ಪ್ರಶ್ನಿಸುವವರ ದಮನ ಪ್ರಜಾಪ್ರಭುತ್ವಕ್ಕೆ ಅಪಾಯ : ಕಣ್ಣನ್ ಗೋಪಿನಾಥನ್

Update: 2019-12-10 12:02 GMT

ಮಂಗಳೂರು, ಡಿ. 10: ಸರಕಾರದ ನಿರ್ಧಾರಗಳನ್ನು ಬೆಂಬಲಿಸುವುದು ಮತ್ತು ವಿರೋಧಿಸಲು ಪ್ರಜಾಪ್ರಭುತ್ವ ನಮಗೆ ಅವಕಾಶ ನೀಡಿದೆ. ಆದರೆ ಪ್ರಶ್ನಿಸಲು ಅವಕಾಶ ನೀಡದೆ ದಮನಿಸುವುದರಿಂದ ಪ್ರಜಾಪ್ರಭುತ್ವಕ್ಕೆ ಅಪಾಯ ಎಂದು ಕಣ್ಣನ್ ಗೋಪಿನಾಥನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಆಯೋಜಿಸಲಾದ ‘ಹ್ಯೂಮನೊ 2ಕೆ19’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಭಿವ್ಯಕ್ತಿ ಸ್ವಾತಂತ್ರವೆಂದರೆ ಸರಕಾರದ ನಡೆ, ನಿರ್ಧಾರಗಳನ್ನು ಬೆಂಬಲಿಸುವು ಮಾತ್ರವಲ್ಲ. ಬದಲಾಗಿ ಪ್ರಜಾಪ್ರಭುತ್ವದಲ್ಲಿ ಆಡಳಿತ ನಡೆಸುವವರ ನಿರ್ಧಾರಗಳು ತಪ್ಪೆಂದು ಕಂಡಾಗ ಅದನ್ನು ಪ್ರಶ್ನಿಸುವುದು, ಟೀಕಿಸುವುದೇ ನಿಜವಾದ ಅಭಿವ್ಯಕ್ತಿ ಸ್ವಾತಂತ್ರ. ಆದರೆ ಇವೆರಡನ್ನೂ ಮಾಡದೆ ಮೌನವಾಗಿರುವುದೇ ದೇಶದ್ರೋಹ ಎಂಬುದು ನನ್ನ ಅನಿಸಿಕೆ ಎಂದವರು ಹೇಳಿದರು.

ಅಭಿವ್ಯಕ್ತಿ ಸ್ವಾತಂತ್ರ ನಮ್ಮ ಜೀವಂತಿಕೆಗೆ ಸಾಕ್ಷವಾಗಿದೆ. ಆದರೆ ನಮ್ಮ ನಡುವೆ, ಇಂದು ಸರಕಾರದ ನಿರ್ಧಾರಗಳನ್ನು ಪ್ರಶ್ನಿಸಿದಾಗ ಅವರಿಗೆ ದೇಶದ್ರೋಹದ ಪಟ್ಟ, ವ್ಯಭಿಚಾರಿ, ಭ್ರಷ್ಟಾಚಾರಿ ಎಂಬ ಹಣೆಪಟ್ಟಿಯನ್ನು ಕಟ್ಟಲಾಗುತ್ತದೆ. ಆದರೆ ಈ ಬಗ್ಗೆ ತರ್ಕಿಸುವ, ಭಿನ್ನಾಭಿಪ್ರಾಯಗಳ ಬಗ್ಗೆ ಚರ್ಚಿಸುವ ವ್ಯವಧಾನ ನಮ್ಮ ಇಂದಿನ ಅಗತ್ಯವಾಗಿದೆ. ಇದುವೇ ಮಾನವ ಹಕ್ಕುಗಳ ರಕ್ಷಣೆ ಎಂದು ಅವರು ಪ್ರತಿಪಾದಿಸಿದರು. ಇದಕ್ಕಾಗಿ ಜಾಗೃತಿ ಮೂಡಿಸುವ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.

ಮಾತು ಆರಂಭಿಸುವ ವೇಳೆ ತನ್ನ ಪರಿಚಯ ಖುದ್ದು ಮಾಡಿಕೊಂಡ ಕಣ್ಣನ್, ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿರುವುದು ಯಾಕೆ ಎಂದು ತಿಳಿದಿದೆಯಾ ಎಂದು ಪ್ರಶ್ನಿಸಿದಾಗ, ಕಾಶ್ಮೀರದಲ್ಲಿ 370 ವಿಧಿಯನ್ನು ರದ್ದುಗೊಳಿಸಿದ್ದರಿಂದ ಉಂಟಾದ ಮಾನವ ಹಕ್ಕುಗಳ ಉಲ್ಲಂಘನೆಯನ್ನು ವಿರೋಧಿಸಿ ರಾಜೀನಾಮೆ ನೀಡಿದ್ದಾಗಿ ಕೆಲ ವಿದ್ಯಾರ್ಥಿಗಳು ಉತ್ತರಿಸಿದರು.

ಬಳಿಕ ಮಾತು ಮುಂದುವರಿಸಿದ ಕಣ್ಣನ್, ದೇಶದ ಪ್ರತಿಯೊಬ್ಬ ಪ್ರಜೆಯ ಹಕ್ಕುಗಳು ರಕ್ಷಣೆಯಾದಾಗ ಮಾತ್ರವೇ ಪ್ರಜಾಪ್ರಭುತ್ವ ನೀಡಿರುವ ಮಾನವ ಹಕ್ಕುಗಳ ರಕ್ಷಣೆ ಮೌಲ್ಯಯುತವಾಗಿರುತ್ತದೆ. ಪ್ರತಿಯೊಬ್ಬರ ಮಾನವ ಹಕ್ಕುಗಳ ರಕ್ಷಣೆಯೇ ದೇಶದ ಹಿತಾಸಕ್ತಿ ಇದಕ್ಕಿಂತ ಮಿಗಿಲಾದ ಹಿತಾಸಕ್ತಿ ಬೇರೊಂದಿಲ್ಲ ಎಂದು ಅವರು ಹೇಳಿದರು.

ಆ. 5ರಂದು ನಾನು ಮನೆಗೆ ಹಿಂತಿರುಗಿದಾಗ ನನ್ನ ಪತ್ನಿ ನನ್ನಲ್ಲಿ ‘‘ ಕಾಶ್ಮೀರದಲ್ಲಿ ಜನರನ್ನು ಯಾಕೆ ಬಂಧಿಸಲಾಗುತ್ತಿದೆ. ಅವರ ಜತೆಗಿನ ಸಂವಹನ ವ್ಯವಸ್ಥೆಯನ್ನೇ ಕಡಿದುಹಾಕಿರುವುದೇಕೆ ಎಂದು ಪ್ರಶ್ನಿಸಿದಾಗ ನನ್ನೆದುರಿಗೆ ಬಂದಿದ್ದೇ ಈ ಮಾನವ ಹಕ್ಕುಗಳು ಎಂದವರು ಹೇಳಿದರು.

370 ವಿಧಿಯನ್ನು ರದ್ದುಪಡಿಸಿದ ಕೇಂದ್ರ ಸರಕಾರ ಮಾಡಿದ್ದೇನು ? ಜಮ್ಮುಕಾಶ್ಮೀರದಲ್ಲಿ ಸಂವಹನ ವ್ಯವಸ್ಥೆಯನ್ನೇ ಕಡಿದುಹಾಕಿತು. ನೆಟ್‌ವರ್ಕ್, ದೂರವಾಣಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೂ ಸ್ಥಗಿತಗೊಳಿಸಲಾಯಿತು. ಜನರಿಂದ ಆಯ್ಕೆಯಾದ ಸಂಸದರು ಇನ್ನೂ ಜೈಲಿನಲ್ಲಿದ್ದಾರೆ. ಮಾಜಿ ಮುಖ್ಯಮಂತ್ರಿಗಳು ಇನ್ನೂ ಬಂಧನದಲ್ಲಿದ್ದಾರೆ. ಪ್ರಭಾವಿ ವ್ಯಕ್ತಿಗಳೆಲ್ಲಾ ಗೃಹ ಬಂಧನ ಅಥವಾ ಜೈಲಿನಲ್ಲಿದ್ದಾರೆ. ಹೀಗಿರುವಾಗ ಜನರು ಹೊರಗೆ ಬರುವುದು ಹೇಗೆ? ಪ್ರತಿಭಟಿಸುವುದು ಹೇಗೆ? ಸರಕಾರ ನಿರ್ಧಾರ ಕೈಗೊಂಡಾಕ್ಷಣ ಅದಕ್ಕೆ ಪ್ರತಿಕ್ರಿಯೆ ನೀಡುವ ಸಂಪೂರ್ಣ ಮಾನವ ಹಕ್ಕು, ಸ್ವಾತಂತ್ರವನ್ನೇ ಉಲ್ಲಂಘಿಸಲಾಗಿದೆ. ಮತ್ತೆ ಎಲ್ಲಿಯ ಅಭಿವ್ಯಕ್ತಿ ಸ್ವಾತಂತ್ರ ? ನಾಲ್ಕು ತಿಂಗಳು ಕಳೆದಿದೆ. ಸಂವಹನ ವ್ಯವಸ್ಥೆ ಭಾಗಶ: ಸಹಜ ಸ್ಥಿತಿಗೆ ತರಲಾಗಿದೆ. ಆದರೆ ಯಾವುದೇ ಇಂಟರ್‌ನೆಟ್, ಮೊಬೈಲ್‌ಗಳು ಕಾರ್ಯ ನಿರ್ವಹಿಸುತ್ತಿಲ್ಲ. ದೀರ್ಘಾವಧಿ ಕರ್ಫ್ಯೂ ಹೇರಿಕೆ ಮಾಡಲಾಗಿತ್ತು. ಈ ರೀತಿ ಸರಕಾರವೊಂದು ಭಾರತೀಯ ಪ್ರಜೆಗಳ ಹಕ್ಕನ್ನು ಕಸಿದಾಗ ಇತರ ನಾಗರಿಕರು ಏನು ಮಾಡಬೇಕಿತ್ತು ? ಎಂದು ಅವರು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು.

ಐಎಎಸ್ ಅಧಿಕಾರಿಯೊಬ್ಬರ ಬಂಧನ ಮತ್ತು ಅವರನ್ನು ಪತ್ತೆಹಚ್ಚುವಂತೆ ಕೋರಿ ಅವರ ಪತ್ನಿ ಹಾಕಿದ್ದ ಹೇಬಿಯಸ್ ಕಾರ್ಪಸ್ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದ ಕಣ್ಣನ್ ಗೋಪಿನಾಥನ್, ಜಮ್ಮು ಕಾಶ್ಮೀರದ ಹೈಕೋರ್ಟ್‌ನಲ್ಲಿ 254 ಹೇಬಿಯಸ್ ಕಾರ್ಪಸ್ ಪ್ರಕರಣಗಳು ಇನ್ನೂ ಪಟ್ಟಿಯೇ ಆಗದೆ ಬಾಕಿ ಉಳಿದಿದೆ. ಈ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪ್ರಶ್ನಿಸುವುದು ತಪ್ಪೇ ? ಸರಕಾರದ ನಿರ್ಧಾರಗಳ ಪರ ಹಾಗೂ ವಿರೋಧಗಳನ್ನು ಮಾಡುವವರು ದೇಶದ್ರೋಹಿಗಳು ಅಥವಾ ದೇಶಪ್ರೇಮಿಗಳೆಂದು ಬಿಂಬಿಸುವ ಪ್ರಯತ್ನವನ್ನು ಮಾಡಲಾಗುತ್ತದೆ. ಆದರೆ ವಾಸ್ತವದಲ್ಲಿ ನಮಗೆ ಈ ವಿಷಯವೇ ಸಂಬಂಧಪಟ್ಟಿದ್ದಲ್ಲ ಎಂದು ಸುಮ್ಮನಿರುವುದೇ ದೇಶದ್ರೋಹಿಗಳು ಎಂದು ಅವರು ಹೇಳಿದರು.

ಸರಕಾರದ ನಿರ್ಧಾರಗಳನ್ನು ಪ್ರಶ್ನಿಸುವುದು ದೇಶದ್ರೋಹವೇ?

ನಮ್ಮ ದೇಶದ ಭಾಗವೊಂದರ, ನಮ್ಮದೇ ನಾಗರಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ. ವ್ಯವಸ್ಥಿತವಾಗಿ ನಮ್ಮ ಹಕ್ಕುಗಳನ್ನು, ನಮ್ಮ ಜನರ ಹಕ್ಕುಗಳನ್ನು ಕಸಿಯುತ್ತಿರುವಾಗ ಅದು ತಪ್ಪು ಎನ್ನುವುದು ನಮ್ಮ ಹಕ್ಕು. ಕಾಶ್ಮೀರದ ವಿಷಯದಲ್ಲಿ ಮಾಧ್ಯಮ ಸತ್ಯವನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕಾಗಿತ್ತು. ಆದರೆ ಅಲ್ಲಿ ಸಂಭ್ರಮಾಚರಣೆ ಮಾಡುತ್ತಿರುವುದನ್ನು ಮಾತ್ರವೇ ತೋರಿಸಲಾಯಿತು. ಅಲ್ಲಿ ಜನರು ಸಂತಸದಲ್ಲಿದ್ದಾರೆ, ಸಿಹಿ ಹಂಚುತ್ತಿದ್ದಾರೆ, ಎಲ್ಲವೂ ಸಹಜವಾಗಿದೆ ಎಂಬುದನ್ನು ಮಾತ್ರವೇ ಬಿಂಬಿಸಲಾಯಿತು. ಸರಕಾರದ ಪರವಾಗಿ ಮಾತ್ರವೇ ಕೆಲಸ ಮಾಡುವುದೆಂದರೆ ಏನರ್ಥ. ಸರಕಾರಗಳು ಸ್ಥಿರವಲ್ಲ. ಅವುಗಳ ನಿರ್ಧಾರವೂ ಪ್ರಶ್ನಾತೀತವಲ್ಲ. ಈ ಸರಕಾರಗಳನ್ನು ರಚಿಸುವುದು ನಾವು ನಾಗರಿಕರು. ಹಾಗಾಗಿ ಸರಕಾರದ ನಿರ್ಧಾರಗಳು ಸರಿ ಅನ್ನಿಸದಾಗ ಅವುಗಳನ್ನು ಪ್ರಶ್ನಿಸುವ, ವಿರೋಧಿಸುವ ಹಕ್ಕನ್ನು ನಮಗೆ ಸಂವಿಧಾನ ನೀಡಿದೆ. ಸರಕಾರದ ನಿರ್ಧಾರಗಳಿಗೆ ಪ್ರಶ್ನಿಸುವುದೆಂದರೆ ಅದು ದೇಶದ್ರೋಹ ಹೇಗಾಗುತ್ತದೆ ಎಂದವರು ಪ್ರಶ್ನಿಸಿದರು.

ಜಮ್ಮು ಕಾಶ್ಮೀರದ ಮಾನವ ಹಕ್ಕಿನ ಉಲ್ಲಂಘನೆಯನ್ನು ನಾನು ಪ್ರಶ್ನಿಸಿರುವುದು

ಜಮ್ಮು ಕಾಶ್ಮೀರದಲ್ಲಿ 370ನೆ ವಿಧಿಯನ್ನು ಹಿಂಪಡೆಯುವುದಾಗಲಿ, ಪೆಟ್ರೋಲ್ ಬೆಲೆ ಏರಿಕೆ ಮಾಡಿವುದಾಗಿರಲಿ, ಅರಣ್ಯದಲ್ಲಿ ಮರಗಳನ್ನು ಕಡಿಯುವುದಾಗಿರಲಿ, ಪ್ರಜಾಪ್ರಭುತ್ವದಲ್ಲಿ ಸರಕಾರಕ್ಕೆ ಯಾವುದೇ ರೀತಿಯ ನಿರ್ಧಾರಗಳನ್ನು ಕೈಗೊಳ್ಳುವ ಹಕ್ಕಿದೆ. ಆದರೆ ಅದರ ಬಳಿಕ ಆ ನಿರ್ಧಾರಗಳಿಗೆ ಸ್ಪಂದಿಸುವುದು ಕೂಡಾ ನಾಗರಿಕರ ಹಕ್ಕು. ಯಾಕೆಂದರೆ ಸರಕಾರ ನಾವು ಆಯ್ಕೆ ಮಾಡಿರುವಂತದ್ದು. ನಮ್ಮಿಂದ ಸರಕಾರ ರಚನೆಯಾಗಿರುವುದು. ನಮ್ಮದು ಪ್ರಜಾಪ್ರಭುತ್ವ. ಯಾವುದೇ ಅಧಿಕಾರದಲ್ಲಿರುವ ಸರಕಾರ ತನಗೆ ಸರಿ ಎನ್ನಿಸಿದ ನಿರ್ಧಾರಗಳನ್ನು ಅದು ಸಂವಿಧಾನಿಕ ಅಥವಾ ಅಸಂವಿಧಾನಿಕವಾಗಿದ್ದರೂ ಕೈಗೊಳ್ಳಬಹುದು. ಅಸಂವಿಧಾನಿಕವಾಗಿದ್ದಲ್ಲಿ ಅದನ್ನು ಮತ್ತೆ ನ್ಯಾಯಾಯಲದಲ್ಲಿ ಚಾಲೆಂಜ್ ಮಾಡಬಹುದು. ಅದು ಬೇರೆ ವಿಷಯ. ಆದರೆ ನಿರ್ಧಾರ ತಪ್ಪೆಂದು ಅನ್ನಿಸಿದಾಗ ಪ್ರತಿಭಟಿಸುವ ಹಕ್ಕು ನಾಗರಿಕರದ್ದಾಗಿರುತ್ತದೆ. ಆದರೆ ಸರಕಾರದ ನಿರ್ಧಾರಕ್ಕೆ ಪ್ರತಿಕ್ರಿಯಿಸುವ ಹಕ್ಕನ್ನೇ ಕಸಿದುಕೊಳ್ಳುವುದು ಮಾನವ ಹಕ್ಕುಗಳ ಉಲ್ಲಂಘನೆ. ಅದುವೇ ಕಾಶ್ಮೀರದಲ್ಲಿ ಆಗಿರುವುದು. ಆ ಹಕ್ಕಿನ ಉಲ್ಲಂಘಯನ್ನೇ ನಾನು ವಿರೋಧಿಸಿದ್ದು ಎಂದು ಕಣ್ಣನ್ ಗೋಪಿನಾಥ್ ತಮ್ಮ ಅಭಿಪ್ರಾಯವನ್ನು ವಿವರಿಸಿದರು.

ಭಿನ್ನಾಭಿಪ್ರಾಯಗಳ ಬಗ್ಗೆ ಪರಸ್ಪರ ಚರ್ಚೆಗೆ ಅವಕಾಶವಾಗಲಿ

ಜಮ್ಮು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ವಿರೋಧಿಸಿ ರಾಜೀನಾಮೆ ನೀಡಿದ್ದೀರಿ ? ಆದರೆ ಹಿಂದೆ ಕಾಶ್ಮೀರಿ ಪಂಡಿತರ ಮೇಲಿನ ದಾಳಿಯ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ವಿದ್ಯಾರ್ಥಿಯೊಬ್ಬರು ಪ್ರಶ್ನಿಸಿದರು.

ಅದಕ್ಕೆ ನಗುತ್ತಾ ಪ್ರತಿಕ್ರಿಯಿಸಿದ ಕಣ್ಣನ್, ಇಂತಹ ಹಲವಾರು ಪ್ರಶ್ನೆಗಳು ನನಗೆ ಎದುರಾಗಿವೆ. ಖಂಡಿತಾ ನಾನು ಆ ಸಮಯದಲ್ಲಿ 3 ವರ್ಷದ ಮಗು. 1989ರಲ್ಲಿ ಈ ಘಟನೆ ನಡೆದಾಗ ಅಲ್ಲಿ ರಾಜ್ಯಪಾಲರಾಗಿದ್ದವರು ಜಗ್‌ಮೋಹನ್, ವಿ.ಪಿ. ಸಿಂಗ್ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ಈ ಸರಕಾರ, ರಾಜ್ಯಪಾಲರ ಹಿನ್ನೆಲೆಯನ್ನು ನಾನು ಈಗ ವಿವರಿಸಬೇಕಾಗಿಲ್ಲ. ಆದರೆ ಆಗ ಧ್ವನಿ ಎತ್ತಬೇಕಾಗಿದ್ದು ಯಾರು? ಎಂದು ಕಣ್ಣನ್ ಪ್ರಶ್ನಿಸಿದರು.

ಮತ್ತೆ ಮಾತು ಮುಂದುವರಿಸಿದ ಅವರು, ನಿಜ ಅದು ಘಟಿಸಿದ ಹೋದ ಘಟನೆ. ಆ ಸಂದರ್ಭ ನಡೆದ ಘಟನೆಯ ಸಂತ್ರಸ್ತರಿಗೆ ಇನ್ನೂ ಪುನರ್ವಸತಿಯನ್ನು ಕಲ್ಪಿಸಲಾಗಿಲ್ಲ. ಆ ಘಟನೆಗೆ ಪ್ರತೀಕಾರವಾಗಿ ಈ ರೀತಿ ಮಾಡುವುದು ಸರಿಯೇ ? ಅದನ್ನು ಜವಾಬ್ಧಾರಿಯುತ ನಾಗರಿಕನಾಗಿ ನಾನು ಸುಮ್ಮನಿರುವುದು ಸರಿಯೇ ಎಂದು ಕಣ್ಣನ್ ಪ್ರಶ್ನಿಸಿದರು.

ಯಾರಿಗೂ ನನ್ನ ಅಭಿಪ್ರಾಯವನ್ನು ಹೇರಬೇಕೆಂಬುದಾಗಲಿ, ಅಥವಾ ಮನವರಿಕೆ ಮಾಡಬೇಕೆಂಬುದಾಗಲಿ ನನ್ನ ಉದ್ದೇಶವಲ್ಲ. ಆದರೆ ವಾಸ್ತವವನ್ನು ಅರ್ಥ ಮಾಡಿಕೊಂಡು ಗತಕಾಲದ ಚರಿತ್ರೆಯನ್ನು ತಿಳಿದುಕೊಂಡು ಚರ್ಚೆಯ ಮೂಲಕ ನಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಬೇಕೆಂಬುದು ನನ್ನ ಉದ್ದೇಶ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News