ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ಸೋಲು

Update: 2019-12-08 18:15 GMT

ಕ್ಯಾನ್‌ಬೆರಾ, ಡಿ.8: ತ್ರಿರಾಷ್ಟ್ರಗಳ ಹಾಕಿ ಟೂರ್ನಮೆಂಟ್‌ನ ನಾಲ್ಕನೇ ಪಂದ್ಯದಲ್ಲಿ ಭಾರತೀಯ ಜೂನಿಯರ್ ಮಹಿಳಾ ಹಾಕಿ ತಂಡ ಆಸ್ಟ್ರೇಲಿಯ ವಿರುದ್ಧ 1-2 ಅಂತರದಿಂದ ಸೋಲನುಭವಿಸಿದೆ. ಟೂರ್ನಿಯಲ್ಲಿ ಮೊದಲ ಸೋಲು ಕಂಡ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಭಾರತ ನಾಲ್ಕು ಪಂದ್ಯಗಳಲ್ಲಿ ಏಳು ಅಂಕವನ್ನು ಗಳಿಸಿದೆ. ಗೋಲು ವ್ಯತ್ಯಾಸದಲ್ಲಿ ಆತಿಥೇಯ ಆಸ್ಟ್ರೇಲಿಯಗಿಂತ ಮುಂದಿದೆ. ನಾಲ್ಕು ಪಂದ್ಯಗಳಲ್ಲಿ ಕೇವಲ ಮೂರು ಅಂಕಗಳನ್ನು ಗಳಿಸಿರುವ ನ್ಯೂಝಿಲ್ಯಾಂಡ್ ಮೂರನೇ ಸ್ಥಾನದಲ್ಲಿದೆ.

 ರವಿವಾರ ನಡೆದ ನಾಲ್ಕನೇ ಹಾಗೂ ಅಂತಿಮ ಪಂದ್ಯದಲ್ಲಿ ಗಗನ್‌ದೀಪ್ ಕೌರ್ 53ನೇ ನಿಮಿಷದಲ್ಲಿ ಭಾರತದ ಪರ ಏಕೈಕ ಗೋಲು ಗಳಿಸಿ 1-1ರಿಂದ ಸಮಬಲ ಸಾಧಿಸಿದರು. 15ನೇ ನಿಮಿಷದಲ್ಲಿ ಗೋಲು ಗಳಿಸಿದ ಅಬಿಗೈಲ್ ವಿಲ್ಸನ್ ಆಸ್ಟ್ರೇಲಿಯಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟಿದ್ದರು.

ಆಸ್ಟ್ರೇಲಿಯದ ವಿಲ್ಸನ್ 56ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿ ತನ್ನ ತಂಡಕ್ಕೆ 2-1 ಅಂತರದ ಗೆಲುವು ತಂದುಕೊಟ್ಟರು.

ಭಾರತೀಯ ತಂಡ ಆರಂಭದಲ್ಲಿ ಕಠಿಣ ಪರಿಸ್ಥಿತಿ ಎದುರಿಸಿದ್ದು, ಆತಿಥೇಯರಿಂದ ನಿರಂತರವಾಗಿ ಒತ್ತಡ ಎದುರಿಸಿತು. 15ನೇ ನಿಮಿಷದಲ್ಲಿ ಆಸ್ಟ್ರೇಲಿಯಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿದ್ದು, ಇದನ್ನು ಗೋಲಾಗಿ ಪರಿವರ್ತಿಸಲು ವಿಲ್ಸನ್ ಯಶಸ್ವಿಯಾದರು.ಪರಿಣಾಮವಾಗಿ ಆತಿಥೇಯ ತಂಡ 1-0 ಮುನ್ನಡೆ ದಾಖಲಿಸಿತು. ಭಾರತ ಎರಡನೇ ಕ್ವಾರ್ಟರ್‌ನಲ್ಲಿ ಪ್ರತಿರೋಧ ಒಡ್ಡಲು ಯತ್ನಿಸಿತು. ಆದರೆ ಆತಿಥೇಯ ತಂಡ ಇದಕ್ಕೆ ಅವಕಾಶ ನೀಡಲಿಲ್ಲ. ಪ್ರವಾಸಿಗರಿಗೆ ಸಮಬಲ ಸಾಧಿಸಲು ಸಾಧ್ಯವಾಗಲಿಲ್ಲ.

ಭಾರತ ತಂಡ 22ನೇ ನಿಮಿಷದಲ್ಲಿ ಪೆನಾಲ್ಟಿಕಾರ್ನರ್ ಅವಕಾಶ ಪಡೆದಿದ್ದರೂ ಪ್ರಯೋಜನವಾಗಲಿಲ್ಲ. 26ನೇ ನಿಮಿಷದಲ್ಲಿ ಭಾರತ ಮತ್ತೊಂದು ಪೆನಾಲ್ಟಿಕಾರ್ನರ್ ಅವಕಾಶ ಪಡೆದಿತ್ತು. ಆದರೆ, ಗೋಲನ್ನು ನಿರಾಕರಿಸಿದ ಆಸ್ಟ್ರೇಲಿಯದ ಹನ್ನಾಹ್ ಅಸ್ಟಬರಿ ತನ್ನ ತಂಡ 1-0 ಮುನ್ನಡೆ ಕಾಯ್ದುಕೊಳ್ಳಲು ನೆರವಾದರು.

 ಎರಡು ನಿಮಿಷಗಳ ಬಳಿಕ ಆಸ್ಟ್ರೇಲಿಯ ಎರಡು ಬಾರಿ ಪೆನಾಲ್ಟಿ ಸ್ಟ್ರೋಕ್ ಮೂಲಕ ಎರಡು ಗೋಲುಗಳನ್ನು ಗಳಿಸುವ ಅಪೂರ್ವ ಅವಕಾಶ ಪಡೆದಿತ್ತು. ಆದರೆ, ಗೋಲ್‌ಕೀಪರ್ ಬಿಚು ದೇವಿ ಖರಿಬಮ್ ಗೋಲನ್ನು ನಿರಾಕರಿಸುವುದರೊಂದಿಗೆ ಆಸೀಸ್‌ದ ಮುನ್ನಡೆಗೆ ತಡೆಯೊಡ್ಡಿದರು. ನಾಲ್ಕನೇ ಕ್ವಾರ್ಟರ್‌ನ 53ನೇ ನಿಮಿಷದಲ್ಲಿ ಭಾರತ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿದ್ದು ಗಗನ್‌ದೀಪ್ ಕೌರ್ ಭಾರತ ಸಮಬಲ ಸಾಧಿಸಲು ನೆರವಾದರು. ಆಸ್ಟ್ರೇಲಿಯದ ಅಬಿಗೈಲ್ ವಿಲ್ಸನ್ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಪಂದ್ಯದಲ್ಲಿ ಎರಡನೇ ಗೋಲು ಗಳಿಸಿ 2-1 ಅಂತರದಿಂದ ಗೆಲುವು ತಂದುಕೊಟ್ಟರು. ಭಾರತ ಉಳಿದ 4 ನಿಮಿಷಗಳ ಆಟದಲ್ಲಿ ಸಮಬಲ ಸಾಧಿಸಲು ಹೋರಾಟ ನಡೆಸಿತು. ಅಂತಿಮವಾಗಿ ಆಸ್ಟ್ರೇಲಿಯ 2-1 ಅಂತರದಿಂದ ಜಯ ಸಾಧಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News