ಇಸ್ರೇಲ್‌ನತ್ತ ರಾಕೆಟ್; ಗಾಝಾ ಪಟ್ಟಿಯ ಮೇಲೆ ವೈಮಾನಿಕ ದಾಳಿ

Update: 2019-12-08 15:25 GMT
    ಸಾಂದರ್ಭಿಕ ಚಿತ್ರ

ಗಾಝಾ ಸಿಟಿ (ಫೆಲೆಸ್ತೀನ್ ಭೂಪ್ರದೇಶ), ಡಿ. 8: ಇಸ್ರೇಲ್ ಯುದ್ಧ ವಿಮಾನಗಳು ರವಿವಾರ ಮುಂಜಾನೆ ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯ ಮೇಲೆ ದಾಳಿ ನಡೆಸಿದವು ಎಂದು ಫೆಲೆಸ್ತೀನ್‌ನ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.

ಗಾಝಾ ಪಟ್ಟಿಯಿಂದ ಇಸ್ರೇಲ್‌ನತ್ತ ಮೂರು ರಾಕೆಟ್‌ಗಳು ಹಾರಿದ ಗಂಟೆಗಳ ಬಳಿಕ ಈ ದಾಳಿ ನಡೆಯಿತು.

ಹಮಾಸ್‌ನ ಸೇನಾ ಘಟಕ ಅಲ್-ಖಾಸಮ್ ಬ್ರಿಗೇಡ್ಸ್‌ಗೆ ಸೇರಿದ, ಉತ್ತರ ಗಾಝಾದಲ್ಲಿರುವ ಎರಡು ನೆಲೆಗಳ ಮೇಲೆ ದಾಳಿಗಳು ನಡೆದವು. ಅದೇ ವೇಳೆ, ಗಾಝಾ ಸಿಟಿಯ ಪಶ್ಚಿಮದಲ್ಲಿರುವ ಖಾಸಮ್‌ನಲ್ಲಿರುವ ನೆಲೆಯೊಂದರ ಮೇಲೆ ಇಸ್ರೇಲ್‌ನ ಯುದ್ಧ ವಿಮಾನಗಳು ಹಲವು ಸುತ್ತು ಗಿರಕಿ ಹೊಡೆದವು ಎಂದು ಹಮಾಸ್ ಅಧಿಕಾರಿಗಳು ತಿಳಿಸಿದರು.

ಸಾವು-ನೋವುಗಳ ಬಗ್ಗೆ ತಕ್ಷಣಕ್ಕೆ ವರದಿಗಳು ಬಂದಿಲ್ಲ.

ಶನಿವಾರ ರಾತ್ರಿ, ಗಾಝಾದಲ್ಲಿರುವ ಫೆಲೆಸ್ತೀನ್ ಬಂಡುಕೋರರು ದಕ್ಷಿಣ ಇಸ್ರೇಲ್‌ನತ್ತ ಮೂರು ರಾಕೆಟ್‌ಗಳನ್ನು ಹಾರಿಸಿದ್ದಾರೆ ಎನ್ನಲಾಗಿದೆ. ಅವುಗಳನ್ನು ಅಯರ್ನ್ ಡೋಮ್ ರಕ್ಷಣಾ ವ್ಯವಸ್ಥೆಯ ಕ್ಷಿಪಣಿಗಳು ಮಧ್ಯದಲ್ಲೇ ತಡೆದವು ಎಂದು ಇಸ್ರೇಲ್ ಸೇನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News