ಲೆಕ್ಕ ಪರಿಶೋಧಕರು ದೇಶದ ಹಣಕಾಸು ವ್ಯವಸ್ಥೆಯ ಸಂರಕ್ಷಕರು: ಪಿ.ವಿ.ಭಾರತಿ

Update: 2019-12-12 07:48 GMT

ಮಂಗಳೂರು, ಡಿ.12: ಲೆಕ್ಕ ಪರಿಶೋಧಕರು ದೇಶದ ಹಣಕಾಸು ವ್ಯವಸ್ಥೆಯ ಸಂರಕ್ಷಕರು ಎಂದು ಕಾರ್ಪೋರೇಶನ್ ಬ್ಯಾಂಕಿನ ಆಡಳಿತ ನಿರ್ದೇಶಕಿ ‌ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ವಿ.ಭಾರತಿ ತಿಳಿಸಿದ್ದಾರೆ. 

ನಗರದ ಪುರಭವನದಲ್ಲಿಂದು ಅವರು ಎರಡು ದಿನಗಳ ಕಾಲ ನಡೆಯಲಿರುವ ಲೆಕ್ಕಪರಿಶೋಧಕರ ರಾಷ್ಟ್ರೀಯ ಕಾರ್ಯಾಗಾರ ವನ್ನು 'ಅವಿರಥ್' ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಬೆಳೆಯುತ್ತಿರುವ ಆರ್ಥಿಕವ್ಯವಸ್ಥೆ ಯಲ್ಲಿ ಲೆಕ್ಕಪರಿಶೋಧನೆ ಒಂದು ಜಾಗತಿಕ ಉದ್ಯಮವಾಗಿ ಬೆಳೆದಿದೆ. ಬ್ಯಾಂಕ್ ಹಾಗೂ ಲೆಕ್ಕಪರಿಶೋಧಕರ ನಡುವೆ ನಿಕಟ ಸಂಬಂಧವಿದೆ‌. ಗ್ರಾಹಕರಿಗೆ ಯಾವುದೇ ಸಾಲ ನೀಡುವ ಸಂದರ್ಭದಲ್ಲಿ ಲೆಕ್ಕಪರಿಶೋಧಕರು ನೀಡುವ ಸಲಹೆ ಸೂಚನೆಗಳನ್ನು ಕಡ್ಡಾಯವಾಗಿ ಪಡೆಯಬೇಕಾಗುತ್ತದೆ. ಲೆಕ್ಕಪರಿಶೋಧಕರ ಸಹಿಯೊಂದಿಗಿನ ಲೆಕ್ಕಪತ್ರ ಮಾತ್ರ ಇಂದಿನ ದಿನಗಳಲ್ಲಿ ಮಾನ್ಯತೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಲೆಕ್ಕಪರಿಶೋಧಕರು ಸಾರ್ವಜನಿಕರ ಹಣಕಾಸಿನ ಸಂರಕ್ಷಕರಾಗಿದ್ದಾರೆ ಎಂದು ಭಾರತಿ ತಿಳಿಸಿದ್ದಾರೆ.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಂಆರ್ ಪಿಎಲ್ ನ ಆಡಳಿತ ನಿರ್ದೇಶಕ ಎಂ.ವೆಂಕಟೇಶ್ ಮಾತನಾಡುತ್ತಾ, ದೇಶದ ಸಂಕೀರ್ಣ ವಾದ ತೆರಿಗೆ ವ್ಯವಸ್ಥೆ ಯಲ್ಲಿ ಸಾಕಷ್ಟು ಸುಧಾರಣೆಯಾಗಬೇಕಾಗಿದೆ ಈ ನಿಟ್ಟಿನಲ್ಲಿ ಲೆಕ್ಕ ಪರಿಶೋಧಕರು ಮತ್ತು ಉದ್ಯಮ ಸಂಸ್ಥೆ ಗಳ ನಡುವೆ ಸಂವಾದ ನಡೆಯಬೇಕಾಗಿದೆ. ಸಮರ್ಪಕವಾದ ಹಣಕಾಸು ನಿರ್ವಹಣೆ ಎಲ್ಲಾ ಕ್ಷೇತ್ರದಲ್ಲಿಯೂ ಅಗತ್ಯವಿದೆ ಎಂದರು.

ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ಸಿಸಿಎಂ ಅಧ್ಯಕ್ಷ ರಾಜೇಶ್ ಶರ್ಮಾ ಮಾತನಾಡಿ, ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿ ಯಲ್ಲಿ ಲೆಕ್ಕಪರಿಶೋಧಕರ ಪಾತ್ರ ಇಂದಿನ ದಿನಗಳಲ್ಲಿ ಪ್ರಾಮುಖ್ಯತೆ ಪಡೆದಿದೆ ಎಂದರು.

ಸಮಾರಂಭದ ವೇದಿಕೆಯಲ್ಲಿ ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಹಾಗೂ ಇತರ ಪದಾಧಿಕಾರಿಗಳಾದ ಬಾಬು ಅಬ್ರಹಾಂ ಕಲಿವಯಲ್ಲಿ, ದಯಾನಿವಾಸ್ ಶರ್ಮಾ, ಜೋನ್ ಕೆ ಜೋರ್ಜ್, ಗೀತಾ.ಬಿ, ಮಂಗಳೂರು ಘಟಕದ ಅಧ್ಯಕ್ಷ ಅನಂತ ಪದ್ಮನಾಭ, ಕಾರ್ಯದರ್ಶಿ ಸುಬ್ರಹ್ಮಣ್ಯ ಕಾಮತ್ ಮೊದಲಾದವರು ಉಪಸ್ಥಿತರಿದ್ದರು. ಐಡಾ ಡಿ ಸಿಲ್ವ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News