‘ದೃಶ್ಯಂ’ ಚಿತ್ರದ ಪ್ರೇರಣೆ: ಪ್ರೇಯಸಿಯೊಂದಿಗೆ ಸೇರಿ ಪತ್ನಿಯನ್ನು ಹತ್ಯೆಗೈದ ಪತಿ

Update: 2019-12-10 17:00 GMT

  ತಿರುವನಂತಪುರಂ, ಡಿ. 10: ಮಲೆಯಾಳಂ ಥ್ರಿಲ್ಲರ್ ‘ದೃಶ್ಯಂ’ ಚಿತ್ರದ ಪ್ರೇರಣೆಯಿಂದ ಇಲ್ಲಿನ ವ್ಯಕ್ತಿಯೋರ್ವ ತನ್ನ ಪ್ರೇಯಸಿಯೊಂದಿಗೆ ಸೇರಿ ಪತ್ನಿಯನ್ನು ಹತ್ಯೆಗೈದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ತಿರುವನಂತಪುರದಲ್ಲಿರುವ ವಿಲ್ಲಾದಲ್ಲಿ ವಾಸಿಸುತ್ತಿರುವ ಪ್ರೇಮ್‌ಕುಮಾರ್ ತನ್ನ ಪ್ರೇಯಸಿ ಸುನಿತಾಳೊಂದಿಗೆ ಸೇರಿ ಪತ್ನಿ ವಿದ್ಯಾರನ್ನು ಕತ್ತು ಹಿಸುಕಿ ಹತ್ಯೆಗೈದಿದ್ದಾನೆ. ಇಬ್ಬರು ಆರೋಪಿಗಳು ವಿದ್ಯಾರ ಮೃತದೇಹವನ್ನು ತಮಿಳುನಾಡಿನ ತಿರುನಲ್ವೇಲಿಯ ಹೆದ್ದಾರಿ ಸಮೀಪದ ನಿರ್ಜನ ಪ್ರದೇಶದಲ್ಲಿ ಹೂತು ಹಾಕಿದ್ದಾರೆ.

 ಪ್ರೇಮ್‌ಕುಮಾರ್ ಪೊಲೀಸರನ್ನು ದಾರಿ ತಪ್ಪಿಸಲು ಪತ್ನಿಯ ಹತ್ಯೆ ನಡೆಸಿದ ಕೂಡಲೇ ನಾಪತ್ತೆ ಪ್ರಕರಣ ದಾಖಲಿಸಿದ್ದಾನೆ. ಅಲ್ಲದೆ ವಿದ್ಯಾರ ಮೊಬೈಲ್ ಅನ್ನು ಬಿಹಾರ್‌ಗೆ ಸಂಚರಿಸುವ ರೈಲಿನ ಕಸದ ಡಬ್ಬಿಗೆ ಹಾಕಿದ್ದಾನೆ. ಪೊಲೀಸರು ವಿದ್ಯಾರ ಬಗ್ಗೆ ಶೋಧ ನಡೆಸುತ್ತಿರುವಾಗ ಮೊಬೈಲ್ ಬಿಹಾರದ ಟವರ್ ಅನ್ನು ತೋರಿಸುತ್ತಿತ್ತು.

ಆದರೆ, ತನಿಖೆಯಲ್ಲಿ ಪ್ರೇಮ್‌ಕುಮಾರ್ ಹಾಗೂ ವಿದ್ಯಾರ ದಾಂಪತ್ಯದಲ್ಲಿ ಬಿರುಕು ಮೂಡಿರುವುದು ಹಾಗೂ ಪ್ರೇಮ್‌ಕುಮಾರ್ ಸುನಿತಾಳೊಂದಿಗೆ ಅನೈತಿಕ ಸಂಬಂಧ ಹೊಂದಿರುವುದು ಬೆಳಕಿಗೆ ಬಂದಿತ್ತು.

ವಿದ್ಯಾರ ಹತ್ಯೆ ಬಳಿಕ ಪ್ರೇಮ್ ಕುಮಾರ್ ಹಾಗೂ ಸುನಿತಾ ತಿರುನಲ್ವೇಲಿಯಲ್ಲಿ ಎರಡು ತಿಂಗಳಿಂದ ಒಟ್ಟಾಗಿ ಜೀವಿಸುತ್ತಿದ್ದರು. ಇವರಿಬ್ಬರನ್ನು ವಿಚಾರಣೆಗೆ ಒಳಪಡಿಸಿದಾಗ ವಿದ್ಯಾರನ್ನು ಹತ್ಯೆಗೈದಿರುವುದನ್ನು ಬಾಯಿ ಬಿಟ್ಟರು ಎಂದು ಎಸಿಪಿ ಆರ್. ವಿಶ್ವನಾಥ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News