'ಮೈಕ್ರೋ ಫೈನಾನ್ಸ್ ಸಾಲ ಮನ್ನಾ' ಬಗ್ಗೆ ಸ್ಪಷ್ಟನೆ ನೀಡಿದ ಅಸೋಸಿಯೇಶನ್

Update: 2019-12-12 08:53 GMT

ಮಂಗಳೂರು, ಡಿ.12: ಕರ್ನಾಟಕ ಸರಕಾರ ಪ್ರಕಟಿಸಿರುವ ಋಣಮುಕ್ತ ಕಾಯಿದೆ ವ್ಯಾಪ್ತಿಗೆ ಮೈಕ್ರೋ ಫೈನಾನ್ಸ್(ಕಿರು ಹಣಕಾಸು ಸಂಸ್ಥೆಗಳು) ಬರುವುದಿಲ್ಲ ಎಂಬುದಾಗಿ ರಾಜ್ಯ ಸರಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಹಾಗಾಗಿ ಇಂತಹ ಸಂಸ್ಥೆಗಳ ಸಾಲ ಮನ್ನಾ ಇಲ್ಲ ಎಂದು ಅಸೋಸಿಯೇಷನ್ ಆಫ್ ಕರ್ನಾಟಕ ಮೈಕ್ರೋಫೈನಾನ್ಸ್ ಇನ್ಸ್ಟಿಟ್ಯೂಷನ್ಸ್(ಆಕ್ಮಿ), ಮೈಕ್ರೋಫೈನಾನ್ಸ್ ಇನ್ಸ್ಟಿಟ್ಯೂಷನ್ ನೆಟ್‌ವರ್ಕ್(ಎಂಫಿನ್) ಮತ್ತು ಮೈಕ್ಸೋ ಫೈನಾನ್ಸ್ ಸಂಘಟನೆಗಳ ಉದ್ಯಮವಾಗಿರುವ ಸಾ-ಧನ್‌ ನ ಅಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಆಕ್ಮಿ ಮಂಡಳಿ ಕಾರ್ಯದರ್ಶಿ ಶಾಂತ್ ಕುಮಾರ್ ‘ಮೈಕ್ರೋಫೈನಾನ್ಸ್ ಉದ್ಯಮ ಆರ್‌ಬಿಐನ ಕಾನೂನು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ ಕಳೆದ ಕೆಲವು ದಿನಗಳಿಂದ ಅವಿಭಜಿತ ದ.ಕ ಜಿಲ್ಲೆಯಲ್ಲಿ ದುರುದ್ದೇಶಪೂರ್ವಕವಾಗಿ ಗೊಂದಲಗಳನ್ನು ಸೃಷ್ಟಿಸಲಾಗುತ್ತಿದೆ. ಇಂತಹ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲ ಮನ್ನಾ ಆಗುವುದಿಲ್ಲ. ಹಾಗಾಗಿ ಸಾಲ ಪಡೆದವರು ಸಕಾಲದಲ್ಲಿ ಮರುಪಾವತಿ ಮಾಡಬೇಕು. ಇಲ್ಲವಾದರೆ ಕ್ರೆಡಿಟ್ ಬ್ಯೂರೋದಲ್ಲಿ ಅವರು ಸುಸ್ತಿದಾರರಾಗುತ್ತಾರೆ ಎಂದು ತಿಳಿಸಿದರು.

ದ.ಕ, ಉಡುಪಿ: 400 ಕೋ.ರೂ. ಬಾಕಿ
ಮೈಕ್ರೋಫೈನಾನ್ಸ್ ಸಂಸ್ಥೆಗಳು ದೇಶದ 6 ಕೋಟಿ ಕುಟುಂಬಗಳಿಗೆ ಸಾಲ ನೀಡಿವೆ. ರಾಜ್ಯದಲ್ಲಿ 22 ವರ್ಷಗಳಿಂದ ಜನರ ವಿಶ್ವಾಸ ಪಡೆದಿವೆ. ಮಹಿಳಾ ಸಬಲೀಕರಣಕ್ಕೂ ಕೊಡುಗೆ ನೀಡಿವೆ. ರಾಜ್ಯದಲ್ಲಿ 30 ಲಕ್ಷ, ದ.ಕ ಜಿಲ್ಲೆಯಲ್ಲಿ 2 ಲಕ್ಷ ಕುಟುಂಬಗಳು ಇಂತಹ ಸಂಸ್ಥೆಗಳಿಂದ ಹಣಕಾಸು ಸೌಲಭ್ಯ ಪಡೆದಿವೆ. ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಸುಮಾರು 400 ಕೋ.ರೂ. ಸಾಲ ನೀಡಲಾಗಿದೆ. ಅದರಲ್ಲಿ ಬಹುತೇಕ ಮೊತ್ತ ಪಾವತಿ ಬಾಕಿ ಇದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಮರುಪಾವತಿ ಕೂಡ ಶೇ.99.95ರಷ್ಟಿದೆ. ದ.ಕ ಜಿಲ್ಲೆಯಲ್ಲಿಯೂ ಕಳೆದ ಸೆಪ್ಟೆಂಬರ್‌ವರೆಗೂ ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡಲಾಗುತ್ತಿತ್ತು. ಆದರೆ ಕಳೆದ ಎರಡು ತಿಂಗಳಲ್ಲಿ ಕೆಲವರು ಗೊಂದಲ ಸೃಷ್ಟಿಸಿದ ಪರಿಣಾಮ ಸಾಲ ಪಡೆದುಕೊಂಡವರು ಮರುಪಾವತಿಯನ್ನು ವಿಳಂಬ ಮಾಡುತ್ತಿದ್ದಾರೆ. ಪ್ರಸ್ತುತ ಇಲ್ಲಿ ಮರುಪಾವತಿ ಶೇ. 65ರಷ್ಟಿದೆ. ಮರುಪಾವತಿ ವಿಳಂಬ ಮಾಡುವುದರಿಂದಾಗಿ ಅಗತ್ಯ ಇರುವವರಿಗೆ ಸಾಲ ನೀಡಲು ಸಮಸ್ಯೆಯಾಗುತ್ತಿದೆ. ಬಡವರಿಗೆ ತೊಂದರೆಯಾಗಲಿದೆ. ಅಲ್ಲದೆ ಈ ರೀತಿ ಸಾಲ ಬಾಕಿ ಇಟ್ಟುಕೊಂಡವರಿಗೂ ಸಮಸ್ಯೆಗಳಾಗುತ್ತದೆ ಎಂದು ಆಕ್ಮಿ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯ ಪಂಚಾಕ್ಷರಿ ಅವರು ಹೇಳಿದರು.

ದ.ಕ ಇಲ್ಲೆಯಲ್ಲಿ ಮೈಕ್ರೋ ಫೈನಾನ್ಸ್‌ಗೆ ಸಂಬಂಧಿಸಿದ ಗೊಂದಲಗಳನ್ನು ಪರಿಹರಿಸಲು ಜಿಲ್ಲಾಧಿಕಾರಿಯವರ ಸಲಹೆಯಂತೆ ಜಿಲ್ಲಾ ಮಟ್ಟದ ಪರಿಹಾರ ಕೇಂದ್ರವನ್ನು ಡಿ.16ರಂದು ಆರಂಭಿಸಲಾಗುವುದು. ಗ್ರಾಹಕರು 0824-2433632 ಅಥವಾ 7619508496ಗೆ ಕರೆ ಮಾಡಿ ತಮ್ಮ ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದು ಅಥವಾ ಆಯಾ ಮೈಕ್ರೋಪೈನಾನ್ಸ್ ಅಸೋಸಿಯೇಷನ್‌ನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಆಕ್ಮಿ ಸಿಇಒ ವಿ.ಎನ್.ಹೆಗ್ಡೆ, ಪ್ರಮುಖರಾದ ರಮೇಶ್, ಮಂಜುನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News