವು ಇದೆ ಎಂದು ತಿಳಿಸಿದರು. ಇದು ಒಂದು ಬಗೆಯ ಜೂಜು ಎಂದು ನಮಗೆ ತಿಳಿದಿತ್ತು. ಆದರೆ ರಾಜಕೀಯದಲ್ಲಿ ಜೂಜು ಅನಿವಾರ್ಯ. ಈ ಬಾರಿ ಅದರಲ್ಲಿ ಸೋತೆವು" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News