ಅನಿವಾಸಿ ಭಾರತೀಯರು, ಚೀನೀಯರನ್ನು ನೋಡಿ ಕಲಿಯಿರಿ!

Update: 2019-12-10 15:57 GMT

ಇಸ್ಲಾಮಾಬಾದ್, ಡಿ. 10: ವಿದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರು ಮತ್ತು ಚೀನೀಯರನ್ನು ನೋಡಿ ಕಲಿಯಿರಿ, ಅವರಂತೆ ನೀವು ಕೂಡ ತಾಯ್ನಾಡಿನಲ್ಲಿ ಹೂಡಿಕೆ ಮಾಡಿ ಎಂದು ವಿದೇಶಗಳಲ್ಲಿ ವಾಸಿಸುತ್ತಿರುವ ಪಾಕಿಸ್ತಾನೀಯರಿಗೆ ಆ ದೇಶದ ಪ್ರಧಾನಿ ಇಮ್ರಾನ್ ಖಾನ್ ಕರೆ ನೀಡಿದ್ದಾರೆ.

ಪಾಕಿಸ್ತಾನದ ಕಳೆಗುಂದಿದ ಆರ್ಥಿಕತೆಗೆ ಚೈತನ್ಯ ನೀಡಲು ಭ್ರಷ್ಟಾಚಾರರಹಿತ ಆಡಳಿತವನ್ನು ನೀಡುವುದಾಗಿ ಇಮ್ರಾನ್ ಖಾನ್ ಅನಿವಾಸಿ ಪಾಕಿಸ್ತಾನೀಯರಿಗೆ ಭರವಸೆ ನೀಡಿದ್ದಾರೆ.

ಸೋಮವಾರ ಇಸ್ಲಾಮಾಬಾದ್‌ನಲ್ಲಿ ಭ್ರಷ್ಟಾಚಾರ ನಿಗ್ರಹ ದಿನದ ಸಂದರ್ಭದಲ್ಲಿ ಏರ್ಪಡಿಸಲಾದ ಸಮಾರಂಭದಲ್ಲಿ ಮಾತನಾಡಿದ ಅವರು, ಅಪರಿಮಿತ ಭ್ರಷ್ಟಾಚಾರದಿಂದಾಗಿ ಪಾಕಿಸ್ತಾನವು ಅಸ್ತಿತ್ವದ ಬೆದರಿಕೆಯನ್ನು ಎದುರಿಸುತ್ತಿದೆ ಎಂದರು.

‘‘ಯುವಕರ ಶಿಕ್ಷಣ, ಸಂಶೋಧನೆ ಮತ್ತು ಉನ್ನತ ಶಿಕ್ಷಣಕ್ಕಾಗಿ ನಾವು ವ್ಯಯಿಸಬೇಕಾಗಿದ್ದ ಹಣವನ್ನು ಸಮುದ್ರಗಳ ಆಚೆಗೆ ಅರಮನೆಗಳನ್ನು ನಿರ್ಮಿಸಲು ಹಾಗೂ ಬೃಹತ್ ಬ್ಯಾಂಕ್ ಖಾತೆಗಳನ್ನು ತುಂಬಲು ಬಳಸಲಾಗಿದೆ’’ ಎಂದು ಅವರು ಹೇಳಿದರು.

 ಭ್ರಷ್ಟಾಚಾರವು ತಮ್ಮ ಬದುಕಿನ ಮೇಲೆ ಬೀರಬಹುದಾದ ದುಷ್ಪರಿಣಾಮಗಳ ಬಗ್ಗೆ ಪಾಕಿಸ್ತಾನಿ ಜನರಿಗೆ ಅರಿವಿಲ್ಲದಿರುವುದಕ್ಕಾಗಿ ಅವರು ವಿಷಾದಿಸಿದರು.

‘‘ವಿದೇಶಗಳಲ್ಲಿರುವ ಚೀನೀಯರು ಚೀನಾದಲ್ಲಿ ಹೂಡಿಕೆ ಮಾಡಿದರು. ವಿದೇಶಗಳಲ್ಲಿರುವ ಭಾರತೀಯರು ಭಾರತದಲ್ಲಿ ಹೂಡಿಕೆಗಳನ್ನು ಮಾಡಿದರು. ಅವರ ಆರ್ಥಿಕತೆಗಳು ಬೆಳೆದವು’’ ಎಂದು ಖಾನ್ ಹೇಳಿರುವುದಾಗಿ ಆಡಳಿತಾರೂಢ ತೆಹ್ರೀಕೆ ಇನ್ಸಾಫ್ ಪಕ್ಷದ ಅಧಿಕೃತ ಟ್ವಿಟರ್ ಖಾತೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News