ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಈ ವಾರ ‘ರೊಹಿಂಗ್ಯಾ ಜನಾಂಗೀಯ ನಿರ್ಮೂಲನ’ ಮೊಕದ್ದಮೆ ವಿಚಾರಣೆ

Update: 2019-12-08 14:55 GMT

ದ ಹೇಗ್ (ನೆದರ್‌ಲ್ಯಾಂಡ್ಸ್), ಡಿ. 8: ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮ್ ಅಲ್ಪಸಂಖ್ಯಾತರ ಜನಾಂಗೀಯ ನಿರ್ಮೂಲನ ನಡೆಸಲಾಗುತ್ತಿದೆ ಎಂದು ಆರೋಪಿಸುವ ಮೊಕದ್ದಮೆಯ ವಿಚಾರಣೆಯು ನೆದರ್‌ ಲ್ಯಾಂಡ್ಸ್‌ನ ದ ಹೇಗ್‌ನಲ್ಲಿರುವ ಅಂತರ್‌ರಾಷ್ಟ್ರೀಯ ನ್ಯಾಯಾಲಯದಲ್ಲಿ ಈ ವಾರ ವಿಚಾರಣೆಗೆ ಬರಲಿದೆ.

ಈ ವಿಚಾರಣೆಯ ವೇಳೆ ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂ ಕಿ ಸ್ವತಃ ಮುಂದೆ ನಿಂತು ತನ್ನ ದೇಶವನ್ನು ಸಮರ್ಥಿಸಿಕೊಳ್ಳಲಿದ್ದಾರೆ ಹಾಗೂ ಈ ಮೂಲಕ ಅವರು ಹೊಸ ಇತಿಹಾಸವೊಂದನ್ನು ಸೃಷ್ಟಿಸಲಿದ್ದಾರೆ.

57 ದೇಶಗಳ ಸಂಘಟನೆ ಇಸ್ಲಾಮಿಕ್ ಸಹಕಾರ ಸಂಘಟನೆ (ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಪರೇಶನ್)ಯ ಪರವಾಗಿ ಪಶ್ಚಿಮ ಆಫ್ರಿಕದ ಸಣ್ಣ ದೇಶ ಗ್ಯಾಂಬಿಯ ಅಂತರ್‌ರಾಷ್ಟ್ರೀಯ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸುತ್ತಿದೆ. ಮ್ಯಾನ್ಮಾರ್‌ನ ‘‘ಚಾಲ್ತಿಯಲ್ಲಿರುವ ಜನಾಂಗೀಯ ಹತ್ಯೆ ಕೃತ್ಯಗಳನ್ನು’’ ನಿಲ್ಲಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಗ್ಯಾಂಬಿಯ ದೇಶವು ತನ್ನ ಮೊಕದ್ದಮೆಯಲ್ಲಿ ನ್ಯಾಯಾಲಯವನ್ನು ಒತ್ತಾಯಿಸಿದೆ.

ಆದರೆ, ಅತ್ಯಂತ ಅಸಹಜ ಕ್ರಮವೊಂದರಲ್ಲಿ, ವಿಶ್ವಸಂಸ್ಥೆಯ ಅತ್ಯುನ್ನತ ನ್ಯಾಯಾಲಯದಲ್ಲಿ ಮ್ಯಾನ್ಮಾರನ್ನು ಸಮರ್ಥಿಸುವ ತಂಡದ ನೇತೃತ್ವವನ್ನು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಹಾಗೂ ದೇಶದ ನಾಗರಿಕ ಆಡಳಿತದ ಮುಖ್ಯಸ್ಥೆ ಆಂಗ್ ಸಾನ್ ಸೂ ಕಿ ಸ್ವತಃ ವಹಿಸಲಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.

1946ರಲ್ಲಿ, ಎರಡನೇ ಮಹಾಯುದ್ಧದ ಬಳಿಕ, ದೇಶಗಳ ನಡುವಿನ ವಿವಾದಗಳನ್ನು ಇತ್ಯರ್ಥಪಡಿಸಲು ಅಂತರ್‌ರಾಷ್ಟ್ರೀಯ ನ್ಯಾಯಾಲಯದ ಸ್ಥಾಪನೆಯಾದ ಬಳಿಕ, ದೇಶದ ಮುಖ್ಯಸ್ಥರೊಬ್ಬರು ತನ್ನ ದೇಶದ ಪರವಾಗಿ ಸ್ವತಃ ನ್ಯಾಯಾಲಯದಲ್ಲಿ ಹಾಜರಿರುವುದು ಇದೇ ಮೊದಲ ಬಾರಿಯಾಗಿದೆ ಎಂದು ಕಾನೂನು ಪಂಡಿತರು ಹೇಳುತ್ತಾರೆ.

ಪ್ರಕರಣದ ವಿಚಾರಣೆಯು ಮಂಗಳವಾರ ಆರಂಭವಾಗಿ ಮೂರು ದಿನಗಳ ಕಾಲ ನಡೆಯುತ್ತದೆ.

2017ರಲ್ಲಿ ಮ್ಯಾನ್ಮಾರ್ ಸೇನೆಯು ರೊಹಿಂಗ್ಯಾ ಮುಸ್ಲಿಮರ ವಿರುದ್ಧ ನಡೆಸಿದ ದಮನ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ, ಸುಮಾರು 7.5 ಲಕ್ಷ ರೊಹಿಂಗ್ಯಾ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದು ಅಲ್ಲಿನ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.

 ‘ಅಭೂತಪೂರ್ವ ಹಾಗೂ ಅವಿವೇಕದ ನಡೆ’

ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಸ್ವತಃ ಹಾಜರಾಗುವ ಆಂಗ್ ಸಾನ್ ಸೂ ಕಿಯ ನಡೆ ‘ಅಭೂತಪೂರ್ವ ಹಾಗೂ ಅತ್ಯಂತ ಅವಿವೇಕತನದಿಂದ ಕೂಡಿದೆ’ ಎಂದು ಲೈಡನ್ ವಿಶ್ವವಿದ್ಯಾನಿಲಯದಲ್ಲಿ ಅಂತರ್‌ರಾಷ್ಟ್ರೀಯ ಕಾನೂನಿನ ಸಹಾಯಕ ಪ್ರೊಫೆಸರ್ ಆಗಿರುವ ಸಿಸಿಲಿ ರೋಸ್ ಹೇಳುತ್ತಾರೆ.

‘‘ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಕಾನೂನು ತಂಡಗಳ ಮುಖ್ಯಸ್ಥರಾಗಿ ದೇಶಗಳು ಯಾವತ್ತೂ ರಾಜಕಾರಣಿಗಳನ್ನು ಕಳುಹಿಸಿಲ್ಲ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News