ದನ ಕಳವು ಪ್ರಕರಣ : ಆರೋಪಿಗಳ ಪರೇಡ್

Update: 2019-12-09 13:21 GMT

ಮಂಗಳೂರು, ಡಿ.9: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ನಾನಾ ಪೊಲೀಸ್ ಠಾಣೆಗಳಲ್ಲಿ ದನ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಆರೋಪಿಗಳನ್ನು ಸೋಮವಾರ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ಅವರು ಪೊಲೀಸ್ ಮೈದಾನದಲ್ಲಿ ಪರೇಡ್ ನಡೆಸಿದರು.

75ಕ್ಕೂ ಮಂದಿ ದನ ಕಳವು ಆರೋಪಿಗಳು ಈ ಪರೇಡ್‌ನಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಮಾತನಾಡಿದ ಪೊಲೀಸ್ ಆಯುಕ್ತರು, ಯಾರಾದರೂ ದನ ಕಳವು ಕೃತ್ಯ ಅಥವಾ ಇನ್ನಾವುದೇ ಸಮಾಜಬಾಹಿರ ಕೃತ್ಯದಲ್ಲಿ ಭಾಗಿಯಾದರೆ ಅಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಎಲ್ಲ ಠಾಣಾ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಅಕ್ರಮ ದನ ಸಾಗಾಟ, ದನ ಕಳವು ಕೃತ್ಯದಲ್ಲಿ ಯಾರು ಭಾಗಿಯಾದರೂ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ. ಪೊಲೀಸ್ ಸಿಬ್ಬಂದಿ ಯಾವುದೇ ಮುಲಾಜಿಲ್ಲದೆ ಸಂಬಂಧಿತ ಆರೋಪಿತರನ್ನು ಗಲ್ಲಿ ಗಲ್ಲಿಗೆ ನುಗ್ಗಿ ಬಂಧಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪೊಲೀಸ್ ಇಲಾಖೆಯಿಂದ ರೌಡಿಶೀಟರ್‌ಗಳಿಗೆ ಮಾರ್ಗದರ್ಶನ ನೀಡಿ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನ ಮಾಡಲಾಗುತ್ತಿದ್ದು, ಅದಕ್ಕೆ ನಾನಾ ಅವಕಾಶಗಳನ್ನು ನೀಡಲಾಗುತ್ತಿದೆ. ಇದರ ಮಧ್ಯೆಯೂ ಕೆಲವರು ತಮ್ಮ ಹಳೇ ಚಾಳಿಯನ್ನೇ ಮುಂದುವರಿಸಿ ಅಪರಾಧಿ ಕೃತ್ಯದಲ್ಲಿ ಮುಂದುವರಿದರೆ ಕಾನೂನು ಪ್ರಕಾರ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.

ಈ ಸಂದರ್ಭ ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪಪೊಲೀಸ್ ಆಯುಕ್ತ ಡಾ.ಅರುಣಾಂಶುಗಿರಿ, ಸಂಚಾರ ಮತ್ತು ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ಲಕ್ಷ್ಮೀಗಣೇಶ್, ಉಪಪೊಲೀಸ್ ಆಯುಕ್ತರಾದ ಶ್ರೀನಿವಾಸ್ ಗೌಡ, ಕೋದಂಡರಾಮ, ಜಗದೀಶ್, ವಿನಯ್ ಗಾಂವ್ಕರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News