ಅಯೋಧ್ಯೆ ತೀರ್ಪು ಮರುಪರಿಶೀಲನೆ ಅರ್ಜಿ: ಗುರುವಾರ ಸುಪ್ರೀಂ ವಿಚಾರಣೆ

Update: 2019-12-11 16:19 GMT

ಹೊಸದಿಲ್ಲಿ, ಡಿ.11: ಅಯೋಧ್ಯೆ ವಿವಾದದ ಕುರಿತು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನ ಮರುಪರಿಶೀಲನೆ ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಗುರುವಾರ ಮುಖ್ಯ ನ್ಯಾಯಾಧೀಶ ಎಸ್‌ಎ ಬೊಬ್ಡೆ ನೇತೃತ್ವದ ಪಂಚ ಸದಸ್ಯರ ಪೀಠ ನಡೆಸಲಿದೆ. ವಿಚಾರಣಾ ಪ್ರಕ್ರಿಯೆ ಬಹಿರಂಗ ನ್ಯಾಯಾಲಯದಲ್ಲಿ ನಡೆಯದೆ ಚೇಂಬರ್‌ನ ಒಳಗೆ ನಡೆಯಲಿದೆ ಎಂದು ವರದಿಯಾಗಿದೆ.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‌ಬಿ) ಹಾಗೂ ನಿರ್ಮೋಹಿ ಅಖಾಡದ ಜೊತೆಗೆ ಸುಮಾರು 40 ನಾಗರಿಕ ಹಕ್ಕುಗಳ ಕಾರ್ಯಕರ್ತರೂ ಅರ್ಜಿ ಸಲ್ಲಿಸಿದ್ದಾರೆ. ಶಾಂತಿ ಕದಡುವ ಉದ್ದೇಶದಿಂದ ಮರುಪರಿಶೀಲನೆ ಅರ್ಜಿ ಸಲ್ಲಿಸಿಲ್ಲ ಎಂದು ಅರ್ಜಿದಾರರು ಸ್ಪಷ್ಟಪಡಿಸಿದ್ದಾರೆ. ತಾವು ಯಾವಾಗಲೂ ಶಾಂತಿ ಕಾಯ್ದುಕೊಂಡಿದ್ದು ಹಿಂಸಾಚಾರದ ಬಲಿಪಶುಗಳಾಗಿದ್ದೇವೆ. ತಮ್ಮ ಅರ್ಜಿ ನ್ಯಾಯದ ಅನ್ವೇಷಣೆಯಾಗಿದೆ ಎಂದು ಎಐಎಂಪಿಎಲ್‌ಬಿ ತಿಳಿಸಿದೆ. ಈ ಪ್ರಕರಣದಲ್ಲಿ ತನ್ನ ಪಾತ್ರದ ಬಗ್ಗೆ ಸ್ಪಷ್ಟನೆ ಕೋರಿ ಮರು ಪರಿಶೀಲನಾ ಅರ್ಜಿ ಸಲ್ಲಿಸಿರುವುದಾಗಿ ಅಯೋಧ್ಯೆ ವಿವಾದದ ಮೂಲ ಕಕ್ಷಿಗಾರರಾಗಿರುವ ನಿರ್ಮೋಹಿ ಅಖಾಡ ತಿಳಿಸಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಮೇಲುಸ್ತುವಾರಿ ವಹಿಸುವ ಟ್ರಸ್ಟ್‌ನಲ್ಲಿ ನಿರ್ನೋಹಿ ಅಖಾಡಕ್ಕೂ ಸೂಕ್ತ ಪ್ರಾತಿನಿಧ್ಯ ನೀಡಬೇಕೆಂದು ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News