ವರ್ಷ ಪೂರೈಸಿದ ಶಾಸಕ ಕಾಮತ್‌ರ ‘ನೋ ಹಾರ್ನ್ ಡೇ’ ಅಭಿಯಾನ

Update: 2019-12-10 11:05 GMT

ಮಂಗಳೂರು, ಡಿ.10: ಮಿತಿಮೀರಿದ ಶಬ್ದ ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಶಾಸಕ ಡಿ.ವೇದವ್ಯಾಸ್ ಕಾಮತ್ ಕಳೆದ ವರ್ಷ ಕೈಗೊಂಡ ‘ನೋ ಹಾರ್ನ್ ಡೇ’ ಅಭಿಯಾನವು ವರ್ಷ ಪೂರೈಸಿದೆ. ನಗರದಲ್ಲಿ ಹಲವಾರು ಆಸ್ಪತ್ರೆಗಳಿವೆ, ಶಾಲಾ ಕಾಲೇಜುಗಳಿವೆ. ವಾಹನಗಳ ಕರ್ಕಶ ಹಾರ್ನ್‌ಗಳ ಶಬ್ದದಿಂದ ಅದೆಷ್ಟೋ ಜನರಿಗೆ ಸಮಸ್ಯೆಯಾಗುತ್ತಿದೆ ಎನ್ನುವ ಕಾರಣದಿಂದ ವಾರದ ಒಂದು ದಿನ ಹಾರ್ನ್ ಮುಕ್ತ ದಿನವನ್ನಾಗಿ ಆಚರಿಸುವ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಅಭಿಯಾನದ ಪೂರ್ವಭಾವಿಯಾಗಿ ಬಸ್ ಚಾಲಕರು ಹಾಗೂ ಮಾಲಕರ ಸಂಘ, ರಿಕ್ಷಾ ಚಾಲಕರ ಸಂಘ, ಟಾಕ್ಸಿ ಚಾಲಕರ ಸಂಘದ ಜೊತೆ ಮಾತುಕತೆ ನಡೆಸಿ ನೋ ಹಾರ್ನ್ ಡೇ ಅಭಿಯಾನಕ್ಕೆ ಕೈ ಜೋಡಿಸುವಂತೆ ಶಾಸಕ ಕಾಮತ್ ಕರೆ ನೀಡಿದ್ದರು.

ಶಾಸಕರ ಮನವಿಗೆ ಸ್ಪಂದಿಸಿದ್ದ ಬಸ್ ಮಾಲಕರ ಸಂಘವು ಅಭಿಯಾನಕ್ಕೆ ಬೆಂಬಲವಾಗಿ ಹಲವು ಬಸ್‌ಗಳಲ್ಲಿನ ಕರ್ಕಶ ಹಾರ್ನ್‌ಗಳನ್ನು ತೆರವುಗೊಳಿಸಿ ಸಹಕರಿಸಿದ್ದವು. ಅಭಿಯಾನ ಪ್ರಾರಂಭವಾದ ಮೊದಲ ವಾರ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಜ್ಯೋತಿ ವೃತ್ತದ ಬಳಿ ವಾಹನ ಸವಾರರಿಗೆ ಗುಲಾಬಿ ಹೂ ವಿತರಿಸುವ ಮೂಲಕ ಶಬ್ದ ರಹಿತ ದಿನವನ್ನು ಆಚರಿಸುವಂತೆ ವಾಹನ ಚಾಲಕರಲ್ಲಿ ಜಾಗೃತಿ ಮೂಡಿಸಿದ್ದರು. ವಿದ್ಯಾರ್ಥಿಗಳೊಂದಿಗೆ ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳು ಕೂಡ ಈ ಅಭಿಯಾನದಲ್ಲಿ ಕೈ ಜೋಡಿಸಿತ್ತು.

ನಗರದ ಕಾಲೇಜುಗಳಿಗೆ ತೆರಳಿ ನೋ ಹಾರ್ನ್ ಡೇ ಅಭಿಯಾನದ ಕುರಿತು ಜಾಗೃತಿ ಮೂಡಿಸಲು ಶಾಸಕ ಕಾಮತ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿದ್ದರು. ಅಲ್ಲದೆ ವಿದ್ಯಾರ್ಥಿ ಹಾಗೂ ಶಿಕ್ಷಕರ ವಾಹನಗಳಿಗೆ ಸ್ಟಿಕ್ಕರ್ ಅಂಟಿಸುವ ಅಭಿಯಾನಕ್ಕೂ ಬೆಂಬಲ ವ್ಯಕ್ತವಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಕಾಮತ್, ಮಂಗಳೂರಿನಲ್ಲಿ ವಾಹನಗಳ ಹಾರ್ನ್ ಶಬ್ದದಿಂದ ಉಂಟಾಗುವ ಶಬ್ದಮಾಲಿನ್ಯವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಕಳೆದ ವರ್ಷದಿಂದ ಆಚರಿಸಿಕೊಂಡು ಬರುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನದ ಕುರಿತು ಪ್ರಚಾರ ನೀಡುತ್ತಾ ಸಾಧ್ಯವಾಗುವ ಮಟ್ಟಿಗೆ ಶಬ್ದ ಮಾಲಿನ್ಯ ತಡೆಗಟ್ಟಲು ನಮ್ಮಿಂದಿಗೆ ಕೈ ಜೋಡಿಸಿ ಎಂದು ಭಿನ್ನವಿಸಿದ್ದೇವೆ. ಸಾರ್ವಜನಿಕ ವಲಯದಲ್ಲಿ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗುತ್ತಿದೆಯಾದರೂ ಮತ್ತಷ್ಟು ಪ್ರಚಾರದ ಅವಶ್ಯಕತೆಯಿದೆ. ಈ ಹಿಂದೆ ಕಲೆಕ್ಟರ್ ಗೇಟ್‌ನಿಂದ ಹಂಪನಕಟ್ಟೆಯವರೆಗೆ ನೋ ಹಾರ್ನ್ ರೆನ್ ಕುರಿತು ಸಂಚಾರ ಪೋಲಿಸ್ ಇಲಾಖೆಯಿಂದ ಆದೇಶವಿದ್ದರೂ ಕೂಡ ಸಾರ್ವಜನಿಕರ ಬೆಂಬಲದ ಹೊರತಾಗಿ ಅದು ಅನುಷ್ಠಾನಕ್ಕೆ ಸಾಧ್ಯವಾಗಿಲ್ಲ. ಶಬ್ದ ಮಾಲಿನ್ಯ, ಪರಿಸರ ಮಾಲಿನ್ಯ ಇಂತಹ ಪ್ರಕೃತಿಯ ಮೇಲಿನ ಕೆಡುಕುಗಳು ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬರಬೇಕು ಎನ್ನುವ ಆಶಯ ಜನ ಸಮೂಹದ ಮನಸ್ಸಿನಲ್ಲಿ ಚಿಗುರೊಡೆಯಬೇಕು. ಆಗ ಮಾತ್ರ ಸ್ವಚ್ಛ - ಸುಂದರ- ಸ್ವಸ್ಥ ನಗರ ನಿರ್ಮಾಣ ಸಾಧ್ಯ. ಸಾರ್ವಜನಿಕರು ಈ ಅಭಿಯಾನವನ್ನು ತಮ್ಮ ದಿನಚರಿಯ ಭಾಗವಾಗಿ ರೂಢಿಸಿಕೊಂಡರೆ ಶಬ್ದ ಮಾಲಿನ್ಯಕ್ಕೆ ಕಡೆವಾಣ ಹಾಕಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

*ನೋ ಹಾರ್ನ್ ಡೇ ಸ್ಟಿಕ್ಕರ್ ವಿತರಣೆ
ಅಭಿಯಾನದ ಪ್ರಾರಂಭದಿಂದಲೂ ಹಂತಹಂತವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ರೀತಿಯ ಕಾರ್ಯಗಳು ನಡೆದಿತ್ತು. ಆಟೋ,ಬಸ್, ಟಾಕ್ಸಿ, ಹಾಗೂ ಕಾಲೇಜು ಆವರಣದಲ್ಲಿ ಸ್ವತಃ ಶಾಸಕ ಕಾಮತ್ ಸ್ಟಿಕರ್ ವಿತರಿಸುವ ಮೂಲಕ ಅಭಿಯಾನವು ಮತ್ತಷ್ಟು ಪುಷ್ಟಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News