ಬಿಳಿ ಬೆನ್ನಿನ ಜಿಗಿ ಹುಳು ಹತೋಟಿಗೆ ರೈತರಿಗೆ ಸಲಹೆ

Update: 2019-12-11 16:06 GMT

ಉಡುಪಿ, ಡಿ.11: ಉಡುಪಿ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಭತ್ತದ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ಸಸಿ ಮಡಿ ಹಾಗೂ ನಾಟಿಯಾದ ಭತ್ತದಲ್ಲಿ ಬಿಳಿ ಬೆನ್ನಿನ ಜಿಗಿ ಹುಳು ಬಾಧೆ ಕಾಣಿಸಿಕೊಂಡಿದೆ. ಕಾರ್ಕಳ ತಾಲೂಕು ಹಾಗೂ ಉಡುಪಿ ತಾಲೂಕಿನ ಕೆಲವೊಂದು ಗ್ರಾಮಗಳಲ್ಲಿ ಹುಳುವಿನ ಬಾಧೆ ತೀವ್ರ ಸ್ವರೂಪದಲ್ಲಿದೆ.

ಬಿಳಿ ಬೆನ್ನಿನ ಜಿಗಿಹುಳು ಹಾನಿಯ ಲಕ್ಷಣಗಳು: ಪ್ರೌಢಕೀಟಗಳು ನೀರಿನ ಮೇಲ್ಭಾಗ ಹಾಗೂ ಭತ್ತದ ಪೈರಿನ ಬುಡಭಾಗದಲ್ಲಿ ಕುಳಿತು ಎಲೆ ಗಳಿಂದ ರಸ ಹೀರುವುದರಿಂದ ಭತ್ತದ ಪೈರಿನ ಬೆಳವಣಿಗೆ ಕುಂಠಿತ ಗೊಳ್ಳುವುದರೊಂದಿಗೆ ಹಳದಿ ಬಣ್ಣಕ್ಕೆ ತಿರುಗು ತ್ತವೆ. ಇದರಿಂದ ಭತ್ತದ ಹಿಳ್ಳೆ ಒಡೆಯುವ ಪ್ರಕ್ರಿಯೆ ಕುಂಠಿತವಾಗುತ್ತದೆ. ಹಾನಿ ತೀವ್ರಗೊಂಡಲ್ಲಿ ಭತ್ತದ ಪೈರು ಅನಿಯಮಿತ ಆಕಾರದಲ್ಲಿ ಅಲ್ಲಲ್ಲಿ ಸುಟ್ಟಂತೆ ಒಣಗಿ ಹೋಗುತ್ತದೆ.

ಹತೋಟಿ: ಬಿಳಿ ಬೆನ್ನಿನ ಜಿಗಿ ಹುಳುವಿನ ಹತೋಟಿಗಾಗಿ ರೈತರು ಭತ್ತದ ಗದ್ದೆಯಲ್ಲಿ ನೀರನ್ನು ಬಸಿದು ತೇವಾಂಶವನ್ನು ಕಡಿಮೆ ಯಾಗುವಂತೆ ನೋಡಿ ಕೊಳ್ಳಬೇಕು. ಸಾರಜನಕವುಳ್ಳ ಯೂರಿಯಾ ರಸಗೊಬ್ಬರವನ್ನು ಯಥೇಚ್ಛವಾಗಿ ಬಳಸಬಾರದು. ಕೀಟನಾಶಕಗಳಾದ ಬುಪ್ರೊಪೆಜಿನ್ 1 ಮಿ.ಲೀ/ಲೀಟರ್ ಹಾಗೂ ಥಯೋಮಿಥಾಕ್ಸಾಮ್ 0.25 ಗ್ರಾಂ/ಲೀ.ಅಥವಾ ಕೀಟ ನಾಶಕಗಳಾದ ಎಸಿಪೇಟ್ 1 ಗ್ರಾಂ./ಲೀ. ಅಥವಾ ಇಮಿಡಾಕ್ಲೋಪ್ರಿಡ್ 0.5 ಮಿಲಿ/ ಲೀ. ನಂತೆ ಮಿಶ್ರಣ ಮಾಡಿ 5ರಿಂದ 6 ದಿನಗಳ ಅಂತರದಲ್ಲಿ 2-3 ಬಾರಿ ಪೈರಿನ ಬುಡಭಾಗಕ್ಕೆ ತಾಗುವಂತೆ ಸಿಂಪಡಣೆ ಕೈಗೊಳ್ಳಬೇಕು. ನೀರಿನಲ್ಲಿ ಒಂದು ಎಕ್ರೆಗೆ 200 ಲೀ. ಸಿಂಪರಣಾ ದ್ರಾವಣವನ್ನು ಸಿಂಪರಣೆ ಮಾಡಬೇಕು. ಇದಕ್ಕೆ ಅಗತ್ಯ ವಿರುವ ಅಸಿಪೇಟ್ ಹಾಗೂ ಥಯೋಮಿಥಾಕ್ಸಾಮ್ ಕೀಟನಾಶಕಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನೀಕರಿಸಲಾಗಿದ್ದು, ಸಹಾಯಧನವು ಲಭ್ಯವಿದೆ.

ರೈತರಿಗೆ ವಿಶೇಷ ಸೂಚನೆ: ಪ್ರಸ್ತುತ ರೈತರು ಹಾನಿಯಾದ ತಾಕುಗಳಲ್ಲಿ ಯೂರಿಯಾ ಹಾಗೂ ಪೋರೆಟ್ ಬಳಸುತ್ತಿದ್ದು, ಇದ ರಿಂದ ಕೀಟ ಬಾಧೆ ಉಲ್ಬಣಗೊಳ್ಳಲಿದೆ. ಆದ್ದರಿಂದ ರೈತರು ಈ ಪದ್ದತಿಯನ್ನು ಅನುಸರಿಸದೆ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ ನಿಗದಿತ ಕೀಟನಾಶಕಗಳನ್ನು ಪಡೆದು ಸಿಂಪಡಣೆಯನ್ನು ಕೈಗೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News