ಪೊಲೀಸ್‌ಲೇನ್‌ನಲ್ಲಿ ಧಾರ್ಮಿಕ ಸಭಾಭವನ ನಿರ್ಮಾಣ: ಸಚಿವ ಕೋಟ

Update: 2019-12-09 16:50 GMT

ಮಂಗಳೂರು, ಡಿ.9: ದ.ಕ. ಜಿಲ್ಲೆಯಲ್ಲಿ ಪೊಲೀಸರ ವಸತಿ ಸಮಸ್ಯೆ ಪರಿಹಾರ ಮಾಡುವ ಜತೆಗೆ ಮೂಲಭೂತ ಸೌಕರ್ಯ ಕಲ್ಪಿಸಲು ಸರಕಾರ ಬದ್ಧವಿದ್ದು, ಪೊಲೀಸ್‌ಲೇನ್‌ನಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಧಾರ್ಮಿಕ ಸಭಾಭವನ ನಿರ್ಮಾಣ ಮಾಡಲಾಗು ವುದು. ಶೀಘ್ರದಲ್ಲಿಯೇ ಅನುದಾನ ಮಂಜೂರಾತಿಯಾಗಲಿದೆ ಎಂದು ಮುಜರಾಯಿ ಮತ್ತು ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಭರವಸೆ ನೀಡಿದ್ದಾರೆ.

ನಗರದ ಅತ್ತಾವರ ಪೊಲೀಸ್‌ಲೇನ್‌ನಲ್ಲಿ ‘ಕೋಟಿ ಚನ್ನಯ’ ಪೊಲೀಸ್ ವಸತಿ ಸಮುಚ್ಛಯವನ್ನು ಸೋಮವಾರ ಲೋಕಾರ್ಪಣೆ ಗೊಳಿಸಿ ಅವರು ಮಾತನಾಡಿದರು.

ರಾಜ್ಯದೆಲ್ಲೆಡೆ ಪ್ರವಾಸ ಕೈಗೊಂಡಿದ್ದೇನೆ. ದ.ಕ. ಜಿಲ್ಲಾ ಪೊಲೀಸರು ಹೆಚ್ಚು ಭರವಸೆವುಳ್ಳವರಾಗಿದ್ದಾರೆ. ಜಿಲ್ಲೆಯಲ್ಲಿ ಪೊಲೀಸರ ಪರಿಣಾಮಕಾರಿ ಕಾರ್ಯ ನಿರ್ವಹಣೆಯಿಂದ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಣುವಂತಾಗಿದೆ. ನಾಗಕರು ತಮ್ಮತಮ್ಮ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳನ್ನು ಕೊಂಡಾಡುತ್ತಿದ್ದಾರೆ. ಪೊಲೀಸರ ಬಗ್ಗೆ ಜಿಲ್ಲೆಯಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿ ಬರುತ್ತಿದೆ ಎಂದರು.

ಪೊಲೀಸ್ ಇಲಾಖೆಯಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಸಿಬ್ಬಂದಿ ಕೊರತೆ ಇದ್ದು, ವಾಹನಗಳು ಸುಸ್ಥಿತಿಯಲ್ಲಿರುವುದು ತೀರಾ ಕಡಿಮೆ. ಹೀಗಿರುವಾಗ ಪೊಲೀಸರು ದುಷ್ಕರ್ಮಿ ಗಳನ್ನು ಹಿಡಿಯುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಪೊಲೀಸ್ ಸಿಬ್ಬಂದಿಯ ಮೂಲಭೂತ ಸೌಕರ್ಯ ಕಲ್ಪಿಸುವ ಔರಾದ್ಕರ್ ವರದಿಯು ಶೀಘ್ರದಲ್ಲಿಯೇ ಜಾರಿಯಾಗಲಿದೆ ಎಂದು ಹೇಳಿದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಜಿಲ್ಲೆಯ ನಿದ್ರೆಯಲ್ಲಿದ್ದಾಗ ಎಚ್ಚರವಿದ್ದು ಸೇವೆ ಸಲ್ಲಿಸುವವರು ಪೊಲೀಸರು ಇಲಾಖೆಯಾವರು ಮಾತ್ರ. ಜಿಲ್ಲೆಯಲ್ಲಿ ಸಂಭವಿಸುವ ಪ್ರಕರಣಗಳ ಕೂಲಂಕಷ ತನಿಖೆ ಮಾಡುತ್ತಾ ಸಮಾಜದಲ್ಲಿ ಸುವ್ಯವಸ್ಥೆ ಕಾಪಾಡಿಕೊಂಡು ಹೋಗುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸರಕಾರದ ಅಂಗವಾಗಿ ಪೊಲೀಸ್ ಇಲಾಖೆಯು ಸೇವೆ ನೀಡುತ್ತಿದೆ. ಅವರ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಸ್ಪಂದಿಸಲಿದ್ದೇವೆ ಎಂದರು.

ಪೊಲೀಸ್‌ಲೇನ್‌ನ ಮುಖ್ಯ ರಸ್ತೆಗೆ 50 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟ್ ಕಾಮಗಾರಿಗೆ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಚಾಲನೆ ನೀಡಲಿದ್ದೇವೆ. ಪೊಲೀಸರ ಸಮಸ್ಯೆಗಳನ್ನು ಈಡೇರಿಸಲಾಗುವುದು. ಪೊಲೀಸರ ಸಮರ್ಪಕ ಸೇವೆ ನಿರಂತರವಾಗಿರ ಬೇಕು ಎಂದು ಅವರು ಹೇಳಿದರು.

ಶಾಸಕರು ಹಾಗೂ ಸಚಿವರು ಮೂವರು ಪೊಲೀಸ್ ಸಿಬ್ಬಂದಿಗೆ ಸಾಂಕೇತಿಕವಾಗಿ ಸಮುಚ್ಛಯ ಕೀ ಹಸ್ತಾಂತರಿಸಿದರು.
 ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಬಂಟ್ವಾಳ ವಿಭಾಗದ ಎಎಸ್ಪಿ ಸೈದುಲ್ ಅದಾವತ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ಎಎಸ್ಸೈ ಹರೀಶ್ ಕಾರ್ಯಕ್ರಮ ನಿರೂಪಿಸಿದರು. ಪೊಲೀಸ್ ಇನ್‌ಸ್ಪೆಕ್ಟರ್ ನಾರಾಯಣ ಪೂಜಾರಿ ವಂದಿಸಿದರು.

96 ವಸತಿಗೃಹ

ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ನಗರದ ಅತ್ತಾವರದ ಪೊಲೀಸ್‌ಲೇನ್‌ನಲ್ಲಿ ನಿರ್ಮಾಣವಾದ ವಸತಿ ಸಮುಚ್ಛಯದಲ್ಲಿ 96 ವಸತಿಗೃಹಗಳಿವೆ. 48ರಂತೆ ಎರಡು ಬ್ಲಾಕ್‌ಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಫ್ಲಾಟ್ ಕೂಡ 2ಬಿಎಚ್‌ಕೆ ಸಾಮರ್ಥ್ಯ ಹೊಂದಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಪೊಲೀಸ್ ವಸತಿಗೃಹಕ್ಕೆ ಲಿಫ್ಟ್‌ನ್ನು ಅಳವಡಿಸಿರುವುದು ವಿಶೇಷ. ಶೀಘ್ರದಲ್ಲಿಯೇ ಮಂಗಳೂರು ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಪೊಲೀಸರ ವಸತಿಗೃಹವೂ ಲೋಕಾರ್ಪಣೆಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News