ಅಂಗನವಾಡಿ ನೌಕರರ ಸಮಸ್ಯೆ ನಿವಾರಣೆಗೆ ಸರಕಾರ ಬದ್ಧ: ಶಾಸಕ ಕಾಮತ್

Update: 2019-12-12 09:54 GMT

ಮಂಗಳೂರು, ಡಿ.12: ಸರ್ಕಾರ ಯಾವುದೇ ಯೋಜನೆಗಳನ್ನು ಯಶಸ್ವಿಯಾಗಿ ಜನರ ಬಳಿಗೆ ತಲುಪಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಕಾರ್ಯ ಶ್ಲಾಘನೀಯವಾಗಿದ್ದು, ಅವರ ಸಮಸ್ಯೆ ನಿವಾರಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ದ.ಕ.ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ಹಾಗೂ ದ.ಕ.ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಹಕಾರ ಸಂಘದ ಸಮಾಜ ಸೇವಾಂಜಲಿ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಗುರುವಾರ ಕದ್ರೋಳಿ ಗೋಕರ್ಣನಾಥ ದೇವಳದಲ್ಲಿ ಆಯೋಜಿಸಲಾದ ಅಂಗನವಾಡಿ ನೌಕರರ ಸಮಾವೇಶ, ಹಕ್ಕೊತ್ತಾಯ ಹಾಗೂ ನೆರವು ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಅತಿವೃಷ್ಠಿ-ಅನಾವೃಷ್ಠಿಗಳಿಂದಾಗಿ ಸರ್ಕಾರ ದೊಡ್ಡ ಹೊಡೆತ ಅನುಭವಿಸಿದೆ. ಆದರೂ ಮುಖ್ಯಮಂತ್ರಿಗಳು ಪ್ರತಿಯೊಂದು ಬೇಡಿಕೆಗಳನ್ನು ಪರಿಶೀಲಿಸಿ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡುತ್ತಿದ್ದಾರೆ. ಅಂಗನವಾಡಿ ನೌಕರರ ಕಣ್ಣೀರು ಒರೆಸುವ ಕೆಲಸವನ್ನೂ ಅವರು ಮಾಡಲಿದ್ದಾರೆ ಎಂದು ಅವರು ಹೇಳಿದರು.

ನಿವೃತ್ತಿಯಾಗಿ ಕಷ್ಟದಲ್ಲಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಟ್ರಸ್ಟ್ ವತಿಯಿಂದ ನೆರವು ನೀಡಲಾಯಿತು. ಜತೆಗೆ ವೈದ್ಯಕೀಯ ನೆರವು, ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಕಾರ್ಯಕರ್ತೆ ಮತ್ತು ಸಹಾಯಕಿಯರ ಮಕ್ಕಳಿಗೆ ಅಭಿನಂದನೆ, ಶೈಕ್ಷಣಿಕ ನೆರವು, ತಾಲೂಕು ಮಟ್ಟದಲ್ಲಿ ಗುರುತಿಸಲ್ಪಟ್ಟ ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನ ಮತ್ತು ಶೈಕ್ಷಣಿಕ ಸಾಲ ವಿತರಿಸಲಾಯಿತು. ಇದಕ್ಕೂ ಮೊದಲು ನಡೆದ ವಿಚಾರ ಸಂಕಿರಣದಲ್ಲಿ ರಾಜ್ಯದ ವಿವಿಧ ಜಿಲ್ಲೆಯಗಳ ಅಂಗನಾಡಿ ಕಾರ್ಯಕರ್ತಯರು ಭಾಗಹಿಸಿ ತಮ್ಮ ಅಭಿಪ್ರಾಯ ಮಂಡಿಸಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆ ವಹಿಸಿದ್ದರು. ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರ ಆಡಳಿತ ಮಂಡಳಿ ಖಜಾಂಚಿ ಪದ್ಮರಾಜ್ ಆರ್., ಮಂಗಳೂರು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೋಭಾರಾಣಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಧನ ಲಕ್ಷ್ಮಿಗಟ್ಟಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ವಿಜಯಲಕ್ಷ್ಮಿ ಬಿ.ಶೆಟ್ಟಿ ಮೊದಲಾದವರಿದ್ದರು.

ಸಂಘದ ರಾಜ್ಯಾಧ್ಯಕ್ಷೆ ಜಯಲಕ್ಷ್ಮಿ ಬಿ.ಆರ್. ಪ್ರಸ್ತಾವಿಸಿದರು. ಜಿಲ್ಲಾಧ್ಯಕ್ಷೆ ಲತಾ ಅಂಬೆಕಲ್ಲು ಸುಳ್ಯ ಸ್ವಾಗತಿಸಿದರು.

ಕನಿಷ್ಠ ವೇತನಕ್ಕೆ ಆಗ್ರಹ

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ 1975ರಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಯನ್ನು 5 ವರ್ಷದ ಅವಧಿಗೆ ನೇಮಕಾತಿ ನಿಯಮಾವಳಿ ರೂಪಿಸಿ ಸರಕಾರ ಗೌರವಧನ ನಿಗದಿಪಡಿಸಿತ್ತು. ಆದರೆ ಈವರೆಗೂ ಕನಿಷ್ಠ ವೇತನ ಜಾರಿಗೊಳಿಸಲಾಗಿಲ್ಲ. ಪ್ರಸಕ್ತ ನಿಯವಾಮಳಿಯನ್ನು ರದ್ದುಗೊಳಿಸಿ ಕಾರ್ಮಿಕ ಕಾಯ್ದೆಯಡಿ ಕನಿಷ್ಠ ವೇತನ ನಿಗದಿಪಡಿಸಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಸೂಚಿಸಿರುವ ಸುಪ್ರೀಂಕೋರ್ಟ್ ಆದೇಶ ಜಾರಿಗೊಳಿಸಬೇಕು ಎಂದು ಸಂಘದ ರಾಜ್ಯಾಧ್ಯಕ್ಷೆ ಜಯಲಕ್ಷ್ಮಿ ಬಿ.ಆರ್. ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News