ದಕ್ಷಿಣ ಕೊರಿಯದ ‘ಡೇವೂ’ ಸ್ಥಾಪಕ ನಿಧನ

Update: 2019-12-10 16:07 GMT

ಸಿಯೋಲ್ (ದಕ್ಷಿಣ ಕೊರಿಯ), ಡಿ. 10: ಒಂದು ಕಾಲದಲ್ಲಿ ಯಶಸ್ವಿ ಉದ್ಯಮವಾಗಿದ್ದ, ಆದರೆ ಈಗ ಮುಚ್ಚಿರುವ ದಕ್ಷಿಣ ಕೊರಿಯದ ಡೇವೂ ಗ್ರೂಪ್‌ನ ಸ್ಥಾಪಕ ಕಿಮ್ ವೂ-ಚೂಂಗ್ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.

ಒಂದು ಕಾಲದಲ್ಲಿ ದಕ್ಷಿಣ ಕೊರಿಯದ ಎರಡನೇ ಅತಿ ದೊಡ್ಡ ಉದ್ಯಮ ಸಮೂಹವಾಗಿದ್ದ ಡೇವೂ, 1950-53ರ ಕೊರಿಯ ಯುದ್ಧದ ಬಳಿಕ ದಕ್ಷಿಣ ಕೊರಿಯ ಸಾಧಿಸಿದ ಅಮೋಘ ಅಭಿವೃದ್ಧಿಯ ದ್ಯೋತಕವಾಗಿತ್ತು. ಆದರೆ, ನಂತರದ ವರ್ಷಗಳಲ್ಲಿ ಸಾಲದ ಹೊರೆ ತಾಳಲಾರದೆ ಡೇವೂ ವ್ಯಾಪಾರ ಸಾಮ್ರಾಜ್ಯ ಕುಸಿಯಿತು.

ಕಿಮ್ ಬಟ್ಟೆ ವ್ಯಾಪಾರಿಯಾಗಿ ತನ್ನ ವೃತ್ತಿ ಜೀವನ ಆರಂಭಿಸಿದರು. ಅವರು 1967ರಲ್ಲಿ ಬಟ್ಟೆ ಕಂಪೆನಿಯಲ್ಲಿ 5,000 ಡಾಲರ್ ಹೂಡಿಕೆ ಮಾಡುವ ಮೂಲಕ ಡೇವೂ ಕಂಪೆನಿಗೆ ಚಾಲನೆ ನೀಡಿದರು.

ಡೇವೂ ಕಂಪೆನಿ ತನ್ನ ಉಛ್ರಾಯ ಸ್ಥಿತಿಯಲ್ಲಿ 110 ದೇಶಗಳಲ್ಲಿ 3 ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿತ್ತು. ವಾಹನ ನಿರ್ಮಾಣ, ಕಟ್ಟಡ ನಿರ್ಮಾಣ, ಹಡಗು ನಿರ್ಮಾಣ, ಶೇರು ಮಾರುಕಟ್ಟೆ ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅದು ಹೂಡಿಕೆ ಮಾಡಿತ್ತು.

ಸಾಲದ ಹೊರೆ ತಾಳದೆ ಕುಸಿದ ಸಾಮ್ರಾಜ್ಯ:

ಕಿಮ್‌ರ ಆಕ್ರಮಣಕಾರಿ ವಿಸ್ತರಣಾ ಧೋರಣೆಯಿಂದಾಗಿ ಅವರ ಡೇವೂ ಒಡೆತನದ 41 ಸಹ ಕಂಪೆನಿಗಳ ಸಾಲಗಳ ಮೊತ್ತ ಬೆಳೆಯಿತು. ಇದರಿಂದಾಗಿ, 1990ರ ದಶಕದ ಕೊನೆಯ ವೇಳೆಗೆ ಉಂಟಾದ ಏಶ್ಯ ಆರ್ಥಿಕ ಬಿಕ್ಕಟ್ಟಿನ ಅವಧಿಯಲ್ಲಿ ಸಾಲ ಮರುಪಾವತಿ ಮಾಡಲಾಗದ ಸ್ಥಿತಿಗೆ ದಕ್ಷಿಣ ಕೊರಿಯ ಬಂದಿತ್ತು.

1999ರಲ್ಲಿ 75 ಬಿಲಿಯ ಡಾಲರ್ (ಸುಮಾರು 5.32 ಲಕ್ಷ ಕೋಟಿ ರೂಪಾಯಿ) ಸಾಲದೊಂದಿಗೆ ಅವರ ಡೇವೂ ಕಂಪೆನಿ ಕುಸಿದಾಗ ಅವರು ದಕ್ಷಿಣ ಕೊರಿಯದಿಂದ ಪಲಾಯನಗೈದರು.

ಡೇವೂ ಸಮೂಹದ ಡೇವೂ ಮೋಟರನ್ನು ಅಮೆರಿಕದ ವಾಹನ ತಯಾರಿಕಾ ಕಂಪೆನಿ ಜನರಲ್ ಮೋಟರ್ಸ್ 2000ದ ದಶಕದ ಆರಂಭದಲ್ಲಿ ಖರೀದಿಸಿತು. ಹಲವಾರು ವರ್ಷಗಳ ವಿದೇಶ ವಾಸದ ಬಳಿಕ 2005ರಲ್ಲಿ ಮರಳಿದ ಅವರನ್ನು ಬಂಧಿಸಿ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News