ಶಾಲಾ ಹಣ ದುರುಪಯೋಗ ಆರೋಪ: ಇಡ್ಯಡ್ಕ ಶಿಕ್ಷಕ ಅಮಾನತು

Update: 2019-12-09 17:01 GMT

ಪುತ್ತೂರು: ಶಾಲಾ ಹಣ ದುರುಪಯೋಗ ಸೇರಿದಂತೆ ಇನ್ನಿತರ ಆರೋಪಗಳ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕಿನ ದೋಳ್ಪಾಡಿ, ಇಡ್ಯಡ್ಕ ಶಾಲಾ ಸಹ ಶಿಕ್ಷಕ ಜಯಂತ ವೈ ಎಂಬವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. 

ಆರೋಪಕ್ಕೆ ಸಂಬಂಧಿಸಿದಂತೆ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ವರದಿಯನ್ನು ಆಧರಿಸಿ ಜಯಂತ ವೈ ಅವರನ್ನು ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಇಡ್ಯಡ್ಕ ಶಾಲೆಯಲ್ಲಿನ ಸಹಶಿಕ್ಷಕ, ಪ್ರಭಾರ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಯಂತ ವೈ ಅವರನ್ನು ನಿಯೋಜನೆ ಯಲ್ಲಿ ದೋಳ್ಪಾಡಿ ಗಾಣಂತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ಗ್ರಾಪಂ ಸದಸ್ಯರಿಗೆ ಅಗೌರವ ತೋರಿದ್ದಾರೆ ಅಲ್ಲದೆ ಶಾಲಾ ಎಸ್‍ಡಿಎಂಸಿ ಖಾತೆಯ ಹಣವನ್ನು ದುರುಪಯೋಗ ಪಡಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿತ್ತು. ಅಲ್ಲದೆ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಎಸ್‍ಡಿಎಂಸಿ ಹಾಗೂ ಸ್ಥಳೀಯ ಸಾರ್ವಜನಿಕರು ಪ್ರತಿಭಟನೆಯನ್ನೂ ನಡೆಸಿ ಆಮಾನತುಗೊಳಿಸುವಂತೆ ಆಗ್ರಹಿಸಿದ್ದರು. 

ಶಿಕ್ಷಕ ಜಯಂತ ವೈ ಅವರ ಬಗ್ಗೆ ಶಿಕ್ಷಣಾಧಿಕಾರಿಗಳ ವರದಿಯನ್ನು ಆಧರಿಸಿ ಜಿಲ್ಲಾ ಉಪ ನಿರ್ದೇಶಕರು ಮುಂದಿನ ಆದೇಶದ ತನಕ ಹುದ್ದೆಯಿಂದ ಅಮಾನತುಗೊಳಿಸಿ ಆದೇಶಿದ್ದಾರೆ ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News