ಏಶ್ಯ ದೇಶಗಳ ಮನವೊಲಿಕೆಗಾಗಿ ಚೀನಾದಿಂದ ಬಿಲಿಯಗಟ್ಟಳೆ ಡಾಲರ್: ವರದಿ

Update: 2019-12-10 15:48 GMT

ವಾಶಿಂಗ್ಟನ್, ಡಿ. 10: ಏಶ್ಯದ ದೇಶಗಳ ಮನವೊಲಿಸಿಕೊಳ್ಳುವುದಕ್ಕಾಗಿ ಚೀನಾ ಬಿಲಿಯಗಟ್ಟಳೆ ಡಾಲರ್‌ಗಳನ್ನು ವ್ಯಯಿಸುತ್ತಿದೆ, ಆದರೆ ಈ ವಲಯದ ಸಾಮಾನ್ಯ ಜನರ ಹೃದಯ ಮತ್ತು ಮನಸ್ಸುಗಳನ್ನು ಗೆಲ್ಲಲು ಅದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಅಧ್ಯಯನವೊಂದು ಮಂಗಳವಾರ ತಿಳಿಸಿದೆ.

ಚೀನಾದ ಜಾಗತಿಕ ರಾಜತಾಂತ್ರಿಕತೆಯನ್ನು ಬಲಪಡಿಸುವುದಕ್ಕಾಗಿ, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆರು ವರ್ಷಗಳಲ್ಲಿ ಚೀನಾದ ವಿದೇಶ ವ್ಯವಹಾರಗಳ ಬಜೆಟನ್ನು 3000 ಕೋಟಿ ಯುವಾನ್‌ನಿಂದ 6,000 ಕೋಟಿ ಯುವಾನ್‌ಗೆ ದ್ವಿಗುಣಗೊಳಿಸಿದ್ದಾರೆ ಎಂದು ಅಮೆರಿಕದ ವರ್ಜೀನಿಯದ ಕಾಲೇಜ್ ಆಫ್ ವಿಲಿಯಮ್ ಆ್ಯಂಡ್ ಮೇರಿಯಲ್ಲಿರುವ ಏಡ್‌ಡೇಟ ರಿಸರ್ಚ್ ಲ್ಯಾಬ್ ಹೇಳಿದೆ.

‘‘ಸಂಭಾವ್ಯ ಬೆದರಿಕೆಗಳನ್ನು ಹಿಮ್ಮೆಟ್ಟಿಸಲು, ಆಂತರಿಕ ಅನಾನುಕೂಲತೆಗಳನ್ನು ಮೀರಿ ನಿಲ್ಲಲು ಹಾಗೂ ಪ್ರಾದೇಶಿಕ ಸ್ಪರ್ಧಿಗಳನ್ನು ಕಂಗೆಡಿಸಲು ಚೀನಾದ ಬತ್ತಳಿಕೆಯಲ್ಲಿರುವ ಒಂದು ಪ್ರಮುಖ ಅಸ್ತ್ರವೆಂದರೆ ಸಾರ್ವಜನಿಕರ ಮನವೊಲಿಸುವುದು’’ ಎಂದು ವರದಿ ಅಭಿಪ್ರಾಯಪಟ್ಟಿದೆ.

ದಕ್ಷಿಣ ಮತ್ತು ಮಧ್ಯ ಏಶ್ಯವನ್ನು ಪ್ರಭಾವಿತಗೊಳಿಸಲು ಚೀನಾದ ಬತ್ತಳಿಕೆಯಲ್ಲಿರುವ ಅಸ್ತ್ರಗಳೆಂದರೆ, ಬೃಹತ್ ಮೂಲಸೌಕರ್ಯ ಹೂಡಿಕೆಗಳು, ಸರಕಾರಿ ಬೆಂಬಲಿತ ಮಾಧ್ಯಮಗಳನ್ನು ಬಳಕೆ, ಅವಳಿ ನಗರಗಳ ನಿರ್ಮಾಣ, ಸೇನಾ ರಾಜತಾಂತ್ರಿಕತೆ ಮತ್ತು ಕನ್‌ಫ್ಯೂಶಿಯಸ್ ಇನ್‌ಸ್ಟಿಟ್ಯೂಟ್‌ಗಳು ಎಂದು ಸಂಶೋಧನೆ ಹೇಳುತ್ತದೆ.

ಕನ್‌ಫ್ಯೂಶಿಯಸ್ ಇನ್‌ಸ್ಟಿಟ್ಯೂಟ್‌ಗಳ ಮೂಲಕ ಚೀನಾದ ಭಾಷೆ ಮತ್ತು ಸಂಸ್ಕೃತಿಯನ್ನು ಕಲಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News