ಎನ್‌ಆರ್‌ಸಿ- ಪೌರತ್ವ ತಿದ್ದುಪಡಿ ಮಸೂದೆ ಪ್ರಜಾಪ್ರಭುತ್ವಕ್ಕೆ ಸವಾಲು: ಕಣ್ಣನ್ ಗೋಪಿನಾಥನ್

Update: 2019-12-19 07:59 GMT

ಮಂಗಳೂರು, ಡಿ.10: ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ಮತ್ತು ಪೌರತ್ವ ತಿದ್ದುಪಡಿ ಮಸೂದೆ (ಸಿಎಬಿ) ಪ್ರಜಾಪ್ರಭುತ್ವಕ್ಕೆ ದೊಡ್ಡ ಸವಾಲನ್ನು ಒಡ್ಡುವುದು ಮಾತ್ರವಲ್ಲದೆ ಅಸಂವಿಧಾನಿಕ ಮತ್ತು ಅಮಾನವೀಯವಾಗಿದೆ ಎಂದು ಕೇಂದ್ರ ಸರಕಾರದ ನೀತಿಗಳನ್ನು ವಿರೋಧಿಸಿ ಇತ್ತೀಚೆಗೆ ತಮ್ಮ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿರುವ ಕಣ್ಣನ್ ಗೋಪಿನಾಥನ್ ಅಭಿಪ್ರಾಯಿಸಿದ್ದಾರೆ.

ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಆಯೋಜಿಸಲಾದ ‘ಹ್ಯೂಮನೊ 2ಕೆ19’ ಕಾರ್ಯಕ್ರಮ ಉದ್ಘಾಟಿಸಿ ಮಾನತಾಡಿದ ಸಂದರ್ಭ ವಿದ್ಯಾರ್ಥಿಗಳ ಪ್ರಶ್ನೆಯೊಂದಕ್ಕೆ ಈ ಪ್ರತಿಕ್ರಿಯೆ ನೀಡಿದರು.

ಯಾರಾದರೂ ಅಕ್ರಮ ವಲಸಿಗರು ಎಂದು ಸರ್ಕಾರಕ್ಕೆ ಹೇಗೆ ನಿರ್ಧರಿಸುತ್ತದೆ ಎಂದು ಪ್ರಶ್ನಿಸಿದ ಅವರು, ದಾಖಲೆಗಳನ್ನು ಹೊಂದಿರದ ಜನರನ್ನು ನಾವು ಅಕ್ರಮ ವಾಸಿಗಳೆಂದು ಪಟ್ಟಿ ಮಾಡಿ ಅವರನ್ನು ಹೊರ ಹಾಕಬೇಕೇ. ಎನ್‌ಆರ್‌ಸಿ ಇದನ್ನೇ ಮಾಡಲಿದೆ ಎಂದು ಮಾಜಿ ಐಎಎಸ್ ಅಧಿಕಾರಿ ಹೇಳಿದರು. ಬಡವರು, ಬುಡಕಟ್ಟು ಜನಾಂಗದವರು, ಮಹಿಳೆಯರು, ಭೂಹೀನರು, ನೈಸರ್ಗಿಕ ವಿಪತ್ತುಗಳಿಗೆ ಬಲಿಯಾದವರು, ಸಮಾಜದ ಅಂಚಿನಲ್ಲಿರುವ ವರ್ಗದವರು ದಾಖಲೆಗಳನು ಹೊಂದಿರಲಾರರು. ಇವರೇ ಮುಖ್ಯವಾಗಿ ಎನ್‌ಆರ್‌ಸಿಯಿಂದ ತೊಂದರೆಗೊಳಪಡುವರು. ವ್ಯಕ್ತಿಯ ಪೌರತ್ವವನ್ನು ಕಸಿದುಕೊಳ್ಳುವ ಹಕ್ಕು ಸರ್ಕಾರಕ್ಕೆ ಇಲ್ಲ. ನೀವು ದೇಶದ ಪ್ರಜೆ ಎಂದು ಸ್ಥಾಪಿಸಲು ದಾಖಲೆಗಳು ಮತ್ತು ಪುರಾವೆಗಳನ್ನು ಸಂಗ್ರಹಿಸುವ ಹೊರೆ ಸರ್ಕಾರದ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ. ಮಾತ್ರವಲ್ಲದೆ. ದೇಶದ ಪ್ರಜೆಗಳು ತನ್ನ ಪೌರತ್ವವನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ಮಾನಸಿಕ ಸಂಕಟಗಳಿಗೆ ತುತ್ತಾಗಲಿದ್ದಾರೆ ಎಂದವರು ವಿಶ್ಲೇಷಿಸಿದರು.

ಅಸ್ಸಾಂನಲ್ಲಿನಲ್ಲಿ 1,600 ಕೋಟಿ ರೂ. ಸಾರ್ವಜನಿಕ ಹಣವನ್ನು ಈ ಎನ್‌ಆರ್‌ಸಿಗಾಗಿ ವ್ಯಯಿಸಲಾಯಿತು. ಸುಮಾರು 50,000 ಶಿಕ್ಷಕರ ಮಾನವ ದಿನಗಳನ್ನು ಈ ಕಾರ್ಯಕ್ಕಾಗಿ ವ್ಯಯಿಸಲಾಯಿತು. ಇದೀಗ ಆ ವರದಿಯನ್ನೇ ನಿರರ್ಥಕಗೊಳಿಸಲಾಗಿದೆ. ಅಸ್ಸಾಂನ ಎನ್‌ಆರ್‌ಸಿ ವರದಿಯ ಆಧಾರದ ಮೇಲೆ ಎನ್‌ಆರ್‌ಸಿಯಲ್ಲಿ ಪಟ್ಟಿ ಮಾಡದ 19 ಲಕ್ಷ ಜನರು, ಅದರಲ್ಲೂ ಬಹುಸಂಖ್ಯಾತರು ಹಿಂದೂಗಳೆನ್ನುವುದು ವಾಸ್ತವ. ಇವರ ಬಂಧನವನ್ನು ಕೇಂದ್ರ ಸರಕಾರ ಮಾಡಬಹುದೇ ಎಂದು ಅವರು ಪ್ರಶ್ನಿಸಿದರು.

ದೇಶದ ರಾಜ್ಯವೊಂದರಲ್ಲೇ ವ್ಯರ್ಥವೆಂದು ಹೇಳಲಾದ ಈ ಎನ್‌ಆರ್‌ಸಿಯನ್ನು ಇದೀಗ 130 ಕೋಟಿ ಜನರಿಗೆ ಇದನ್ನು ಅನ್ವಯಿಸುವುದೆಂದರೆ ಏನರ್ಥ. ಈ ದೇಶಕ್ಕಾಗಿ ಬೆವರು ಮತ್ತು ರಕ್ತವನ್ನು ನೀಡಿದ ಜನರು ತಮ್ಮ ಪೌರತ್ವವನ್ನು ಸಾಬೀತುಪಡಿಸಬೇಕಿರುವುದೇ ಎನ್‌ಆರ್‌ಸಿ. ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದವರು ಹೇಳಿದರು.

ದೇಶ ವಿಭಜನೆಯ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಜಾತ್ಯತೀತ ತತ್ವಗಳನ್ನು ನಂಬಿದ್ದರಿಂದ ಭಾರತ ದ್ವಿ ರಾಷ್ಟ್ರದ ಸಿದ್ಧಾಂತವನ್ನು ಸ್ವೀಕರಿಸಲಿಲ್ಲ. ಹಾಗಾಗಿ ಪೌರತ್ವ ತಿದ್ದುಪಡಿ ಮಸೂದೆ ಸಂವಿಧಾನದಲ್ಲಿ ಪ್ರತಿಪಾದಿಸಿರುವ ತತ್ವಗಳಿಗೆ ವಿರುದ್ಧವಾದುದು. ಮಾತ್ರವಲ್ಲದೆ ಇದು ದೇಶದಲ್ಲಿ ಮತ್ತಷ್ಟು ಆರ್ಥಿಕ ಕುಸಿತಕ್ಕೆ ಕಾರಣವಾಗಲಿದೆ ಎಂದು ಕಣ್ಣನ್ ಗೋಪಿನಾಥನ್ ಪ್ರತಿಪಾದಿಸಿದರು.

ಕಾಲೇಜಿನ ಪ್ರಾಂಶುಪಾಲ ತಾರನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಂಚಾಲಕರಾದ ಅಮಿತ್ ಎಸ್.ಎಂ. ಸ್ವಾಗತಿಸಿದರು. ಸಹಾಯಕ ಪ್ರೊಫೆಸರ್ ವಿನುತಾ ಕೆ., ಕಾರ್ಯಕ್ರಮ ಸಂಯೋಜಕಿ ದೀಪಿತಾ ಕುಮಾರ್ ಜೈನ್ ಉಪಸ್ಥಿತರಿದ್ದರು. ಸ್ವಾತಿ ಶೆಣೈ ಕಾರ್ಯಕ್ರಮ ನಿರೂಪಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News