ಅಧಿಕಾರ ನಡೆಸುವವರ ಕಾರ್ಯಗಳನ್ನು ಪ್ರತೀದಿನ ಪರಿಶೀಲಿಸಬೇಕು: ಸುಪ್ರೀಂಕೋರ್ಟ್‌ ನ್ಯಾಯಾಧೀಶ ಚಂದ್ರಚೂಡ್

Update: 2019-12-11 16:53 GMT

ಹೊಸದಿಲ್ಲಿ, ಡಿ.11: ಅಧಿಕಾರದಲ್ಲಿರುವ ವ್ಯಕ್ತಿಗಳ ಕಾರ್ಯವನ್ನು ಪ್ರತೀದಿನ ಪರಿಶೀಲಿಸಿದರೆ ಮಾತ್ರ ಪ್ರಚಲಿತ ಸಮಸ್ಯೆಗಳಿಗೆ ದೀರ್ಘಾವಧಿಯ ಪರಿಹಾರ ಹುಡುಕಲು ಸಾಧ್ಯ ಎಂದು ಸುಪ್ರೀಂಕೋರ್ಟ್‌ನ ನ್ಯಾಯಾಧೀಶ ಡಿವೈ ಚಂದ್ರಚೂಡ್ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕು ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಉನ್ನಾವೊ ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿರುವುದು, ಹೈದರಾಬಾದ್‌ನಲ್ಲಿ ಪಶುವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಸುಟ್ಟು ಹಾಕಿದ ಆರೋಪಿಗಳನ್ನು ಎನ್‌ಕೌಂಟರ್ ನಡೆಸಿರುವ ಘಟನೆಯನ್ನು ಉಲ್ಲೇಖಿಸಿದರು. ಈ ರೀತಿಯ ಮಾನವಹಕ್ಕುಗಳ ಉಲ್ಲಂಘನೆ ಪ್ರಕರಣಕ್ಕೆ ಅಂತ್ಯಹಾಡಬೇಕಿದ್ದರೆ ಅಧಿಕಾರದಲ್ಲಿರುವ ವ್ಯಕ್ತಿಗಳ ದಿನನಿತ್ಯದ ಕಾರ್ಯವೈಖರಿಯನ್ನು ಪರಿಶೀಲಿಸಬೇಕು ಎಂದು ಅಭಿಪ್ರಾಯಪಟ್ಟರು.

 ನಮ್ಮ ದೇಶದಲ್ಲಿ ಅಧಿಕಾರ ಹಸ್ತಾಂತರ ಅತ್ಯಂತ ಶಾಂತ ರೀತಿಯಲ್ಲಿ ನಡೆಯುತ್ತಿರುವುದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಅಪ್ರತಿಮ ದಾಖಲೆಗೆ ಒಂದು ನಿದರ್ಶನವಾಗಿದೆ. ಆದರೆ ನಮ್ಮ ಅನೇಕ ನಾಗರಿಕರು ಎದುರಿಸುತ್ತಿರುವ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಪ್ರತ್ಯೇಕತೆಯ ಸಮಸ್ಯೆ ಪ್ರಜಾಪ್ರಭುತ್ವ ಆಳ್ವಿಕೆಯಿಂದ ನಿವಾರಣೆಯಾಗಿದೆಯೇ ಎಂದು ನಮಗೆ ನಾವೇ ಪ್ರಶ್ನಿಸಿಕೊಳ್ಳುವ ಕಾಲ ಬಂದಿದೆ ಎಂದು ನ್ಯಾ. ಚಂದ್ರಚೂಡ್ ಹೇಳಿದರು. ಧ್ರುವೀಕರಣದ ಸಂಸ್ಕೃತಿಯನ್ನು ಅನುಸರಿಸುವ ಬದಲು ಚರ್ಚೆ, ಅಭಿಪ್ರಾಯ ವ್ಯಕ್ತಪಡಿಸುವ ಪ್ರಕ್ರಿಯೆಯಲ್ಲಿ ನಾಗರಿಕರು ಪಾಲ್ಗೊಳ್ಳಬೇಕು. ಮಾದರಿ ನೀತಿ ಸಂಹಿತೆ ಕೊನೆಗೊಂಡಾಗ ಆಡಳಿತ ಆರಂಭವಾಗುತ್ತದೆ. ಟೀಕೆ ಮತ್ತು ಅಭಿಪ್ರಾಯ ಹಂಚಿಕೆಯನ್ನು ಮುಕ್ತವಾಗಿ ವ್ಯಕ್ತಪಡಿಸುವಂತಹ ವಾತಾವರಣ ನಿರ್ಮಿಸಬೇಕಿದೆ ಎಂದವರು ಹೇಳಿದರು.

 ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಜೆಐ ಆರ್‌ಎಂ ಲೋಧಾ, ಸರಿಯಾದ ಪ್ರಕ್ರಿಯೆಯಲ್ಲಿ ಜನತೆಗೆ ನಂಬಿಕೆ ಕಳೆದುಹೋಗಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ತೆಲಂಗಾಣದಲ್ಲಿ ಸಚಿವರೊಬ್ಬರು ‘ಪೊಲೀಸರು ಏನು ಮಾಡಬೇಕಿತ್ತೋ ಅದನ್ನೇ ಮಾಡಿದ್ದಾರೆ’ ಎಂದು ಹೇಳಿರುವುದನ್ನು ಉಲ್ಲೇಖಿಸಿದ ಲೋಧಾ, ನಾವು ಸೂಕ್ತ ಪ್ರಕ್ರಿಯೆ ಹಾಗೂ ನ್ಯಾಯ ವ್ಯವಸ್ಥೆಯನ್ನು ತಿರಸ್ಕರಿಸಿದ್ದೇವೆಯೇ ಎಂಬ ಪ್ರಶ್ನೆ ಮೂಡುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News