ಮಂಗಳೂರು : ಬಾಲಕಿಗೆ ಲೈಂಗಿಕ ದೌರ್ಜನ್ಯ ; ಯುವಕನಿಗೆ ಐದು ವರ್ಷ ಜೈಲು

Update: 2019-12-09 13:11 GMT

ಮಂಗಳೂರು, ಡಿ. 9: ಅಸ್ಸಾಂ ಮೂಲದ, ಬೈಕಂಪಾಡಿಯಲ್ಲಿ ವಾಸಿಸುವ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಯುವಕನಿಗೆ ಮಂಗಳೂರಿನ ಪೋಕ್ಸೋ ವಿಶೇಷ ನ್ಯಾಯಾಲಯ ಐದು ವರ್ಷ ಸಜೆ ವಿಧಿಸಿ ತೀರ್ಪು ನೀಡಿದೆ.

ಅಸ್ಸಾಂನ ಹಜಾರಿಗ್ರಾಂ ಮೂಲದ, ಬಾಲಕಿ ವಾಸಿಸುತ್ತಿದ್ದ ಪಕ್ಕದ ಮನೆಯಲ್ಲಿದ್ದ ಅತೀಕ್ ಉರ್ ರಹ್ಮಾನ್ ಲಷ್ಕರ್(28) ಶಿಕ್ಷೆಗೊಳಗಾದ ಆರೋಪಿ.

ಬೈಕಂಪಾಡಿಯ ಅಂಗರಗುಂಡಿ ಬಳಿ ಆರು ವರ್ಷದ ಬಾಲಕಿ ತನ್ನ ಹೆತ್ತವರೊಂದಿದ್ದು ಅತೀಕ್ ಪಕ್ಕದ ಮನೆಯಲ್ಲಿ ಬಾಡಿಗೆಗೆ ಇದ್ದ. 2018ರ ಜೂನ್ 24ರಂದು ಸಂಜೆ ಆತ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಇದನ್ನು ಬಾಲಕಿ ತನ್ನ ತಂದೆಗೆ ತಿಳಿಸಿದ್ದು, ಅವರು ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಅದರಂತೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿತ್ತು. ಇನ್‌ಸ್ಪೆಕ್ಟರ್ ಉಮೇಶ್ ಕುಮಾರ್ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಒಟ್ಟು 25 ಸಾಕ್ಷಿಗಳನ್ನು ಹೆಸರಿಸಿದ್ದು, ಅವರಲ್ಲಿ 20 ಮಂದಿ ಸಾಕ್ಷ ನುಡಿದಿದ್ದರು.

ಪೋಕ್ಸೊ ವಿಶೇಷ ನ್ಯಾಯಾಧೀಶೆ ಪಲ್ಲವಿ ಬಿ.ಆರ್. ಅವರು ವಿಚಾರಣೆ ನಡೆಸಿ, ಆರೋಪಿಯನ್ನು ದೋಷಿ ಎಂದು ಪರಿಗಣಿಸಿ, ಐದು ವರ್ಷ ಸಾದಾ ಸಜೆ, 5,000 ರೂ. ದಂಡ ವಿಧಿಸಿ ತೀರ್ಪು ನೀಡಿದರು. ಇದರಲ್ಲಿ 3,000 ರೂ. ಮೊತ್ತವನ್ನು ಸಂತ್ರಸ್ತ ಬಾಲಕಿಗೆ ನೀಡಲು ಸೂಚಿಸಲಾಗಿದೆ, ಅಲ್ಲದೆ ಜಿಲ್ಲಾ ಕಾನೂನು ನೆರವು ಪ್ರಾಧಿಕಾರದವರು ಸಂತ್ರಸ್ತ ಬಾಲಕಿಗೆ ಸೂಕ್ತ ಪರಿಹಾರ ನೀಡಬೇಕು ಎಂದೂ ಆದೇಶಿಸಲಾಗಿದೆ.

ಸರಕಾರದ ಪರ ವಿಶೇಷ ಅಭಿಯೋಜಕ ಸಿ.ವೆಂಕಟರಮಣ ಸ್ವಾಮಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News