ತುಂಬೆ ಕ್ಲಸ್ಟರ್ ಮಟ್ಟದ ಮಕ್ಕಳ ವಿಜ್ಞಾನ ಹಬ್ಬಕ್ಕೆ ಚಾಲನೆ

Update: 2019-12-09 16:01 GMT

ಬಂಟ್ವಾಳ, ಡಿ. 9: ವಿದ್ಯಾರ್ಥಿಗಳು ಹೊಸ ಹೊಸ ವಿಚಾರಗಳನ್ನು ಕಲಿಯಬೇಕು, ಕಲಿತು ಅದನ್ನು ಮರೆಯದೇ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಹೇಳಿದ್ದಾರೆ.

ವಿಜ್ಞಾನವನ್ನು ಮಕ್ಕಳು ಸಂತೋಷದಿಂದ ಅರಿತುಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ರಾಜ್ಯ ಸರಕಾರ ಇದೇ ಮೊದಲ ಬಾರಿಗೆ ಮಕ್ಕಳ ವಿಜ್ಞಾನ ಹಬ್ಬ-2019ನ್ನು ಆಯೋಜಿಸಿದ್ದು, ಸೋಮವಾರ ಬಂಟ್ವಾಳ ತಾಲೂಕಿನ ತುಂಬೆ ಕ್ಲಸ್ಟರ್ ವ್ಯಾಪ್ತಿಯ ಬ್ರಹ್ಮರ ಕೂಟ್ಲು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಮಕ್ಕಳ ವಿಜ್ಞಾನ ಹಬ್ಬಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಳ್ಳಿಗೆ ಗ್ರಾಮಾಭಿವೃದ್ದಿ ಸಂಘದ ಅಧ್ಯಕ್ಷ ದಿವಾಕರ ಪಂಬಂದಬೆಟ್ಟು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಸಿಆರ್‍ಪಿ ನಂದಾ ಎಸ್ತೇರಾ, ಸಹಶಿಕ್ಷಕಿ ಭಾರತಿ ಶೇಷಪ್ಪ ಮತ್ತಿತರರು ಉಪಸ್ಥಿತರಿದ್ದರು.

ಪುದು ಮಾಪ್ಳ ಶಾಲೆಯ ಮುಖ್ಯ ಶಿಕ್ಷಕಿ ಶಕುಂತಲಾ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮರಕೂಟ್ಲು ಸರಕಾರಿ ಶಾಲೆಯ ಮುಖ್ಯ ಶಿಕ್ಷಕಿ ಪ್ಲೋರಿನ್ ರೆಬೆಲ್ಲೊ ವಂದಿಸಿದರು. ಮಕ್ಕಳಿಂದ ಸಾಮೂಹಿಕ ನೃತ್ಯ ನಡೆಯಿತು.

11 ಶಾಲೆಗಳ ಒಟ್ಟು 152 ವಿದ್ಯಾರ್ಥಿಗಳು

ಬಂಟ್ವಾಳ ತಾಲೂಕಿನ 22 ಕ್ಲಸ್ಟರ್‍ಗಳ ಪೈಕಿ ಮೂರು ಕ್ಲಸ್ಟರ್‍ಗಳಲ್ಲಿ ಈ ಕಾರ್ಯಕ್ರಮವನ್ನು ನಡೆಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದ್ದು, ಅದರ ಮೊದಲು ಕಾರ್ಯಕ್ರಮ ಬ್ರಹ್ಮರಕೂಟ್ಲು ಶಾಲೆಯಲ್ಲಿ ಜರಗಿತು. ತುಂಬೆ ಕ್ಲಸ್ಟರ್ ವ್ಯಾಪ್ತಿಯ 11 ಶಾಲೆಗಳ ಒಟ್ಟು 152 ವಿದ್ಯಾರ್ಥಿಗಳು ವಿಜ್ಞಾನ ಹಬ್ಬದಲ್ಲಿ ಪಾಲ್ಗೊಂಡಿದ್ದರು.

ಮಕ್ಕಳನ್ನು ಕ್ರಿಯಾಶೀಲಗೊಳಿಸುವಿಕೆ

ವಿಜ್ಞಾನವನ್ನು ಅತಿ ಸುಲಭವಾಗಿ ಮತ್ತು ಸಂತೋಷದಿಂದ ಮಕ್ಕಳು ಅರಿಯಬೇಕು ಎಂಬ ಉದ್ದೇಶದಿಂದ ಸರಕಾರ ಇದನ್ನು ಆಯೋಜಿಸಿದೆ. ಸರಕಾರದ ಆದೇಶದಂತೆ ವಿಜ್ಞಾನ ಹಬ್ಬವು 2 ದಿನಗಳ ಕಾಲ ನಡೆಯಲಿದೆ. ವಿಜ್ಞಾನ ಹಬ್ಬವನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ವಿವಿಧ ಪರಿಕರಗಳನ್ನು ಸರಕಾರ ಒದಗಿಸಿದ್ದು, ತರಬೇತಿ ಹೊಂದಿದ ಶಿಕ್ಷಕರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳು ಸೃಜನಾತ್ಮಕ ರೀತಿಯಲ್ಲಿ ದಿನಪತ್ರಿಕೆಗಳಿಂದ ರಚಿಸಿದ ಟೋಪಿ ಹಾಗೂ ಗುರುತಿನ ಚೀಟಿಯನ್ನು ಹಾಕಿ ಸಂಭ್ರಮಿಸಿದರು. ಜೊತೆಗೆ ಶಿಕ್ಷಕರು ಕೂಡ ಅದೇ ರೀತಿ ಟೋಪಿಯನ್ನು ಧರಿಸಿಕೊಂಡಿದ್ದರು.

ಈ ಹಬ್ಬದಲ್ಲಿ ಪಾಲ್ಗೊಳ್ಳುವ ಮಕ್ಕಳನ್ನು ನಾಲ್ಕು ತಂಡಗಳನ್ನಾಗಿ ವಿಭಾಗಿಸಿ ಅದರ ಮೂಲಕ ತರಬೇತಿ ನೀಡಲಾಗುತ್ತದೆ. ಚುಕ್ಕಿ ಚಂದ್ರಮ, ಊರು ತಿಳಿಯೋಣ, ಹಾಡು-ಆಡು, ಹಾಡು-ಮಾಡು ಹೀಗಿ 4 ವರ್ಗಗಳಲ್ಲಿ ತರಬೇತಿ ಇರುತ್ತದೆ. ಎರಡು ದಿನಗಳ ಕಾಲ ಎಲ್ಲಾ ವಿಭಾಗಗಳಲ್ಲೂ ಎಲ್ಲಾ ವಿದ್ಯಾರ್ಥಿಗಳೂ ತರಬೇತಿ ಪಡೆಯುತ್ತಾರೆ.

ಚುಕ್ಕಿ ಚಂದ್ರಮದಲ್ಲಿ ಆಕಾಶ, ಗ್ರಹಗಳು, ನಕ್ಷತ್ರ ಮೊದಲಾದ ವೈಜ್ಞಾನಿಕ ವಿಚಾರಗಳನ್ನು ತಿಳಿದುಕೊಂಡರೆ, ಊರು ತಿಳಿಯೋಣ ದಲ್ಲಿ ಪ್ರಾಣಿ-ಪಕ್ಷಿ, ಪರಿಸರದ ಕುರಿತು ಅಧ್ಯಯನ ನಡೆಸುತ್ತಾರೆ. ಹಾಡು-ಆಡುನಲ್ಲಿ ಗಣಿತದ ಕುರಿತು ತಿಳಿದರೆ, ಹಾಡು-ಮಾಡುನಲ್ಲಿ ವಿವಿಧ ರೀತಿಯ ಕ್ರಾಫ್ಟ್‍ಗಳ ರಚನೆಯನ್ನು ಕಲಿಸಲಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News