11 ಆಟಗಾರರನ್ನು ಅಮಾನತುಗೊಳಿಸಿದ ಹಾಕಿ ಇಂಡಿಯಾ

Update: 2019-12-11 18:19 GMT

ಹೊಸದಿಲ್ಲಿ, ಡಿ.11: ಪಂಜಾಬ್ ಸಶಸ್ತ್ರ ಪೊಲೀಸ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ನಡುವೆ 56ನೇ ನೆಹರೂ ಕಪ್ ಫೈನಲ್ ಪಂದ್ಯದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ 11 ಆಟಗಾರರು ಮತ್ತು ಇಬ್ಬರು ತಂಡದ ಅಧಿಕಾರಿಗಳನ್ನು ಹಾಕಿ ಇಂಡಿಯಾ ಶಿಸ್ತು ಸಮಿತಿ ಮಂಗಳವಾರ ಅಮಾನತುಗೊಳಿಸಿದೆ.

ಕಳೆದ ತಿಂಗಳು ನೆಹರೂ ಕಪ್ ಫೈನಲ್‌ನಲ್ಲಿ ಉಭಯ ತಂಡಗಳ ಆಟಗಾರರ ಮಧ್ಯೆ ಘರ್ಷಣೆ ಉಂಟಾಗಿತ್ತು ಮತ್ತು ಟರ್ಫ್‌ನೊಳಗೆ ಹಾಕಿ ಸ್ಟಿಕ್‌ನಲ್ಲಿ ಬಡಿದಾಡಿಕೊಂಡಿದ್ದರು.

ಹಾಕಿ ಇಂಡಿಯಾ ಪಂದ್ಯಾವಳಿ ಸಂಘಟಕರಿಂದ ವಿವರವಾದ ವರದಿಯನ್ನು ಪಡೆದು ಇದೀಗ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿದೆ. ವರದಿಯಯೊಂದಿಗೆ ಸಲ್ಲಿಸಲಾದ ವೀಡಿಯೊ ಸಾಕ್ಷಗಳನ್ನು ನೋಡಿದ ನಂತರ ಹಾಕಿ ಇಂಡಿಯಾ ಉಪಾಧ್ಯಕ್ಷ ಭೋಲಾ ನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿರುವ ಸಮಿತಿಯು ಪಂಜಾಬ್ ಸಶಸ್ತ್ರ ಪೊಲೀಸ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕಿನ ಆಟಗಾರರನ್ನು ಕ್ರಮವಾಗಿ 12-18 ತಿಂಗಳು ಮತ್ತು 6-12 ತಿಂಗಳ ಅವಧಿಗೆ ಅಮಾನತುಗೊಳಿಸಲು ಸರ್ವಾನುಮತದಿಂದ ನಿರ್ಧರಿಸಿತು. .

ಸಮಿತಿಯು ಪಂಜಾಬ್ ಸಶಸ್ತ್ರ ಪೊಲೀಸ್ ಆಟಗಾರರಾದ ಹರ್ದೀಪ್ ಸಿಂಗ್ ಮತ್ತು ಜಸ್ಕರನ್ ಸಿಂಗ್ ಅವರನ್ನು 18 ತಿಂಗಳ ಅಮಾನತಿಗೆ ಒಳಪಡಿಸಿದರೆ, ದುಪಿಂದರ್‌ದೀಪ್ ಸಿಂಗ್, ಜಗ್ಮೀತ್ ಸಿಂಗ್, ಸುಖ್ಪ್ರೀತ್ ಸಿಂಗ್, ಸರ್ವಂಜಿತ್ ಸಿಂಗ್ ಮತ್ತು ಬಲ್ವಿಂದರ್ ಸಿಂಗ್ ಅವರನ್ನು 12 ಡಿಸೆಂಬರ್ 2019 ರಿಂದ 11 ತಿಂಗಳವರೆಗೆ ಅಮಾನತುಗೊಳಿಸಲಾಗಿದೆ. ಹಾಕಿ ಇಂಡಿಯಾ ಅಥವಾ ಹಾಕಿ ಇಂಡಿಯಾ ಲೀಗ್ ನೀತಿ ಸಂಹಿತೆಯಡಿ 3ನೇ ಹಂತದ ಅಪರಾಧ ಎಂದು ಹಾಕಿ ಇಂಡಿಯಾ ಪ್ರಕಟನೆಯಲ್ಲಿ ತಿಳಿಸಿದೆ.

3ನೇ ಹಂತದ ತಪ್ಪಿಗಾಗಿ ಪಂಜಾಬ್ ಸಶಸ್ತ್ರ ಪೊಲೀಸ್ ತಂಡದ ವ್ಯವಸ್ಥಾಪಕ ಅಮಿತ್ ಸಂಧು ಅವರನ್ನು 18 ತಿಂಗಳು ಅಮಾನತುಗೊಳಿಸಲಾಗಿದೆ ಮತ್ತು ಪಂಜಾಬ್ ಪೊಲೀಸ್ ತಂಡವನ್ನು ಮೂರು ತಿಂಗಳ ಅಮಾನತುಗೊಳಿಸಬೇಕು ಮತ್ತು ಯಾವುದೇ ಅಖಿಲ ಭಾರತ ಪಂದ್ಯಾವಳಿಗಳಲ್ಲಿ ಆಡಲು ಅರ್ಹರಲ್ಲ ಎಂದು ಶಿಫಾರಸು ಮಾಡಲಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಸುಖಜೀತ್ ಸಿಂಗ್, ಗುರ್ಸಿಮ್ರಾನ್ ಸಿಂಗ್ ಮತ್ತು ಸುಮಿತ್ ಟೊಪ್ಪೊ ಅವರನ್ನು 12 ತಿಂಗಳು ಅಮಾನತುಗೊಳಿಸಲಾಗಿದ್ದು, ತಂಡದ ನಾಯಕ ಜಸ್ಬೀರ್ ಸಿಂಗ್ ಅವರನ್ನು ಆರು ತಿಂಗಳವರೆಗೆ ಅಮಾನತುಗೊಳಿಸಲಾಗಿದೆ.

ನೀತಿ ಸಂಹಿತೆ ಮತ್ತು ನಿರ್ಬಂಧಗಳನ್ನು ಅನುಸರಿಸಲು ಅವರ ತಂಡದ ಅಸಮರ್ಥತೆಯಿಂದಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ತಂಡದ ವ್ಯವಸ್ಥಾಪಕ ಸುಶೀಲ್ ಕುಮಾರ್ ದುಬೆ ಅವರನ್ನು ಆರು ತಿಂಗಳ ಕಾಲ ಅಮಾನತುಗೊಳಿಸಲಾಗಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ತಂಡವನ್ನು ಮೂರು ತಿಂಗಳ ಅಮಾನತಿಗೆ ಒಳಪಡಿಸಬೇಕು ಮತ್ತು ಡಿಸೆಂಬರ್ 11 ರಿಂದ ಮಾರ್ಚ್ 10 ರವರೆಗೆ ಯಾವುದೇ ಅಖಿಲ ಭಾರತ ಪಂದ್ಯಾವಳಿಗಳಲ್ಲಿ ಆಡಲು ಅರ್ಹರಲ್ಲ ಎಂದು ಸಹ ಶಿಫಾರಸು ಮಾಡಲಾಗಿದೆ.

ಮೇಲಿನ ಎಲ್ಲಾ ಆಟಗಾರರು ತಮ್ಮ ನಿರ್ಬಂಧಗಳ ಅವಧಿ ಮುಗಿದ ನಂತರ 24 ತಿಂಗಳ ಅವಧಿಗೆ ಹೆಚ್ಚಿನ ಪರೀಕ್ಷೆಗೆ ಒಳಪಡುತ್ತಾರೆ ಮತ್ತು ನೀತಿ ಸಂಹಿತೆಯ ಯಾವುದೇ ಉಲ್ಲಂಘನೆಯು ತಕ್ಷಣದ 3ನೇ ಅಪರಾಧವಾಗುತ್ತದೆ ಎಂದು ಸಮಿತಿಯು ಸರ್ವಾನುಮತದಿಂದ ಒಪ್ಪಿಕೊಂಡಿತು. ಅಂತಹವರನ್ನು ಮುಂದೆ ಎರಡು ವರ್ಷಗಳವರೆಗೆ ಅಮಾನತುಗೊಳಿಸಲಾಗುವುದು.

ಹಾಕಿ ರಾಜನಂದಗಾಂವ್ ನಾಯಕ ಮಿಥಲೇಶ್ ಪಾಂಡಿಯಾ ಅವರನ್ನು ಮೂರು ತಿಂಗಳ ಅಮಾನತುಗೊಳಿಸಲಾಗಿದ್ದು, ಸಂದೀಪ್ ಯಾದವ್, ತೌಫಿಕ್ ಅಹ್ಮದ್, ಸುಖದೇವ್ ನಿರಮಾಲ್ಕರ್ ಅವರನ್ನು ಒಂಬತ್ತು ತಿಂಗಳ ಅಮಾನತು ಮಾಡಲಾಗಿದೆ.

ಲೆವೆಲ್ 2 ಅಪರಾಧ ಎಸಗಿದ ಕಾರಣ ಬಿಲಾಸ್ಪುರ್ ನಾಯಕ ಓಂಕರ್ ಯಾದವ್ ಮತ್ತು ತಂಡದ ವ್ಯವಸ್ಥಾಪಕ ಇಖ್ಲಾಕ್ ಅಲಿ ಅವರನ್ನು ಮೂರು ತಿಂಗಳವರೆಗೆ ಅಮಾನತುಗೊಳಿಸಲಾಗಿದ್ದು, ಲೂಯಿಸ್ ಟಿರ್ಕಿ ಅವರು ಲೆವೆಲ್ 3 ಅಪರಾಧ ಎಸಗಿದ ಕಾರಣ ಅವರನ್ನು ಆರು ತಿಂಗಳು ಅಮಾನತುಗೊಳಿಸಲಾಗಿದೆ.

ಟೂರ್ನಮೆಂಟ್ ನಿರ್ದೇಶಕ ಕಿಶೋರ್ ದಿಹ್ವಾರ್ ಅವರ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಕ್ಕಾಗಿ ಮೂರು ತಿಂಗಳ ಅಮಾನತು ಶಿಕ್ಷೆ ವಿಧಿಸಲಾಗಿದ್ದು, ಅಂಪೈರ್ ಶಕೀಲ್ ಅಹ್ಮದ್ ಅವರನ್ನು ಒಂದು ವರ್ಷ ನಿಷೇಧಿಸಲಾಯಿತು.

ಈ ಎಲ್ಲಾ ಆಟಗಾರರು, ಅಧಿಕಾರಿಗಳು ಮತ್ತು ರಾಜ್ಯ ಸದಸ್ಯರ ಘಟಕವು ಅವರ ನಿರ್ಬಂಧಗಳ ಅವಧಿ ಮುಗಿದ ನಂತರ ಒಂದು ವರ್ಷದವರೆಗೆ ಪರೀಕ್ಷೆಗೆ ಒಳಪಡಬೇಕಾಗುತ್ತದೆ ಮತ್ತು ನೀತಿ ಸಂಹಿತೆಯ ಯಾವುದೇ ಉಲ್ಲಂಘನೆಯು ತಕ್ಷಣದ 3ನೇ ಅಪರಾಧವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News