ಲೋಕಸಭೆಯಲ್ಲಿ ದತ್ತಾಂಶ ರಕ್ಷಣೆ ಮಸೂದೆ ಪ್ರಸ್ತಾವ

Update: 2019-12-11 16:45 GMT

ಹೊಸದಿಲ್ಲಿ,ಡಿ.11: ಬುಧವಾರ ಲೋಕಸಭೆಯಲ್ಲಿ ವ್ಯಕ್ತಿಗತ ದತ್ತಾಂಶ ರಕ್ಷಣಾ ಮಸೂದೆಯನ್ನು ಪ್ರಸ್ತಾವಿಸಿದ ಸರಕಾರವು ಅದನ್ನು ಸಂಸತ್ತಿನ ಉಭಯ ಸದನಗಳ ಜಂಟಿ ಆಯ್ಕೆ ಸಮಿತಿಗೆ ಒಪ್ಪಿಸುವುದಾಗಿ ಪ್ರತಿಪಕ್ಷಗಳ ವಿರೋಧದ ನಡುವೆಯೇ ತಿಳಿಸಿತು. ನಾಗರಿಕರ ಖಾಸಗಿತನದ ಹಕ್ಕನ್ನು ರಾಜಿ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದ ಪ್ರತಿಪಕ್ಷಗಳು ಅದನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಇಲಾಖಾ ಸ್ಥಾಯಿ ಸಮಿತಿಗೆ ಕಳುಹಿಸುವಂತೆ ಆಗ್ರಹಿಸಿದವು.

ಪ್ರಜೆಗಳ ಮೇಲೆ ಕಣ್ಗಾವಲು ಹೆಚ್ಚುತ್ತಿರುವುದಕ್ಕಾಗಿ ಸರಕಾರದ ವಿರುದ್ಧ ದಾಳಿ ನಡೆಸಿದ ಕಾಂಗ್ರೆಸ್ ಮತ್ತು ಟಿಎಂಸಿ ಸೇರಿದಂತೆ ಪ್ರತಿಪಕ್ಷಗಳು,ಮಸೂದೆಯು ಸಂವಿಧಾನವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದವು. ಇದನ್ನು ತಿರಸ್ಕರಿಸಿದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ ಅವರು,ಸಂಸದೀಯ ಸಮಿತಿಯು ಮಸೂದೆಯನ್ನು ವಿವರವಾಗಿ ಪರಿಶೀಲಿಸಬಹುದಾಗಿದೆ ಎಂದರು. ಸರಕಾರವು ಉದ್ದೇಶಿತ ಸಮಿತಿಗೆ ಮಸೂದೆಯನ್ನು ರವಾನಿಸಲು ಪ್ರಸ್ತಾವವೊಂದನ್ನು ಗುರುವಾರ ಮಂಡಿಸಲಿದೆ ಎಂದೂ ಅವರು ತಿಳಿಸಿದರು.

ಆದರೆ ಸಚಿವರ ಸಮಜಾಯಿಷಿ ಮಸೂದೆಯನ್ನು ತರೂರ್ ನೇತೃತ್ವದ ಸಮಿತಿಗೆ ಕಳುಹಿಸಬೇಕೆಂದು ಪಟ್ಟು ಹಿಡಿದಿದ್ದ ಪ್ರತಿಪಕ್ಷಗಳ ರೋಷಕ್ಕೆ ಕಾರಣವಾಯಿತು. ಈ ಸಮಿತಿಯು ಇತ್ತೀಚಿಗೆ ಬಿಜೆಪಿ ಸದಸ್ಯರ ಆಕ್ಷೇಪಗಳಿಗೆ ಹೊರತಾಗಿಯೂ ವಾಟ್ಸ್ಆ್ಯಪ್ ಬೇಹುಗಾರಿಕೆ ಪ್ರಕರಣವನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿತ್ತು.

ಸರಕಾರದ ಕ್ರಮವನ್ನು ವಿರೋಧಿಸಿ ಪ್ರತಿಪಕ್ಷಗಳು ಸಭಾತ್ಯಾಗ ನಡೆಸಿದ್ದು,ಮಸೂದೆಯನ್ನು ಪ್ರಸ್ತಾವಿಸಲು ಸಚಿವರಿಗೆ ಅವಕಾಶವನ್ನು ಒದಗಿಸಿತು.

ಮಸೂದೆ ಪ್ರಸ್ತಾವಕ್ಕೆ ಮುನ್ನ ಅದನ್ನು ವಿರೋಧಿಸಿದ ಪ್ರತಿಪಕ್ಷಗಳ ಸದಸ್ಯರು ಮಸೂದೆಯನ್ನು ಸಂಬಂಧಿತ ಸಮಿತಿಯ ಪರಿಶೀಲನೆಗೊಪ್ಪಿಸುವಂತೆ ಆಗ್ರಹಿಸಿದರು.

‘ ಬೇಹುಗಾರಿಕೆ ಉದ್ಯಮ ’ವು ಬೆಳೆಯುತ್ತಿದೆ ಮತ್ತು ಪ್ರಸಾದ್ ಅವರ ಸಚಿವಾಲಯವು ತನ್ನ ವರ್ತನೆಯಿಂದ ಹಲವಾರು ಶಂಕೆಗಳನ್ನು ಮೂಡಿಸಿದೆ ಎಂದು ಕಾಂಗ್ರೆಸ್‌ನ ಆಧಿರ ರಂಜನ್ ಚೌಧುರಿ ಹೇಳಿದರೆ, ವಾಟ್ಸ್‌ಆ್ಯಪ್ ಬೇಹುಗಾರಿಕೆಗೆ ಇಸ್ರೇಲ್ ಸಾಫ್ಟ್‌ವೇರ್ ಪೆಗಾಸಸ್‌ನ ಬಳಕೆಯನ್ನು ಪ್ರಸ್ತಾಪಿಸಿದ ಟಿಎಂಸಿಯ ಸೌಗತ ರಾಯ್ ಅವರು ಜನರ ಖಾಸಗಿತನವನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿದರು.

ಮಸೂದೆಯನ್ನು ಬಲವಾಗಿ ಸಮರ್ಥಿಸಿಕೊಂಡ ಪ್ರಸಾದ್,ಸರ್ವೋಚ್ಚ ನ್ಯಾಯಾಲಯವೂ ದತ್ತಾಂಶ ರಕ್ಷಣೆ ಕಾನೂನಿನ ಅಗತ್ಯಕ್ಕೆ ಒತ್ತು ನೀಡಿದೆ. ಮಸೂದೆಯು ಜನರ ಹಕ್ಕುಗಳು ಮತ್ತು ಖಾಸಗಿತನದ ಸುರಕ್ಷತೆಯ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News