ಬಂಗಾಳದ ಪ್ರಸಿದ್ಧ ವ್ಯಕ್ತಿಗಳ ಪ್ರತಿಮೆ ನಿರ್ಮಿಸಲು ಟಿಎಂಸಿ ನಿರ್ಧಾರ

Update: 2019-12-11 16:21 GMT

ಕೋಲ್ಕತಾ, ಡಿ.11: ಬಂಗಾಳಿಗಳ ಆತ್ಮಗೌರವದ ಸಂಕೇತವಾಗಿ ಬಂಗಾಳದ ಮಹಾನ್ ವ್ಯಕ್ತಿಗಳ ಪ್ರತಿಮೆ ನಿರ್ಮಿಸುವ ಜೊತೆಗೆ ಜಾತ್ಯಾತೀತತೆ ಮತ್ತು ಅಂತರ್ಗತತೆಯ ಕುರಿತು ಅವರು ನೀಡಿರುವ ಸಂದೇಶವನ್ನು ಪ್ರಸಾರ ಮಾಡಲು ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ಪಕ್ಷ ನಿರ್ಧರಿಸಿದೆ.

ಮುಂದಿನ ವರ್ಷ ಪ. ಬಂಗಾಳದಲ್ಲಿ 107 ಪೌರಸಂಸ್ಥೆ ಹಾಗೂ ಕೋಲ್ಕತಾ ಮಹಾನಗರಪಾಲಿಕೆಗೆ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಟಿಎಂಸಿ ಈ ಯೋಜನೆ ರೂಪಿಸಿದೆ. ಪೌರಸಂಸ್ಥೆ ಚುನಾವಣೆಯನ್ನು 2021ರಲ್ಲಿ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ನಡೆಯುವ ‘ಕಿರು ವಿಧಾನಸಭೆ ಚುನಾವಣೆ’ ಎಂದು ವಿಶ್ಲೇಷಿಸಲಾಗಿದೆ. ನೇತಾಜಿ ಸುಭಾಶ್ಚಂದ್ರ ಬೋಸ್‌ರಿಂದ ರಬೀಂದ್ರನಾಥ್ ಠಾಗೋರ್‌ವರೆಗೆ, ರಾಮಕೃಷ್ಣ ಪರಮಹಂಸರಿಂದ ಸ್ವಾಮಿ ವಿವೇಕಾನಂದರವರೆಗೆ, ರಾಜಾರಾಮ್ ಮೋಹನರಾಯ್‌ರಿಂದ ಈಶ್ವರಚಂದ್ರ ವಿದ್ಯಾಸಾಗರ್‌ವರೆಗೆ ಪ್ರಸಿದ್ಧ ವ್ಯಕ್ತಿಗಳ ಪ್ರತಿಮೆಗಳನ್ನು ನಿರ್ಮಿಸಲಾಗುವುದು ಎಂದು ಟಿಎಂಸಿಯ ಹಿರಿಯ ಮುಖಂಡರು ಹೇಳಿದ್ದಾರೆ. ಸಿನೆಮಾರಂಗದ ಖ್ಯಾತನಾಮರಾದ ಉತ್ತಮ್ ಕುಮಾರ್, ಸತ್ಯಜಿತ್ ರೇಮ ರಿತಿಕ್ ಘಾತಕ್, ಫುಟ್‌ಬಾಲ್ ಆಟಗಾರ ಘೋಷ್ತೊ ಪಾಲ್ ಮತ್ತು ಸೈಲನ್ ಮನ್ನಾ ಸೇರಿದಂತೆ ಇತರ ಪ್ರಸಿದ್ಧ ಬಂಗಾಳಿ ವ್ಯಕ್ತಿಗಳ ಪ್ರತಿಮೆ ನಿರ್ಮಿಸಲಾಗುವುದು.

 ಉತ್ತರ ಕೋಲ್ಕತಾದಲ್ಲಿಯೇ 30ಕ್ಕೂ ಅಧಿಕ ಹೊಸ ಪ್ರತಿಮೆಗಳು ನಿರ್ಮಾಣವಾಗಲಿದೆ ಎಂದವರು ಹೇಳಿದ್ದಾರೆ. ನಗರ ಸೌಂದರ್ಯಕರಣ ಯೋಜನೆಯ ಜೊತೆಗೆ, ಜಾತ್ಯಾತೀತತೆ, ಸಾಮಾಜಿಕ ಸುಧಾರಣೆ ಹಾಗೂ ಅಂತರ್ಗತತೆ(ಎಲ್ಲರನ್ನೂ ಒಳಗೊಂಡಿರುವ)ಯ ಸಂದೇಶವನ್ನು ಪ್ರಸಾರ ಮಾಡುವ ಉದ್ದೇಶವಿದೆ. ಈ ವರ್ಷದ ಮೇ ತಿಂಗಳಿನಲ್ಲಿ ಬಿಜೆಪಿ ಅತ್ಯಂತ ಕ್ರೂರ ರೀತಿಯಲ್ಲಿ ಈಶ್ವರಚಂದ್ರ ವಿದ್ಯಾಸಾಗರರ ಪ್ರತಿಮೆಯನ್ನು ಧ್ವಂಸಗೊಳಿಸಿದ ಘಟನೆ ಎಲ್ಲರಿಗೂ ತಿಳಿದಿದೆ. ಬಿಜೆಪಿಯವರ ಬಂಗಾಳಿ ವಿರೋಧಿ ಮನೋಭಾವ ಮತ್ತು ಬಂಗಾಳದ ಖ್ಯಾತ ವ್ಯಕ್ತಿಗಳ ಬಗ್ಗೆ ಅವರಿಗಿರುವ ಅಸಡ್ಡೆಯ ಮನೋಭಾವದ ದ್ಯೋತಕ ಇದಾಗಿದೆ ಎಂದು ಹಿರಿಯ ಟಿಎಂಸಿ ಮುಖಂಡ ಅತಿನ್ ಘೋಷ್ ಹೇಳಿದ್ದಾರೆ.

ಈ ಯೋಜನೆಗೆ ಸುಮಾರು 20ರಿಂದ 30 ಲಕ್ಷ ವೆಚ್ಚವಾಗಲಿದ್ದು ಕ್ರೌಡ್‌ಫಂಡಿಂಗ್ ಮೂಲಕ ನಿಧಿ ಸಂಗ್ರಹಿಸಲಾಗುವುದು ಎಂದು ಪಕ್ಷದ ಮುಖಂಡರು ಹೇಳಿದ್ದಾರೆ. ಈ ಯೋಜನೆಯನ್ನು ಟೀಕಿಸಿರುವ ಬಿಜೆಪಿ, ಇದುವರೆಗೆ ಟಿಎಂಸಿ ಮುಖಂಡರಿಗೆ ಬಂಗಾಳದ ಮಹಾನ್ ನಾಯಕರ ನೆನಪೇ ಆಗಿರಲಿಲ್ಲ. ಈಗ ಮುಳುಗುವ ಹಡಗಿನಂತಾಗಿರುವ ಟಿಎಂಸಿಗೆ ಚುನಾವಣೆಯ ಸಂದರ್ಭದಲ್ಲಿ ಪ್ರತಿಮೆಯ ನೆನಪಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಸಯಾಂತನ್ ಬಸು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News