ಹಳೆ ಬಂದರು: ಸೂಟ್‌ಕೇಸ್‌ನಲ್ಲಿ ವಿದೇಶಿ ಮದ್ಯ ಪತ್ತೆ

Update: 2019-12-12 12:26 GMT

ಮಂಗಳೂರು, ಡಿ.12: ನಗರದ ಹಳೆ ಬಂದರು (ಉಪ್ಪಿನ ದಕ್ಕೆ)ವಿನಲ್ಲಿ ಸೂಟ್‌ಕೇಸ್‌ವೊಂದರಲ್ಲಿ ಎರಡು ಬ್ರಾಂಡ್‌ನ 142 ಸ್ಯಾಚೆಟ್ ವಿದೇಶಿ ಮದ್ಯವನ್ನು ಕರಾವಳಿ ಕಾವಲು ಪಡೆಯ ಪೊಲೀಸರು ಬುಧವಾರ ಪತ್ತೆ ಹಚ್ಚಿದ್ದಾರೆ.

ಲಕ್ಷದ್ವೀಪ-ಮಂಗಳೂರು ನಡುವೆ ಚಲಿಸುವ 'ಮಿನಿಕಾಯ್' ಪ್ಯಾಸೆಂಜರ್ ಹಡಗನ್ನು ತಪಾಸಣೆಯ ನಿಟ್ಟಿನಲ್ಲಿ ಕಾವಲು ಪಡೆಯ ಎಸ್ಸೈ ಸುಜಾತಾ ಸಾಲ್ಯಾನ್, ಹೆಚ್‌ಸಿ ನಾಸಿರ್, ಸಂದೀಪ್ ಅವರು ಬುಧವಾರ ಅಪರಾಹ್ನ ಕರ್ತವ್ಯದಲ್ಲಿದ್ದಾಗ ಉಪ್ಪಿನ ದಕ್ಕೆಯಲ್ಲೊಂದು ಅನಾಥ ಸೂಟ್‌ಕೇಸ್ ಕಂಡು ಬಂತು. ತಕ್ಷಣ ಮೇಲಧಿಕಾರಿಗಳ ಗಮನ ಸೆಳೆದ ಪೊಲೀಸರು ಅವರ ಸೂಚನೆಯ ಮೇರೆಗೆ ಸ್ಥಳೀಯ ಕೆಲಸಗಾರರಾದ ಸುನೀಲ್ ಮತ್ತು ಚರಣ್ ಸಮ್ಮುಖ ತಪಾಸಣೆ ನಡೆಸಿದಾಗ ಅದರಲ್ಲಿ ಒರಿಜಿನಲ್ ಚಾಯಿಸ್ ಡಿಲಕ್ಸ್ ವಿಸ್ಕಿ (180 ಎಂ.ಎಲ್.)ಯ 49 ಸ್ಯಾಚೆಟ್ ಮತ್ತು ಬೆಂಗಳೂರು ವಿಸ್ಕಿ (90 ಎಂ.ಎಲ್.)ಯ 96 ಸ್ಯಾಚೆಟ್ ಸಹಿತ ಒಟ್ಟು 142 ಸ್ಯಾಚೆಟ್ ಕಂಡು ಬಂತು. ಇದರ ಮೌಲ್ಯ 5 ಸಾವಿರ ರೂ. ಎಂದು ಅಂದಾಜಿಸಲಾಗಿದೆ.

ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸಿದ ಆರೋಪಿಗಳು ಪೊಲೀಸರನ್ನು ಕಂಡು ಸೂಟ್‌ಕೇಸನ್ನು ಎಸೆದು ಹೋಗಿರಬೇಕು ಎಂದು ಶಂಕಿಸಲಾಗಿದೆ. ಈ ಬಗ್ಗೆ ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News