ಡಿ.13ರಿಂದ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನ

Update: 2019-12-09 16:09 GMT

ಉಡುಪಿ, ಡಿ. 9: ತುಳು ಶಿವಳ್ಳಿ ಬ್ರಾಹ್ಮಣರ ಪ್ರಪ್ರಥಮ ವಿಶ್ವ ಮಹಾಸಮ್ಮೇಳನ ಡಿ.13ರಿಂದ 15ರವರೆಗೆ ಉಡುಪಿ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ರಾಜಾಂಗಣದಲ್ಲಿ ನಡೆಯಲಿದೆ ಎಂದು ಗೌರವಾಧ್ಯಕ್ಷರಾಗಿರುವ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಹೇಳಿದ್ದಾರೆ.

ಶ್ರೀಕೃಷ್ಣ ಮಠದ ಕನಕ ಮಂಟಪದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.ವಿಶ್ವದಾದ್ಯಂತ ಚದುರಿಹೋಗಿರುವ ತುಳು ಶಿವಳ್ಳಿ ಬ್ರಾಹ್ಮಣರನ್ನು ಒಗ್ಗೂಡಿಸುವುದು ಈ ಸಮ್ಮೇಳನದ ಪ್ರಮುಖ ಗುರಿಯಾಗಿದೆ ಎಂದವರು ನುಡಿದರು.

ಸಮಿತಿಯ ಸಂಘಟಕ ಅಧ್ಯಕ್ಷ ಡಾ.ಪಿ.ಕೆ.ಬಾಲಕೃಷ್ಣ ಮೂಡಂಬಡಿತ್ತಾಯ ಹಾಗೂ ಪ್ರಧಾನ ಸಂಚಾಲಕ ಪ್ರೊ.ಎಂ.ಬಿ.ಪುರಾಣಿಕ್ ಮಾತನಾಡಿ, ಮೂರು ದಿನಗಳ ಎಲ್ಲಾ ಕಾರ್ಯಕ್ರಮಗಳು ತುಳು ಭಾಷೆಯಲ್ಲೇ ನಡೆಯಲಿದೆ. ವಿಶಿಷ್ಟವಾದ ಶಿವಳ್ಳಿ ತುಳು ಭಾಷೆ, ಸಂಪ್ರದಾಯ ಹಾಗೂ ಸಂಸ್ಕೃತಿಗಳ ಕುರಿತು ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸಿ, ಅವುಗಳನ್ನು ಉಳಿಸಿ ಬೆಳೆಸಲು ಪ್ರೇರಣೆ ನೀಡುವುದು ಈ ಸಮ್ಮೇಳನದ ಪ್ರಧಾನ ಉದ್ದೇಶವಾಗಿದೆ ಎಂದರು.

ಸಮ್ಮೇಳನದಲ್ಲಿ ತುಳು ಶಿವಳ್ಳಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಉಡುಪಿಯ ಅಷ್ಟ ಮಠಾಧೀಶರು ಸೇರಿದಂತೆ ಎಲ್ಲಾ ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ. ಸುಮಾರು 10,000 ಮಂದಿ ಸಮಾಜ ಬಾಂಧವರನ್ನು ಸಮ್ಮೇಳನದಲ್ಲಿ ನಿರೀಕ್ಷಿಸುತಿದ್ದೇವೆ ಎಂದು ಅವರು ನುಡಿದರು.

ಡಿ.13ರ ಶುಕ್ರವಾರ ಸಂಜೆ 6:45ಕ್ಕೆ ರಾಜಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ಮರುದಿನ ಬೆಳಗ್ಗೆ 9ಗಂಟೆಗೆ ಉಡುಪಿ ಸಂಸ್ಕೃತ ಕಾಲೇಜಿನಿಂದ ರಾಜಾಂಗಣದವರೆಗೆ ಮೆರವಣಿಗೆ ನಡೆಯಲಿದ್ದು, 10ಗಂಟೆಗೆ ಸಮ್ಮೇಳನ ವನ್ನು ಪರ್ಯಾಯ ಪಲಿಮಾರುಶ್ರೀಗಳು ಉದ್ಘಾಟಿಸಲಿದ್ದಾರೆ. ಪೇಜಾವರ ಮಠದ ಶ್ರೀವಿಶ್ವೇಶತೀರ್ಥರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರೊ.ಪುರಾಣಿಕ್ ತಿಳಿಸಿದರು.

ಬಳಿಕ ಎರಡು ದಿನಗಳಲ್ಲಿ ಧಾರ್ಮಿಕ ಸಮಾವೇಶ, ಉದ್ಯಮಶೀಲತಾ ಸಮಾವೇಶ, ಶೈಕ್ಷಣಿಕ ಸಮಾವೇಶ, ತುಳು ಶಿವಳ್ಳಿ ಸಮಾಜ ಅಂದು-ಇಂದು - ಮುಂದು ವಿಚಾರಗೋಷ್ಠಿ,ಮಹಿಳಾ ಸಮಾವೇಶ, ಯುವ ವಿಭಾಗ ಸಮಾವೇಶ, ಧಆರ್ಮಿಕ ಚಿಂತನಾ ಗೋಷ್ಠಿ, ಸಾಧಕರ ಸಮಾವೇಶಗಳು ನಡೆಯಲಿವೆ. 15ರ ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಅಲ್ಲದೇ ಪ್ರತಿದಿನ ವೈವಿಧ್ಯಮಯ ಸಾಂಸ್ಕೃತಕ ಕಾರ್ಯಕ್ರಮಗಳಿರುತ್ತವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಮಂಜುನಾಥ ಉಪಾಧ್ಯ ಪರ್ಕಳ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಶ ಭಟ್ ಕಡೆಕಾರು, ಜಯರಾಮ ಆಚಾರ್ ಬೈಲೂರು ಹಾಗೂ ಜನಾರ್ದನ ಕೊಡವೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News