ದಿಗ್ಬಂಧನಗಳ ವಿರುದ್ಧ ‘ಪ್ರತಿರೋಧದ ಬಜೆಟ್’ ಮಂಡಿಸಿದ ಇರಾನ್

Update: 2019-12-08 15:04 GMT

ಟೆಹರಾನ್, ಡಿ. 8: ಇರಾನ್ ಅಧ್ಯಕ್ಷ ಹಸನ್ ರೂಹಾನಿ ರವಿವಾರ ಸಂಸತ್ತಿನಲ್ಲಿ, ‘‘ಬದ್ಧ ಶತ್ರು ಅಮೆರಿಕ ವಿಧಿಸಿರುವ ಕಠಿಣ ದಿಗ್ಬಂಧನಗಳ ವಿರುದ್ಧ ಪ್ರತಿರೋಧದ ಬಜೆಟ್’’ ಮಂಡಿಸಿದರು.

‘‘ಈ ವರ್ಷದಂತೆ ಮುಂದಿನ ವರ್ಷವೂ ನಮ್ಮ ಬಜೆಟ್, ದಿಗ್ಬಂಧನಗಳ ವಿರುದ್ಧದ ಪ್ರತಿರೋಧದ ಮತ್ತು ಪರಿಶ್ರಮದ ಬಜೆಟ್ ಆಗಿರುತ್ತದೆ’’ ಎಂದು ಸಂಸತ್ತಿನಲ್ಲಿ ಮಾತನಾಡಿದ ರೂಹಾನಿ ಹೇಳಿದರು.

‘‘ದಿಗ್ಬಂಧನಗಳ ಹೊರತಾಗಿಯೂ, ನಾವು ದೇಶವನ್ನು ನಿಭಾಯಿಸುತ್ತೇವೆ ಎನ್ನುವುದನ್ನು ಈ ಬಜೆಟ್ ಜಗತ್ತಿಗೆ ಘೋಷಿಸುತ್ತದೆ’’ ಎಂದು ಅವರು ನುಡಿದರು.

ನವೆಂಬರ್ ಮಧ್ಯ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ತೈಲ ಬೆಲೆ ಏರಿಕೆ ಮಾಡಿದ ಬಳಿಕ, 2020ರ ಸಾಲಿನ ಈ ಬಜೆಟನ್ನು ಮಂಡಿಸಲಾಗಿದೆ. ತೈಲ ಬೆಲೆ ಏರಿಕೆಯನ್ನು ವಿರೋಧಿಸಿ ಇರಾನ್‌ನಾದ್ಯಂತ ಹಿಂಸಾತ್ಮಕ ಪ್ರತಿಭಟನೆ ನಡೆದಿದ್ದು, ಪೊಲೀಸ್ ಗೋಲಿಬಾರಿನಲ್ಲಿ ನೂರಾರು ಪ್ರತಿಭಟನಕಾರರು ಮೃತಪಟ್ಟಿದ್ದಾರೆ.

ಅಮೆರಿಕದ ಕಠಿಣ ಆರ್ಥಿಕ ದಿಗ್ಬಂಧನಗಳಿಂದಾಗಿ ಇರಾನ್‌ನ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ.

ಇರಾನ್‌ನ ಆರ್ಥಿಕತೆ ಈ ವರ್ಷ 9.5 ಶೇಕಡದಷ್ಟು ಕುಗ್ಗಲಿದೆ ಎಂದು ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಭವಿಷ್ಯ ನುಡಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News