ಧರ್ಮದ ಆಧಾರದಲ್ಲಿ ಪೌರತ್ವ ಕಲ್ಪಿಸಿದರೆ ಭಾರತ ‘ಹಿಂದೂ ಪಾಕಿಸ್ತಾನ’ವಾಗಲಿದೆ: ಶಶಿ ತರೂರ್

Update: 2019-12-19 06:41 GMT
Photo: PTI

ಹೊಸದಿಲ್ಲಿ, ಡಿ.9: ಧರ್ಮದ ಆಧಾರದಲ್ಲಿ ಪೌರತ್ವವನ್ನು ನೀಡುವ ಪ್ರಕ್ರಿಯೆಯು ಭಾರತವನ್ನು ‘ಹಿಂದೂ ಪಾಕಿಸ್ತಾನ’ವನ್ನಾಗಿಸಲಿದೆ. ಪೌರತ್ವ(ತಿದ್ದುಪಡಿ) ಮಸೂದೆ ಸಂಸತ್ತಿನಲ್ಲಿ ಅಂಗೀಕೃತವಾದರೆ ಅದು ಮಹಾತ್ಮಾ ಗಾಂಧಿಯವರ ಚಿಂತನೆಯ ಎದುರು ಮುಹಮ್ಮದ್ ಆಲಿ ಜಿನ್ನಾರ ಚಿಂತನೆಗೆ ಸಲ್ಲುವ ಜಯವಾಗಲಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಸರಕಾರ ಒಂದು ಸಮುದಾಯವನ್ನು ಏಕಾಂಗಿಯನ್ನಾಗಿಸಲು ಬಯಸುತ್ತಿದೆ. ಇತರ ಧರ್ಮದ ನಿರಾಶ್ರಿತರಂತೆಯೇ ದೌರ್ಜನ್ಯಕ್ಕೆ ಒಳಗಾಗಿದ್ದರೂ ಈ ಸಮುದಾಯದ ನಿರಾಶ್ರಿತರಿಗೆ ಪೌರತ್ವ ನೀಡಲು ಸರಕಾರ ನಿರಾಕರಿಸುತ್ತಿದೆ. ಒಂದು ವೇಳೆ ಸಂಸತ್ತಿನ ಎರಡೂ ಸದನಗಳಲ್ಲಿ ಸರಕಾರ ಮಸೂದೆಗೆ ಅನುಮೋದನೆ ಪಡೆಯಲು ಯಶಸ್ವಿಯಾದರೂ , ಸುಪ್ರೀಂಕೋರ್ಟ್‌ನ ಯಾವುದೇ ನ್ಯಾಯಪೀಠವು ಭಾರತದ ಸಂವಿಧಾನದ ಮೂಲಭೂತ ಸಿದ್ಧಾಂತಗಳನ್ನು ಈ ರೀತಿ ನಿರ್ಲಜ್ಜವಾಗಿ ಉಲ್ಲಂಘಿಸುವುದಕ್ಕೆ ಆಸ್ಪದ ನೀಡದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಆಶ್ರಯ ನೀತಿಯನ್ನು ರಚಿಸುವ ಕುರಿತು ಯಾವುದೇ ಚರ್ಚೆ ನಡೆಸಲು ಕಳೆದ ವರ್ಷ ನಿರಾಕರಿಸಿದ್ದ ಕೇಂದ್ರ ಸರಕಾರ ಇದೀಗ ಈ ರೀತಿಯ ಲಜ್ಜೆಗೆಟ್ಟ ಪ್ರಕ್ರಿಯೆಗೆ ಮುಂದಾಗಿದೆ. ಈಗ ಏಕಾಏಕಿ ಸರಕಾರ ನಿರಾಶ್ರಿತರಿಗೆ ಪೌರತ್ವ ಕಲ್ಪಿಸಲು ಮುಂದಾಗಿದೆ. ಆದರೆ ವಾಸ್ತವವಾಗಿ, ನಿರಾಶ್ರಿತರ ಸ್ಥಾನಮಾನವನ್ನು ಸುಧಾರಿಸುವ ನಿಟ್ಟಿನಲ್ಲಿ ಅಥವಾ ನಿರಾಶ್ರಿತರೊಡನೆ ಯೋಗ್ಯ ರೀತಿಯಲ್ಲಿ ವರ್ತಿಸುವ ಬಗ್ಗೆ (ಅಂತರಾಷ್ಟ್ರೀಯ ಕಾನೂನಿನಲ್ಲಿ ತಿಳಿಸಿರುವಂತೆ) ಸರಕಾರ ಪ್ರಾಥಮಿಕ ಕ್ರಮಗಳನ್ನೇ ಕೈಗೊಂಡಿಲ್ಲ ಎಂದು ತರೂರ್ ಹೇಳಿದರು.

ಮಸೂದೆಯ ಬಗ್ಗೆ ಕಾಂಗ್ರೆಸ್‌ನ ನಿಲುವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತಾನು ಪಕ್ಷದ ಅಧಿಕೃತ ವಕ್ತಾರನಲ್ಲವಾದರೂ, ಪಕ್ಷದ ಎಲ್ಲಾ ಸದಸ್ಯರೂ ಇದನ್ನು ವಿರೋಧಿಸುತ್ತಾರೆ ಎಂಬ ವಿಶ್ವಾಸ ತನಗಿದೆ. ಇದು ಸಂವಿಧಾನದ 14 ಮತ್ತು 15ನೇ ಪರಿಚ್ಛೇದಲ್ಲಿ ತಿಳಿಸಿರುವ ಸಮಾನತೆ ಮತ್ತು ಧಾರ್ಮಿಕ ತಾರತಮ್ಯರಹಿತ ವರ್ತನೆಯ ಸ್ಪಷ್ಟ ಮತ್ತು ನಿರ್ಲಜ್ಜ ಉಲ್ಲಂಘನೆಯಾಗಿದ್ದು ಭಾರತದ ಕಲ್ಪನೆಯ ಮೇಲೆ ನಡೆಸಿರುವ ಮಾರಕ ಆಕ್ರಮಣವಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News