ಅದಮಾರು ಪರ್ಯಾಯದಲ್ಲಿ 15 ದಿನಕ್ಕೊಮ್ಮೆ ಹಸಿರು ಹೊರೆ ಕಾಣಿಕೆ

Update: 2019-12-09 16:10 GMT

ಉಡುಪಿ, ಡಿ.9: ಮುಂದಿನ ಜನವರಿ 18ರಿಂದ ಪ್ರಾರಂಭಗೊಳ್ಳುವ ಅದಮಾರು ಮಠದ ಪರ್ಯಾಯದ ಎರಡು ವರ್ಷಗಳ ಅವಧಿಯಲ್ಲಿ ಪ್ರತಿ 15 ದಿನಗಳಿಗೊಮ್ಮೆ ಹಸಿರುಹೊರೆ ಕಾಣಿಕೆ ಮೆರವಣಿಗೆ ನಡೆಯಲಿದೆ. ಇದರಿಂದ ಭಕ್ತರು, ಸಾರ್ವಜನಿಕರಿಂದ ಸಂಗ್ರಹಗೊಳ್ಳುವ ಹಸಿರು ಹೊರೆಯ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗಲಿದೆ ಎಂದು ಅದಮಾರು ಮಠದ ಪರ್ಯಾಯ ಮಹೋತ್ಸವವನ್ನು ನಿರ್ವಹಿಸಲಿರುವ ಶ್ರೀಕೃಷ್ಣ ಸೇವಾ ಬಳಗದ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮುಂದಿನ ಪರ್ಯಾಯದ ಸಿದ್ಧತೆಗಳು, ರೂಪುರೇಷೆಗಳನ್ನು ವಿವರಿಸಿದ ಅವರು, ಈ ಮೊದಲು ಜ.18ರಂದು ನಡೆಯುವ ಪರ್ಯಾಯಕ್ಕೆ ಮೊದಲು 15 ದಿನಗಳ ಕಾಲ ಸಂಗ್ರಹವಾಗುತಿದ್ದ ಹಸಿರುಹೊರೆ ಕಾಣಿಕೆ ನಿರ್ವಹಣೆ ಸಮರ್ಪಕವಾಗಿ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ತಮ್ಮ ಪರ್ಯಾಯಾವಧಿಯಲ್ಲಿ ಜ.15ರಿಂದ ಪ್ರಾರಂಭಿಸಿ ಪ್ರತಿ 15 ದಿನಗಳಿಗೊಮ್ಮೆ ಹೊರೆಕಾಣಿಕೆ ನಿರಂತರವಾಗಿ ಬರುವಂತೆ ಸ್ವಾಮೀಜಿಗಳು ಯೋಜನೆ ರೂಪಿಸಿದ್ದಾರೆ ಎಂದರು.

ಅದಮಾರು ಪರ್ಯಾಯದ ಮೊದಲ ಹೊರೆಕಾಣಿಕೆ 80ಕ್ವಿಂಟಾಲ್ ಅಕ್ಕಿ ಸಹಿತ ಜ.15ರಂದು ಯಶಪಾಲ್ ಸುವರ್ಣ ನೇತೃತ್ವದಲ್ಲಿ ಬರಲಿದ್ದು, ಇದನ್ನು ಪರ್ಯಾಯದ ಸಂದರ್ಭದಲ್ಲಿ ಭಕ್ತರಿಗೆ ಬೇಕಾದ ಉಟೋಪಚಾರದ ವ್ಯವಸ್ಥೆಗೆ ಬಳಸಲಾಗುವುದು. ಅದಮಾರು, ಮಲ್ಪೆ, ಕೊಡವೂರು ಹಾಗು ಮಟ್ಟು ಗ್ರಾಮದ ಗ್ರಾಮಸ್ಥ ರಿಂದ ಈ ಹೊರೆ ಕಾಣಿಕೆ ಶ್ರೀಮಠಕ್ಕೆ ಬರಲಿದೆ ಎಂದರು.

ಜ.8ಕ್ಕೆ ಪುರಪ್ರವೇಶ: ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಸ್ವಾಮೀಜಿ ಹಾಗೂ ಕಿರಿಯ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಪರ್ಯಾಯಪೂರ್ವ ಸಂಚಾರ ಪೂರೈಸಿ ಜ.8ರಂದು ಉಡುಪಿಗೆ ಪುರಪ್ರವೇಶ ಮಾಡಲಿದ್ದು, ಅಪರಾಹ್ನ 3 ಗಂಟೆ ಸುಮಾರಿಗೆ ಜೋಡುಕಟ್ಟೆಯಲ್ಲಿ ಅವರನ್ನು ಸ್ವಾಗತಿಸಿ ಭವ್ಯ ಮೆರವಣಿಗೆಯಲ್ಲಿ ರಥಬೀದಿಗೆ ಕರೆತರಲಾಗುವುದು ಎಂದು ಅವರು ನುಡಿದರು.

ಮೆರವಣಿಗೆ ಹಳೆ ತಾಲೂಕು ಕಚೇರಿ ರಸ್ತೆ, ಡಯಾನಾ ವೃತ್ತ, ತೆಂಕಪೇಟೆ ಮೂಲಕ ರಥಬೀದಿಗೆ ಬರಲಿದೆ. ಸ್ವಾಮೀಜಿ 5:45ರ ಸುಮುಹೂರ್ತದಲ್ಲಿ ಅದಮಾರುಮಠಕ್ಕೆ ಪ್ರವೇಶಿಸಲಿದ್ದಾರೆ. ಬಳಿಕ ರಥಬೀದಿಯ ಪೂರ್ಣಪ್ರಜ್ಞ ಮಂಟಪದಲ್ಲಿ ಪೌರಸನ್ಮಾನ, ಸಾರ್ವಜನಿಕ ಅಭಿನಂದನೆ ಕಾರ್ಯಕ್ರಮ ನಡೆಯಲಿದೆ ಎಂದರು.

ಸಮಿತಿ ಸದಸ್ಯ ಕಟೀಲು ಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ, ಜ. 18ರಂದು ಅದಮಾರು ಮಠದ ಪರ್ಯಾಯ ಮಹೋತ್ಸವವನ್ನು ಪ್ಲಾಸ್ಟಿಕ್ ರಹಿತ ಪರಿಸರ ಸ್ನೇಹಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಬ್ಯಾನರ್, ಪೋಸ್ಟರ್ ಇತ್ಯಾದಿಗಳಲ್ಲಿ ಬಟ್ಟೆಯನ್ನೇ ಬಳಸಬೇಕು. ಪುರಪ್ರವೇಶ ಮೆರವಣಿಗೆ ಸಂದರ್ಭ ದಲ್ಲಿ ನಗರದ ಇಕ್ಕೆಲಗಳಲ್ಲಿ ತಳಿರುತೋರಣ, ದೀಪ, ರಂಗವಲ್ಲಿಗಳ ಮೂಲಕ ಶೃಂಗಾರ ಮಾಡುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀಕೃಷ್ಣ ಸೇವಾ ಬಳಗದ ಪ್ರಮುಖರಾದ ಯು. ಕೆ. ರಾಘವೇಂದ್ರ ರಾವ್, ವೈ.ಎನ್. ರಾಮಚಂದ್ರ ರಾವ್, ಯಶಪಾಲ್ ಸುವರ್ಣ, ರಾಮಚಂದ್ರ ಆಚಾರ್ಯ ಪಡುಬಿದ್ರಿ, ಪ್ರದೀಪ್‌ರಾವ್, ಶ್ರೀಪತಿ ಭಟ್, ಅನಂತ ನಾಯಕ್, ಸಂತೋಷ್, ಗೋವಿಂದರಾಜ್, ಮಠದ ವ್ಯವಸ್ಥಾಪಕ ರಾಘವೇಂದ್ರ ಭಟ್ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News