ಪಾಕಿಸ್ತಾನದ ಕ್ರೀಡಾಪಟುವಿಗೆ ಭಾರತದ ಅಥ್ಲೆಟಿಕ್ಸ್ ಒಕೂ್ಕಟ ಅಭಿನಂದನೆ!

Update: 2019-12-08 18:19 GMT

ಹೊಸದಿಲ್ಲಿ, ಡಿ.8: ದಕ್ಷಿಣ ಏಶ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಜಯಿಸಿದ್ದಲ್ಲದೆ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್‌ಗೆ ಭಾರತದ ಅಥ್ಲೆಟಿಕ್ಸ್ ಒಕ್ಕೂಟ ಟ್ವಿಟರ್‌ನ ಮೂಲಕ ಅಭಿನಂದನೆ ಸಲ್ಲಿಸುವ ಮೂಲಕ ಶ್ಲಾಘನೆ ವ್ಯಕ್ತಪಡಿಸಿದ್ದು, ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.

86.48 ಮೀ.ದೂರಕ್ಕೆ ಜಾವೆಲಿನ್ ಎಸೆದು ಪಾಕಿಸ್ತಾನದ ಪರ ನೂತನ ದಾಖಲೆ ನಿರ್ಮಿಸುವ ಮೂಲಕ ದಕ್ಷಿಣ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿ, 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಅರ್ಷದ್ ನದೀಮ್‌ಗೆ ಅಭಿನಂದನೆಗಳು. ಅರ್ಷದ್ ದಶಕಗಳ ಬಳಿಕ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆದಿರುವ ಪಾಕ್‌ನ ಮೊದಲ ಅಥ್ಲೀಟ್ ಆಗಿದ್ದಾರೆ ಎಂದು ಭಾರತದ ಅಥ್ಲೆಟಿಕ್ಸ್ ಫೆಡರೇಶನ್ ಶನಿವಾರ ಟ್ವೀಟ್ ಮಾಡಿದೆ. ಟ್ವೀಟ್‌ನ ಜೊತೆಗೆ ಅರ್ಷದ್ ನದೀಮ್ ಹಾಗೂ ಭಾರತದ ಜಾವೆಲಿನ್ ಸ್ಟಾರ್ ನೀರಜ್ ಚೋಪ್ರಾ ಒಟ್ಟಿಗಿರುವ ಚಿತ್ರವನ್ನು ಹಾಕಿದೆ.

 ನೇಪಾಳದಲ್ಲಿ ನಡೆದ ದಕ್ಷಿಣ ಏಶ್ಯನ್ ಗೇಮ್ಸ್ ನಲ್ಲಿ ನದೀಂ ಚಿನ್ನದ ಪದಕ ಜಯಿಸಿದರೆ, ಭಾರತದ ಶಿವಪಾಲ್ ಸಿಂಗ್ ಬೆಳ್ಳಿ ಪದಕವನ್ನು ಜಯಿಸುವ ಮೂಲಕ ಮುಂದಿನ ವರ್ಷ ಟೋಕಿಯೊದಲ್ಲಿ ನಡೆಯುವ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆದಿದ್ದಾರೆ. ಅಮೋಘ ಸಾಧನೆ ಮಾಡಿದ ಪಾಕಿಸ್ತಾನದ ಅಥ್ಲೀಟ್‌ಗೆ ಶುಭಾಶಯ ಕೋರಿದ ಭಾರತದ ಅಥ್ಲೆಟಿಕ್ಸ್ ಫೆಡರೇಶನ್ ಎಲ್ಲರ ಗಮನ ಸೆಳೆದಿದ್ದು, ಶ್ಲಾಘನೆಗೂ ಒಳಗಾಗಿದೆ.

ಈ ಟ್ವೀಟ್ ನಿಜವಾಗಿಯೂ ಪ್ರೀತಿ ಹಾಗೂ ಶಾಂತಿಯ ಸಂದೇಶವಾಗಿದೆ ಎಂದು ಓರ್ವ ಟ್ವೀಟ್‌ಬಳಕೆದಾರ ಹೇಳಿದರೆ, ನಿಮ್ಮ ಪೇಜ್‌ನಲ್ಲಿ ಇಂತಹ ಪೋಸ್ಟ್ ಬಂದಿರುವುದನ್ನು ನೋಡಿ ನಿಜಕ್ಕೂ ಸಂತೋಷವಾಗಿದೆ... ಪಾಕಿಸ್ತಾನದ ಪರವಾಗಿ ಧನ್ಯವಾದಗಳು ಎಂದು ಇನ್ನೋರ್ವ ಟ್ವೀಟ್ ಬಳಕೆದಾರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News