ಪ್ರಸ್ತುತ ಬಂಡವಾಳ ಹಾಕಲು ಉದ್ಯಮಿಗಳು ಮುಂದೆ ಬರುತ್ತಿಲ್ಲ: ಯು.ಟಿ.ಖಾದರ್

Update: 2019-12-09 14:37 GMT

ಕೊಣಾಜೆ: ಪ್ರಸ್ತುತ ದಿನಗಳಲ್ಲಿ ಇರುವ ಕೈಗಾರಿಕೆಗಳೇ ಬಂದ್ ಆಗಿರುವುದರಿಂದ ಬಂಡವಾಳ ಹಾಕಲು ಜನ ಹಿಂದೇಟು ಹಾಕುತ್ತಿದ್ದಾರೆ. ಅದರಿಂದಾಗಿ ಇರಾ ಕೈಗಾರಿಕಾ ಪ್ರದೇಶಕ್ಕೂ ಅಡ್ಡಿಯಾಗಿದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.

ಮುಡಿಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲೇ ಜಿಡಿಪಿ ತೀವ್ರ ಕುಸಿತ ಕಂಡಿರುವುದರಿಂದ ಇರಾದಲ್ಲಿ ಕೈಗಾರಿಕೆಗಳು ಆರಂಭಗೊಳ್ಳಲು ಇನ್ನಷ್ಟು ಸಮಯ ಬೇಕಾಗಬಹುದು. ಹಿಂದೆ‌ ಈ ಪ್ರದೇಶಕ್ಕೆ ಹತ್ತು ಫಾರ್ಮಸಿ ಕಂಪನಿಗಳ‌ ಮುಖ್ಯಸ್ಥರು ಆಗಮಿಸಿದಾಗ ರಸ್ತೆ ಸರಿಯಲ್ಲ ಎನ್ನುವ ಕಾರಣಕ್ಕೆ ಹಿಂದೇಟು ಹಾಕಿದ್ದರು. ಬಳಿಕ ಸುಸಜ್ಜಿತ ರಸ್ತೆ ನಿರ್ಮಿಸಲಾಗಿದೆ. ಈ ರಸ್ತೆಯಲ್ಲಿ ಯುವಕರು ದ್ವಿಚಕ್ರ ವಾಹನ ಬಳಸಿ ಮೋಜು, ಮಸ್ತಿ ಮಾಡುತ್ತಿದ್ದಾರೆ ಎನ್ನುವ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ರಸ್ತೆಯನ್ನು ಗೇಟ್ ಹಾಕಿ ಮುಚ್ಚುವ ಹಾಗೂ ಪಹರೇದಾರರನ್ನು ನೇಮಿಸಲು ಯೋಚಿಸಲಾಗಿದೆ ಎಂದರು.  ಮುಡಿಪುವಿನಲ್ಲಿರುವ ಐಬಿ ತಾಲೂಕು ಮಟ್ಟದ್ದಾಗಿ ರೂಪಿಸಿ‌‌ ಪ್ರವಾಸಿ ತಾಣವನ್ನಾಗಿ ಯೋಚಿಸಲಾಗಿದ್ದು ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಮಂಗಳೂರು ಕ್ಷೇತ್ರ ವ್ಯಾಪ್ತಿಯ ಮುಡಿಪು ಹೋಬಳಿಯಲ್ಲಿ ರಸ್ತೆ, ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ಮಾದರಿ‌ ಯೋಜನೆ ಜಾರಿಗೆ ತರಲಾಗಿದೆ. ಎಲ್ಲಾ ರಸ್ತೆಗಳೂ ಸುಸಜ್ಜಿತಗೊಂಡಿದ್ದು ಬಾಕಿಯುಳಿದಿರುವ 15ಶೇ. ರಷ್ಟು ಕಾಮಗಾರಿ ಮುಂದಿನ ವರ್ಷ ಕೈಗೆತ್ತಿಕೊಳ್ಳಲಾಗುವುದು. ಶಾಶ್ವತ ಕುಡಿಯುವ ನೀರಿನ ಯೋಜನೆಗೆ 220ಕೋಟಿ ರೂ.‌ ಅನುದಾನದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ದ್ರವ ಹಾಗೂ ಘನ ತ್ಯಾಜ್ಯ ವಿಚಾರದಲ್ಲಿ ವ್ಯಾಪಾರಸ್ಥರು ಮಾತ್ರವಲ್ಲದೆ ಸ್ಥಳೀಯರು ವಿಶೇಷ ಜವಾಬ್ದಾರಿ ವಹಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಮಮತಾ ಗಟ್ಟಿ, ಚಂದ್ರಹಾಸ ಕರ್ಕೇರ, ಪ್ರಶಾಂತ್ ಕಾಜವ, ಅಬ್ದುಲ್ ಜಲೀಲ್‌ ಮೋಂಟುಗೋಳಿ, ನಾಸಿರ್ ನಡುಪದವು, ವೈದ್ಯೆ ಹನ್ನತ್ ಆಯಿಶಾ ರೀಮ ಹಾಗೂ ಜಿ. ಕಸ್ತೂರಿ ಉಪಸ್ಥಿತರಿದ್ದರು. ‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News