ಪೌರತ್ವ ಮಸೂದೆಯಿಂದ ಈಶಾನ್ಯ ಭಾರತೀಯರಿಗೆ ಸಂಪೂರ್ಣ ರಕ್ಷಣೆ: ಕೇಂದ್ರ ಸಚಿವ ಭರವಸೆ

Update: 2019-12-19 05:01 GMT

ಹೊಸದಿಲ್ಲಿ,ಡಿ.11: ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ಪೌರತ್ವ ತಿದ್ದುಪಡಿ ವಿಧೇಯಕದ ವಿರುದ್ಧ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರಗೊಳ್ಳುತ್ತಿರುವಂತೆಯೇ , ವಿಧೇಯಕವು ಈಶಾನ್ಯ ಭಾರತದ ಸಮಸ್ತ ಜನತೆಗೆ ರಕ್ಷಣೆಯನ್ನು ನೀಡಿದೆಯೆಂದು ಕೇಂದ್ರ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

 ಹೊಸದಿಲ್ಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಈಶಾನ್ಯ ಭಾರತದ ಜನತೆಯ ಜೊತೆಗ ಇಂತಹ ಒಂದು ಮಹತ್ವದ ಮಸೂದೆ ಕುರಿತ ಚರ್ಚಿಸಲಾಗಿದೆಯೆಂದು ಹೇಳಿದರು.

 ‘‘ಈಶಾನ್ಯ ಭಾರತದ ಮೂಲನಿವಾಸಿಗಳ ಆತಂಕಗ ಬಗ್ಗೆ ಪೌರತ್ವ ತಿದ್ದುಪಡಿ ವಿಧೇಯಕದಲ್ಲಿ ಗಾಢವಾಗಿ ಸ್ಪಂದಿಸಲಾಗಿದೆ. ವಿಧೇಯಕದ ವಿರುದ್ಧ ಈಶಾನ್ಯ ಭಾರತದಲ್ಲಿ ಪ್ರತಿಭಟನೆಗಳು ನಡೆಯುತ್ತಿರುವುದು ನನಗೆ ಅರಿವಿದೆ. ವಿಧೇಯಕದ ಬಗ್ಗೆ ಈಶಾನ್ಯ ಭಾರತದ ಜನತೆಗೆ ಇರುವ ಆತಂಕಗಳನ್ನು ಆಯಾ ರಾಜ್ಯ ಸರಕಾರಗಳು ಬಗೆಹರಿಸಲಿವೆಯೆಂದು, ಈಶಾನ್ಯ ಭಾರತದ ಪ್ರಮುಖ ಬಿಜೆಪಿ ನಾಯಕರೂ ಆದ ಕಿರಣ್ ರಿಜಿಜು ಹೇಳಿದ್ದಾರೆ.

 ಈಶಾನ್ಯ ಭಾರತದ ಜನತೆಯ ಆತಂಕಗಳ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಿದ ಪ್ರಧಾನಿ ಹಾಗೂ ಗೃಹ ಸಚಿವರಿಗೆ ನನ್ನ ಕೃತಜ್ಞತೆಗಳು. ವಿಧೇಯಕದ ಬಗ್ಗೆ ಈಶಾನ್ಯ ಭಾರತದ ಜನತೆಯ ಜೊತೆಗೆ ಸಮರ್ಪಕವಾಗಿ ಸಮಾಲೋಚಿಸದಿದ್ದುದು ಅಥವಾ ಆ ಬಗ್ಗೆ ಜನತೆಗೆ ತಿಳಿದುಕೊಳ್ಳಲು ಇಚ್ಛಿಸದಿರುವ ಕಾರಣದಿಂದಲೇ ಪ್ರತಿಭಟನೆಗಳು ನಡೆಯುತ್ತಿವೆಯೆಂದು ರಿಜಿಜು ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News