ಉಡುಪಿ: ಡಿ.10ರಿಂದ ಕೆಎಸ್‌ಐಸಿ ಮೈಸೂರ್ ಸಿಲ್ಕ್ ಸೀರೆಗಳ ಪ್ರದರ್ಶನ

Update: 2019-12-09 16:56 GMT

ಉಡುಪಿ, ಡಿ.9: ರಾಜ್ಯ ಸರಕಾರದ ಒಂದು ಉದ್ಯಮವಾಗಿರುವ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ (ಕೆಎಸ್‌ಐಸಿ) ಕರ್ನಾಟಕದ ಪಾರಂಪರಿಕ ಉತ್ಪನ್ನವಾದ ಮೈಸೂರ್ ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟವನ್ನು ಡಿ.10ರಿಂದ 13ರವರೆಗೆ ಜೋಡುಕಟ್ಟೆಯ ಬಳಿ ಇರುವ ಡಯಾನ ಹೋಟೆಲ್‌ನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಸಾಂಪ್ರದಾಯಿಕ ಮೈಸೂರು ಸಿಲ್ಕ್ ಸೀರೆಗಳಲ್ಲದೆ ಕೆಎಸ್‌ಐಸಿಯ ನಾಜೂಕು ವಿನ್ಯಾಸದ ಸಂಗ್ರಹಿತ ಕ್ರೇಪ್ ಡಿ ಚೈನ್ ಸೀರೆಗಳನ್ನು ಹಾಗೂ ಜಾರ್ಜೆಟ್ ಮತ್ತು ಸಾದಾ ಮುದ್ರಿತ ಸೀರೆಗಳನ್ನು, ಟೈ, ಸ್ಕಾರ್ಪ್ ಇತ್ಯಾದಿ ಉತ್ಪನ್ನಗಳನ್ನು ಇಲ್ಲಿ ಪ್ರದರ್ಶಿ ಸಲಾಗುವುದು. ಅಲ್ಲದೇ ನವನವೀನ ವಿವಾಹ ಸಂಗ್ರಹ ಸೀರೆ ಗಳನ್ನು ಸಹ ಪರಿಚಯಿಸಲಾಗುತ್ತಿದೆ. ಇಲ್ಲಿ ಖರೀದಿಸುವವರಿಗೆ ಕೆಎಸ್‌ಐಸಿಯು ತನ್ನ ಉತ್ಪನ್ನಗಳ ಮೇಲೆ ಶೇ.25ರವರೆಗೆ ವಿಶೇಷ ರಿಯಾಯಿತಿಯನ್ನು ಸಹ ನೀಡಲಿದೆ.

ಭಾರತದಲ್ಲಿ ದೊರೆಯುವ ರೇಷ್ಮೆ ವಸ್ತ್ರಗಳಿಗಿಂತ ಮೈಸೂರ್ ಸಿಲ್ಕ್ ವಿಭಿನ್ನ ವಾಗಿದೆ. ಇದು ಹಳೇ ಮೈಸೂರು ಪ್ರದೇಶದಲ್ಲಿ ದೊರೆಯುವ ಪ್ರಾಕೃತಿಕ ರೇಷ್ಮೆ ಗೂಡಿನಿಂದ ದೊರೆಯುವ ಅತ್ಯುತ್ತಮ ರೇಷ್ಮೆಯಿಂದ ಮಾಡಲ್ಪಟ್ಟಿದೆ. ಇದು ಬಟ್ಟೆಗಳಿಗೆ ವಿಶಿಷ್ಟವಾದ ಹೊಳಪು ಮತ್ತು ಬೌಗೋಳಿಕ ಸುವಾಸನೆಯನ್ನು ನೀಡುತ್ತದೆ. ಕೆಎಸ್‌ಐಸಿ ಮೈಸೂರು ಸಿಲ್ಕ್ ಸೀರೆಗಳು ಈಗಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಮಾರಾಟವಾಗುವ ಮತ್ತು ಬೇಡಿಕೆಯಲ್ಲಿರುವ ರೇಷ್ಮೆ ಸೀರೆಗಳಾಗಿವೆ. ಅದರಲ್ಲೂ ಮಹಿಳೆಯರಿಗೆ ವಿವಾಹಗಳ ಮತ್ತು ಹಬ್ಬಹರಿ ದಿನಗಳ ಸಂದರ್ಗಳಲ್ಲಿ ಅಚ್ಚುಮೆಚ್ಚಿನ ಆಯ್ಕೆ ಸೀರೆ ಮೈಸೂರು ಸಿಲ್ಕ್ ಸೀರೆಗಳಾಗಿವೆ.

ಮೈಸೂರ್ ಸಿಲ್ಕ್ ಸೀರೆಗಳ ಸಾಂಪ್ರದಾಯಿಕ ರೀತಿಯ ಉತ್ಪಾದನೆ, ಬಟ್ಟೆಯಲ್ಲಿ ಅಳವಡಿಸಲಾಗಿರುವ ಹುರಿ ಮಾಡುವ ವಿಧಾನ, ಬಾರತದಲ್ಲಿ ದೊರೆಯುವ ಕ್ರೇಪ್ ಸಿಲ್ಕ್ ಬಟ್ಟೆಗಳಲ್ಲಿಯೇ ಅತ್ಯುತ್ತಮದ್ದಾಗಿದೆ. ಮೈಸೂರ್ ಸಿಲ್ಕ್‌ಗೆ ಉಪಯೋಗಿಸುವ ರೇಷ್ಮೆ ಪರಿಶುದ್ಧವಾಗಿದ್ದು, ಜರಿಯು ಪರಿಶುದ್ಧ ಚಿನ್ನದ್ದಾಗಿದೆ. ಶೇ.0.65 ಚಿನ್ನ ಮತ್ತು ಶೇ.65ರಷ್ಟು ಬೆಳ್ಳಿಯಿಂದ ಇವುಗಳು ತಯಾರಿಸಲ್ಪ ಟ್ಟಿವೆ. ವಿನ್ಯಾಸಗಳು ಸಾಂಪ್ರದಾಯಿಕ ಮತ್ತು ಆಧುನೀಕತೆಯಿಂದ ಕೂಡಿವೆ.

ಕೆಎಸ್‌ಐಸಿಯ ಮೈಸೂರ್ ಸಿಲ್ಕ್ ಸೀರೆಗಳಿಗೆ ಭೌಗೋಳಿಕ ಗುರುತಿನ ನೋಂದಣಿ ಜಿ1-11 (ಜಿಯೋಗ್ರಾಫಿಕಲ್ ಇಂಡಿಕೇಷನ್ ರಿಜಿಸ್ಟ್ರೇಶನ್) ಪಡೆದುಕೊಂಡಿದೆ. ಇದು ಸರಕುಗಳ ಭೌಗೋಳಿಕ ಗುರುತಿನ (ನೋಂದಣಿ ಮತ್ತು ಸಂರಕ್ಷಣೆ) ಕಾಯ್ದೆ 1999ರಲ್ಲಿ ಲೋಕಸಭೆಯಲ್ಲಿ ಅನುಮೋದನೆ ಗೊಂಡಿದೆ. ಈ ನೊಂದಣಿ ಪ್ರಕಾರ ಕೆಎಸ್‌ಐಸಿಯು ಮೈಸೂರ್ ಸಿಲ್ಕ್‌ನ ಏಕೈಕ ಮಾಲಕತ್ವ ಹೊಂದಿದೆ.

ಕೆಎಸ್‌ಐಸಿ ನಿಗಮಕ್ಕೆ 2016-17 ಹಾಗೂ 2018-19ನೇ ಸಾಲಿನಲ್ಲಿ ಕರ್ನಾಟಕ ಸಾರ್ವಜನಿಕ ಉದ್ದಿಮೆಗಳಿಗೆ ಪ್ರಧಾನ ಮಾಡಲಾಗುವ ಮುಖ್ಯ ಮಂತ್ರಿಗಳ ವಾರ್ಷಿಕ ರತ್ನ ಪ್ರಶಸ್ತಿ ಲಭಿಸಿದೆ. ಕೆಎಸ್‌ಐಸಿಯುನ ಮೈಸೂರು ಸಿಲ್ಕ್ ವೀವಿಂಗ್ ಫ್ಯಾಕ್ಟರಿ 2012ರಲ್ಲಿ ಶತಮಾನೋತ್ಸವ ಪೂರೈಸಿದ ಕರ್ನಾಟಕ ಸರಕಾರದ ಮೊದಲ ಸರಕಾರಿ ಉದ್ಯಮವಾಗಿದೆ.

 ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ ಅವರು ಡಿ.10ರಂದು ಬೆಳಗ್ಗೆ 10 ಗಂಟೆಗೆ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಉದ್ಘಾಟಿಸಲಿದ್ದಾರೆ. ಡಿ.10ರಿಂದ 13ರವರೆಗೆ ನಾಲ್ಕು ದಿನಗಳ ಕಾಲ ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 8 ರವರೆಗೆ ಪ್ರದರ್ಶನ ಮಾರಾಟ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News