ಮ್ಯಾನ್ಮಾರ್ ಸೇನಾ ಮುಖ್ಯಸ್ಥರ ವಿರುದ್ಧದ ದಿಗ್ಬಂಧನ ಬಿಗಿಗೊಳಿಸಿದ ಅಮೆರಿಕ

Update: 2019-12-11 15:50 GMT

ವಾಶಿಂಗ್ಟನ್, ಡಿ. 11: ರೊಹಿಂಗ್ಯಾ ಮುಸ್ಲಿಮ್ ಅಲ್ಪಸಂಖ್ಯಾತರ ಹತ್ಯಾಕಾಂಡಕ್ಕೆ ಸಂಬಂಧಿಸಿ ಮ್ಯಾನ್ಮಾರ್ ಸೇನಾ ಮುಖ್ಯಸ್ಥರ ಮೇಲೆ ವಿಧಿಸಲಾಗಿದ್ದ ದಿಗ್ಬಂಧನಗಳನ್ನು ಅಮೆರಿಕ ಮಂಗಳವಾರ ಮತ್ತಷ್ಟು ಕಠಿಣಗೊಳಿಸಿದೆ.

 ಮ್ಯಾನ್ಮಾರ್ ಸೇನಾ ಮುಖ್ಯಸ್ಥ ಮಿನ್ ಔನ್ ಹಲಯಂಗ್ ವಿರುದ್ಧ ಅಮೆರಿಕ ಜುಲೈಯಲ್ಲಿ ದಿಗ್ಬಂಧನಗಳನ್ನು ವಿಧಿಸಿತ್ತು. ಅಂದು ಅವರ ಅಮೆರಿಕ ಭೇಟಿಯ ಮೇಲೆ ಮಾತ್ರ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಆದರೆ, ಮಂಗಳವಾರ ದಿಗ್ಬಂಧನವನ್ನು ಮತ್ತಷ್ಟು ಬಿಗಿಗೊಳಿಸಿರುವ ಅಮೆರಿಕ, ಅಮೆರಿಕದಲ್ಲಿ ಅವರು ಹೊಂದಿರುವ ಯಾವುದೇ ಸೊತ್ತುಗಳನ್ನು ಮುಟ್ಟುಗೋಲು ಹಾಕಿದೆ ಹಾಗೂ ಅಮೆರಿಕದಲ್ಲಿರುವ ಯಾರಾದರೂ ಅವರ ಜೊತೆಗೆ ಹಣಕಾಸು ವ್ಯವಹಾರ ಹೊಂದುವುದನ್ನು ಅಪರಾಧವನ್ನಾಗಿಸಿದೆ.

ಅಮೆರಿಕದ ಖಜಾನೆ ಇಲಾಖೆಯು ಇದೇ ದಿಗ್ಬಂಧನಗಳನ್ನು ಮ್ಯಾನ್ಮಾರ್‌ನ ಇತರ ಮೂವರು ಹಿರಿಯ ಸೇನಾ ಕಮಾಂಡರ್‌ಗಳ ವಿರುದ್ಧವೂ ವಿಧಿಸಿದೆ.

ಅಂತರ್‌ರಾಷ್ಟ್ರೀಯ ಮಾನವಹಕ್ಕುಗಳ ದಿನದಂದು, ಅಮೆರಿಕವು ಇತರ ದೇಶಗಳ 14 ವ್ಯಕ್ತಿಗಳ ಮೇಲೂ ದಿಗ್ಬಂಧನಗಳನ್ನು ವಿಧಿಸಿದೆ.

ಮ್ಯಾನ್ಮಾರ್ ಸೇನೆಯು 2017ರಲ್ಲಿ ಅಲ್ಪಸಂಖ್ಯಾತ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ಅಮಾನುಷ ದಮನ ಕಾರ್ಯಾಚರಣೆಯನ್ನು ನಡೆಸಿದೆ ಎಂದು ಆರೋಪಿಸಲಾಗಿದೆ. ಸೇನೆಯ ಹಿಂಸೆಗೆ ಬೆದರಿ ಸುಮಾರು 7.50 ಲಕ್ಷ ರೊಹಿಂಗ್ಯಾ ಮುಸ್ಲಿಮರು ಪಕ್ಕದ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News