312 ಪದಕಗಳನ್ನು ಬಾಚಿಕೊಂಡ ಭಾರತ

Update: 2019-12-10 18:23 GMT

ಕಠ್ಮಂಡು, ಡಿ.10: ದಕ್ಷಿಣ ಏಶ್ಯನ್ ಗೇಮ್ಸ್‌ನಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ ಭಾರತ ಒಟ್ಟು 312 ಪದಕಗಳನ್ನು ಜಯಿಸುವುದರೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿದೆ. ಈ ಮೂಲಕ 13ನೇ ಆವೃತ್ತಿಯ ಗೇಮ್ಸ್‌ನ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. 10 ದಿನಗಳ ಕಾಲ ನಡೆದ ಸ್ಪರ್ಧೆಯಲ್ಲಿ ಭಾರತ 174 ಚಿನ್ನ, 93 ಬೆಳ್ಳಿ ಹಾಗೂ 45 ಕಂಚಿನ ಪದಕಗಳನ್ನು ಜಯಿಸಿದ್ದು, 2016ರಲ್ಲಿ ಗುವಾಹಟಿ ಹಾಗೂ ಶಿಲ್ಲಾಂಗ್‌ನಲ್ಲಿ ನಡೆದ ಗೇಮ್ಸ್‌ನಲ್ಲಿ ಗಳಿಸಿದ್ದ 309 ಪದಕಗಳ ದಾಖಲೆಯನ್ನು ಉತ್ತಮಪಡಿಸಿಕೊಂಡಿದೆ. 2016ರಲ್ಲಿ ಭಾರತ 189 ಚಿನ್ನ ಜಯಿಸಿತ್ತು. ಆದರೆ ಈ ಬಾರಿ 174 ಚಿನ್ನ ಜಯಿಸಿದೆ. ಈ ಆವೃತ್ತಿಯ ಗೇಮ್ಸ್‌ಗೆ ಭಾರತ 487 ಕ್ರೀಡಾಪಟುಗಳನ್ನು ಕಣಕ್ಕಿಳಿಸಿತ್ತು. ಆತಿಥೇಯ ನೇಪಾಳ 206 ಪದಕಗಳು(51 ಚಿನ್ನ,60 ಬೆಳ್ಳಿ, 95 ಕಂಚು)ಗಳಿಸಿ 2ನೇ ಸ್ಥಾನ ಪಡೆದಿದೆ. ಶ್ರೀಲಂಕಾ 251 ಪದಕಗಳನ್ನು(40 ಚಿನ್ನ,83 ಬೆಳ್ಳಿ ಹಾಗೂ 128 ಕಂಚು)ಜಯಿಸಿ 3ನೇ ಸ್ಥಾನ ಪಡೆದುಕೊಂಡಿದೆ. 1984ರಲ್ಲಿ ದಕ್ಷಿಣ ಏಶ್ಯನ್ ಗೇಮ್ಸ್ ಆರಂಭವಾದ ಬಳಿಕ ಪ್ರತಿ ವರ್ಷವೂ ಭಾರತ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸುತ್ತಾ ಬಂದಿದೆ. 10ನೇ ಹಾಗೂ ಕೊನೆಯ ದಿನವಾದ ಮಂಗಳವಾರ ಭಾರತ 18 ಪದಕಗಳನ್ನು(15 ಚಿನ್ನ,2 ಬೆಳ್ಳಿ, 1ಕಂಚು)ಜಯಿಸಿದ್ದು, ಬಾಕ್ಸರ್‌ಗಳು 6 ಚಿನ್ನ ಹಾಗೂ 1 ಬೆಳ್ಳಿ ಜಯಿಸಿದ್ದರು. ಕ್ರಮವಾಗಿ ಶ್ರೀಲಂಕಾ(101-62)ಹಾಗೂ ಆತಿಥೇಯ ನೇಪಾಳ(127-46)ತಂಡವನ್ನು ಮಣಿಸಿದ ಭಾರತದ ಪುರುಷರ ಹಾಗೂ ಮಹಿಳಾ ಬಾಸ್ಕೆಟ್‌ಬಾಲ್ ತಂಡಗಳು ಚಿನ್ನ ಗೆದ್ದುಕೊಂಡಿವೆ. ಸ್ಕ್ವಾಷ್‌ನಲ್ಲಿ ಭಾರತ ಮಹಿಳಾ ಹಾಗೂ ಪುರುಷರ ಟೀಮ್ ಸ್ಪರ್ಧೆಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಜಯಿಸಿದೆ.

ಇಂದಿನ ದಿನ ಭಾರತೀಯ ಬಾಕ್ಸರ್ ದಿನವಾಗಿತ್ತು. ಬಾಕ್ಸರ್‌ಗಳು 12 ಚಿನ್ನ, 3 ಬೆಳ್ಳಿ ಹಾಗೂ 1 ಕಂಚಿನ ಪದಕ ಜಯಿಸಿದ್ದಾರೆ. ಹಾಲಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ವಿಕಾಸ್ ಕ್ರಿಷನ್(ಪುರುಷರ 69ಕೆಜಿ)ಹಾಗೂ 2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ವಿಜೇತ ಪಿಂಕಿ ರಾಣಿ(ಮಹಿಳೆಯರ 51ಕೆಜಿ)ಭಾರತಕ್ಕೆ ಇನ್ನೂ 6 ಚಿನ್ನ ಜಯಿಸಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News