ಸ್ಪಷ್ಟನೆ ನೀಡುವವರೆಗೂ ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆಗೆ ಬೆಂಬಲ ನೀಡಲಾರೆವು: ಶಿವಸೇನೆ

Update: 2019-12-19 07:16 GMT
Photo: PTI

ಮುಂಬೈ, ಡಿ. 10: ಲೋಕಸಭೆಯಲ್ಲಿ ಅಂಗೀಕಾರಗೊಂಡ ಪೌರತ್ವ ತಿದ್ದುಪಡಿ ಮಸೂದೆ ಕುರಿತ ತನ್ನ ಪ್ರಶ್ನೆಗೆ ಸ್ಪಷ್ಟನೆ ನೀಡುವ ವರೆಗೆ ರಾಜ್ಯ ಸಭೆಯಲ್ಲಿ ಮಸೂದೆಗೆ ಶಿವಸೇನೆ ಬೆಂಬಲ ನೀಡಲಾರದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಂಗಳವಾರ ಹೇಳಿದ್ದಾರೆ.

ಧಾರ್ಮಿಕ ಕಿರುಕುಳ ಎದುರಿಸಿದ ಬಳಿಕ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನದಿಂದ ಆಗಮಿಸಿದ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡುವ ಮಸೂದೆ ಸೋಮವಾರ ಲೋಕಸಭೆಯಲ್ಲಿ ಅಂಗೀಕಾರಗೊಂಡಿತ್ತು.

 ಈ ಮಸೂದೆ ಕುರಿತು ವಿಸ್ತೃತ ಚರ್ಚೆ ಹಾಗೂ ಸಂವಾದ ಅಗತ್ಯ ಎಂದು ಠಾಕ್ರೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಮಸೂದೆ ಅನುಷ್ಠಾನಗೊಳಿಸುವುದರ ಬದಲು ಮೋದಿ ಸರಕಾರ ಆರ್ಥಿಕತೆ, ನಿರುದ್ಯೋಗ ಹಾಗೂ ಹೆಚ್ಚುತ್ತಿರುವ ಜೀವನ ವೆಚ್ಚ, ಮುಖ್ಯವಾಗಿ ಈರುಳ್ಳಿ ಬೆಲೆ ಏರಿಕೆ ಕುರಿತು ಚಿಂತಿಸಬೇಕಾದ ಅಗತ್ಯ ಇದೆ ಎಂದು ಅವರು ಹೇಳಿದರು.

 ‘‘ಮಸೂದೆಗೆ ಬೆಂಬಲ ವ್ಯಕ್ತಪಡಿಸುವ ಮೊದಲ ನಾವು ನಮ್ಮ ಗ್ರಹಿಕೆ ಬದಲಾಯಿಸುವ ಅಗತ್ಯ ಇದೆ. ಮಸೂದೆ ವಿರೋಧಿಸುವವರು ರಾಷ್ಟ್ರ ದ್ರೋಹಿಗಳು ಹಾಗೂ ಮಸೂದೆ ಬೆಂಬಲಿಸುವವರು ದೇಶ ಭಕ್ತರು ಎಂದು ಗ್ರಹಿಸುವ ಅಗತ್ಯ ಇಲ್ಲ’’ ಎಂದು ಅವರು ಹೇಳಿದ್ದಾರೆ.

ಮಸೂದೆ ಒಪ್ಪದೇ ಇರುವವರು ದೇಶ ದ್ರೋಹಿಗಳು ಎಂದು ಬಿಜೆಪಿ ಭಾವಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ರಾಜ್ಯ ಸಭೆಯಲ್ಲಿ ಮಂಡಿಸುವ ಮೊದಲು ಮಸೂದೆಯಲ್ಲಿ ಕೆಲವು ಬದಲಾವಣೆಗಳನ್ನು ಸೇರಿಸಲು ಸಲಹೆ ನೀಡಿರುವ ಅವರು, ಈ ವಲಸಿಗರು ಎಲ್ಲಿ ಜೀವಿಸಬೇಕು....ಯಾವ ರಾಜ್ಯದಲ್ಲಿ ಜೀವಿಸಬೇಕು. ಇದೆಲ್ಲವನ್ನೂ ಸ್ಪಷ್ಟಪಡಿಸಬೇಕು ಎಂದರು.

ನಾವು ಕೆಲವು ಪ್ರಶ್ನೆಗಳನ್ನು ಕೇಳಿದ್ದೇವೆ. ಆದರೆ, ಅವರು ಉತ್ತರ ನೀಡಿಲ್ಲ. ದೇಶದ ಬಗ್ಗೆ ಬಿಜೆಪಿ ಮಾತ್ರ ಕಾಳಜಿ ವಹಿಸುತ್ತಿದೆ ಎಂಬ ಭ್ರಮೆ ಇದೆ ಎಂದು ಠಾಕ್ರೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News