ಇಬ್ರಾಹಿಂ ಗೂನಡ್ಕ ಹೇಳಿಕೆ ಸುಳ್ಳು: ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್

Update: 2019-12-12 13:11 GMT

ಉಳ್ಳಾಲ: ಇತಿಹಾಸ ಪ್ರಸಿದ್ಧ ಉಳ್ಳಾಲ ದರ್ಗಾ ಆಡಳಿತ ಸಮಿತಿಯ ಮೇಲೆ ಸುಳ್ಳಾರೋಪ ಹೊರಿಸುವ ಮೂಲಕ ದರ್ಗಾದ ಪಾವಿತ್ರ್ಯಕ್ಕೆ ಧಕ್ಕೆ ತರುವ ಷಡ್ಯಂತ್ರ ನಡೆಯುತ್ತಿದ್ದು, ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ಇಬ್ರಾಹಿಂ ಗೂನಡ್ಕ ಅವರು ಸುದ್ದಿಗೋಷ್ಠಿ ಕರೆದು ನ.25ರಂದು ದರ್ಗಾವನ್ನು ಸ್ವಾಧೀನಪಡಿಸಿದ್ದೇನೆ ಎಂದು ಹೇಳಿಕೆ ನೀಡಿರುವುದು ಸತ್ಯಕ್ಕೆ ದೂರವಾದ ವಿಚಾರ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಆರೋಪಿಸಿದ್ದಾರೆ.

ಅವರು ಉಳ್ಳಾಲ ದರ್ಗಾದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಡಳಿತಾಧಿಕಾರಿಯಾಗಿ ನೇಮಕಕೊಂಡ ಇಬ್ರಾಹಿಂ ಗೂನಡ್ಕ ಅವರು ದರ್ಗಾದಲ್ಲಿ ಅವ್ಯವಹಾರ ನಡೆದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಅಲ್ಲದೇ ಬಿಜೆಪಿ ಮುಖಂಡ ಅನ್ವರ್ ಮಾಣಿಪ್ಪಾಡಿ ಅವರು ಒಂಭತ್ತು ವರ್ಷಗಳಲ್ಲಿ 23 ಕೋಟಿ ರೂ. ಅವ್ಯವಹಾರ ವಕ್ಫ್ ಇಲಾಖೆಯಲ್ಲಿ ನಡೆದಿದ್ದು, ಇದರಲ್ಲಿ ಉಳ್ಳಾಲ ದರ್ಗಾ  ಕೂಡಾ ಇದೆ ಎಂದು ಆರೋಪಿಸುವುದರಲ್ಲಿ ಅರ್ಥವಿಲ್ಲ. ಉಳ್ಳಾಲ ದರ್ಗಾದ ಲೆಕ್ಕಪತ್ರ ವಕ್ಫ್ ಇಲಾಖೆಗೆ ಹೋಗುತ್ತಿದ್ದು, ಇದನ್ನು ನೋಡಲು ವಕ್ಫ್ ಆಡಿಟರ್ ಇದ್ದಾರೆ. ಲೆಕ್ಕಪತ್ರದ ಬಗ್ಗೆ ಯಾವುದೇ ದೂರು ಆಡಿಟರ್ ನಿಂದ ಬರಲಿಲ್ಲ. ಅಲ್ಲದೇ 1972ರಲ್ಲಿ ಉಳ್ಳಾಲ ದರ್ಗಾ ಆಡಳಿತ ಸಮಿತಿ ಪಾವತಿಸುವ ಸೆಸ್‍ ಗೆ ವಕ್ಫ್ ಇಲಾಖೆ ರಿಯಾಯಿತಿ ನೀಡಿತ್ತು. ಆದರೆ ದರ್ಗಾ ತಿಂಗಳಿಗೆ 10 ಸಾವಿರ ರೂ. ಸೆಸ್ ಕಟ್ಟುತ್ತಿದೆ. 1.37 ಕೋಟಿ ರೂ. ಸೆಸ್ ಕಟ್ಟಬೇಕು ಎಂದು ವಕ್ಫ್ ನೀಡಿರುವ ನೊಟೀಸ್‍ ಗೆ ಸಂಬಂಧಿಸಿ ಕೋರ್ಟ್‍ನಲ್ಲಿ ವ್ಯಾಜ್ಯ ನಡೆಯುತ್ತಿದೆ. ಈ ಮಧ್ಯೆ ವಕ್ಫ್ 36 ಲಕ್ಷ ರೂ. ಸೇರಿಸಿ 1.70 ಕೋಟಿ ರೂ. ಸೆಸ್ ಕಟ್ಟುವಂತೆ ನೋಟೀಸ್ ನೀಡಿರುವುದು ಹಾಸ್ಯಾಸ್ಪದ ಎಂದರು. 

ಸೈಯದ್ ಮದನಿ ಮೊಹಲ್ಲಾ  ಒಕ್ಕೂಟ ನಡೆಸುವ 10 ಮದ್ರಸ ದರ್ಗಾದ ಸೊತ್ತಾಗಿದೆ. ಅವರು ಆಡಳಿತದ ಜತೆ ಕೈಜೋಡಿಸಲು ತಯಾರಿಲ್ಲದ ಕಾರಣ ಮದ್ರಸ ಅವರ ಸ್ವಾಧೀನದಲ್ಲಿದೆ. ಸೈಯದ್ ಮದನಿ ಮೊಹಲ್ಲಾ ಒಕ್ಕೂಟ ಎಂಬ ಸಂಘಟನೆ ಉಳ್ಳಾಲ ಜಮಾಅತಿನ ಬೈಲಾ ಆಶಯಕ್ಕೆ ವಿರುದ್ಧವಾಗಿದೆ.  ಈ ಒಕ್ಕೂಟವು ಸೈಯದ್ ಮದನಿ ಮದ್ರಸ ಪಠ್ಯ ಪುಸ್ತಕವನ್ನು ವಿರೋಧಿಸಿ ಕೇರಳ ರಾಜ್ಯದ ಮದ್ರಸ ಪಠ್ಯ ಪುಸ್ತಕವನ್ನು ಮುಂದುವರಿಸಿ ಬೈಲಾ ನಿಯಮ ಉಲ್ಲಂಘಿಸಿದೆ. ಈ ಬಗ್ಗೆ ವಕ್ಫ್ ಗೆ ದೂರು ನೀಡಲಾಗಿದೆ. ಅವರ ಕೈಯಿಂದ ಮದ್ರಸವನ್ನು ಸ್ವಾಧೀನಪಡಿಸಿಕೊಳ್ಳುವ ಹಕ್ಕು ಕಾನೂನಿನಡಿಯಲ್ಲಿ ದರ್ಗಾಕ್ಕೆ ಇದ್ದರೂ ಶಾಂತಿ ಕಾಪಾಡುವ ದೃಷ್ಟಿಯಿಂದ ಆ ಕೆಲಸಕ್ಕೆ ಹೋಗಿಲ್ಲ. ದರ್ಗಾದಲ್ಲಿ ಭ್ರಷ್ಟಾಚಾರ ನಡೆದಿದೆ. ಶಿಕ್ಷಕರಿಗೆ ಸಂಬಳ ನೀಡಿಲ್ಲ ಎಂದು ಆರೋಪ ಮಾಡುವವರು ಮೊದಲು ಸಾಬೀತು ಮಾಡಬೇಕು. ಸಂಬಳ ನೀಡುವುದರಲ್ಲಿ ಏರುಪೇರು, ವಿಳಂಬ ಆಗಿರಬಹುದು. ಆದರೆ ಮೊಹಲ್ಲಾ ಒಕ್ಕೂಟ ಆರೋಪಿಸುವಷ್ಟು ಶಿಕ್ಷಕರಿಗೆ ಸಂಬಳ ಬಾಕಿ ಇಟ್ಟಿಲ್ಲ. ಎರಡು ವರ್ಷದಿಂದ ವೇತನ ನೀಡಿಲ್ಲ ಎನ್ನುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದರು. 

ಪಂಪ್‍ ವೆಲ್ ಬಳಿ ಇರುವ 04.05 ಸೆಂಟ್ಸ್ ಜಾಗ ವಕ್ಫ್ ನೊಂದಾಯಿತ ಸ್ಥಳ ಎಂಬ ಮೊಹಲ್ಲಾ ಒಕ್ಕೂಟದ ಆರೋಪ ದುರುದ್ದೇಶಪೂರಿತವಾಗಿದೆ. ಸೈಯದ್ ಮದನಿ ಅರೆಬಿಕ್ ಟ್ರಸ್ಟ್ ಗೆ ಸೇರಿದ ಈ ಜಾಗ ಮುಖ್ಯ ರಸ್ತೆ ಅಗಲೀಕರಣವಾದ ಕಾರಣದಿಂದ ಹಿಂಭಾಗದಲ್ಲಿರುವವರಿಗೆ ಕ್ರಮಬದ್ಧವಾಗಿ ಮಾರಾಟ ಮಾಡಿದ್ದೇವೆ. ಇದರ ಬಗ್ಗೆ ಮಾಹಿತಿ, ದಾಖಲೆ ಎಲ್ಲಾ ಇದೆ. ಹಿಂದಿನ ಆಡಳಿತ ಸಮಿತಿಯು ಎಂಟು ಕೋಟಿ ರೂ.ಗೆ ಮಾರಾಟ ಮಾಡಬೇಕಿದ್ದ ಚೆಂಬುಗುಡ್ಡೆಯ ಜಾಗವನ್ನು 3 ಕೋಟಿ ರೂ.ಗೆ ಮಾರಾಟ ಮಾಡಿ ದುರುಪಯೋಗ ಮಾಡಿದ್ದಾರೆ. ಉಳ್ಳಾಲದಲ್ಲಿ ಅನ್ಯಾಯ ನಡೆಯುತ್ತಿದೆ. ನಾನು ಸ್ವಯಂಘೋಷಿತ ಅಧ್ಯಕ್ಷ ಎಂಬ ಆಪಾದನೆ ಕೂಡಾ ಮೊಹಲ್ಲಾ ಸಮಿತಿ ಮಾಡುತ್ತಿದೆ. ನನ್ನ ನೇತೃತ್ವದ ದರ್ಗಾ ಆಡಳಿತ ಸಮಿತಿ 2016 ಎಪ್ರಿಲ್ 4ರಂದು  ಅಂದಿನ ವಕ್ಫ್ ಮಂಡಳಿಯ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಂ.ಆರ್. ಅಬ್ದುಲ್ ರಶೀದ್, ಈಗಿನ ಅಧ್ಯಕ್ಷ ಕಣಚೂರು ಮೋನು ಮತ್ತು ಶಾಸಕ ಖಾದರ್ ರವರ ಸಮಕ್ಷಮದಲ್ಲಿ ತಲೆ ಎಣಿಕೆಯ ಮೂಲಕ ಬಹುಮತ ಸಾಬೀತುಮಾಡಿ ಪದಾಧಿಕಾರಿಗಳನ್ನು ರಚಿಸಿಕೊಂಡ ಸಮಿತಿಯಾಗಿದೆ. ಉಳ್ಳಾಲ ಖಾಝಿಯಾಗಿದ್ದ ಫಝಲ್ ಕೋಯಮ್ಮ ತಂಙಳ್ ಕೂಡಾ ಚುನಾಯಿತ ಸಮಿತಿಗೆ ಶುಭ ಹಾರೈಸಿದ್ದರು. ಆದರೂ ಕೂಡಾ ನಮ್ಮ ಸಮಿತಿಯನ್ನು ಅನಧಿಕೃತ ಎಂದು ಕರೆಯುತ್ತಿರುವುದು ಸಮಿತಿ ರಚನೆ ಸಂದರ್ಭ ಉಪಸ್ಥಿತರಿದ್ದ ಗಣ್ಯರಿಗೆ ಮಾಡುವ ಅವಮಾನವಾಗಿದೆ ಎಂದು ಆರೋಪಿಸಿದರು. 

ರಮಝಾನ್ ಸಂದರ್ಭ ಕೂಡಾ ದರ್ಗಾ ಸಮಿತಿ ಉಡುಪಿ, ಮಂಗಳೂರು ಮತ್ತು ಕಾಸರಗೋಡು ಖಾಝಿಯವರಲ್ಲಿ ಕೇಳಿ ತೀರ್ಮಾನ ತೆಗೆದುಕೊಳ್ಳುತ್ತದೆ. ಒಂದು ಬಾರಿ ಎಲ್ಲಾ ಖಾಝಿಗಳು ರವಿವಾರ ಈದುಲ್ ಫಿತ್ರ್ ಘೋಷಿಸಿದರೆ, ಕೂರ ತಂಙಳ್ ಮಾತ್ರ ಉಳಿದ ಖಾಝಿಗಳ ನಿರ್ಧಾರಕ್ಕೆ ಒಪ್ಪಲಿಲ್ಲ. ದರ್ಗಾ ಆಡಳಿತ ಸಮಿತಿ ಖಾಝಿಗಳ ತೀರ್ಮಾನದಂತೆ ಹಬ್ಬ ಆಚರಣೆ ಮಾಡಿದೆ. ಆದರೆ ಇದೇ ವಿಚಾರದಲ್ಲಿ ಮರುದಿನ ಹಬ್ಬ ಆಚರಿಸುವವರು ವಿನಾಕಾರಣ ಗೊಂದಲ ಸೃಷ್ಟಿಸಿ ದರ್ಗಾ ಸದಸ್ಯ ಕೆ.ಎನ್. ಮುಹಮ್ಮದ್ ಎಂಬವರ ಮೇಲೆ ಹಲ್ಲೆ ಕೂಡಾ ನಡೆಸಿದ್ದರು. ಉಳ್ಳಾಲ ಖಾಝಿಯಾಗಿದ್ದ ಫಝಲ್ ಕೋಯಮ್ಮ ತಂಙಳ್ ಅವರನ್ನು ದರ್ಗಾ ಸಮಿತಿ ಬೇಡ ಎನ್ನಲಿಲ್ಲ. ಒಂದು ಬಾರಿ ಅವರೇ ದರ್ಗಾಕ್ಕೆ ಬಂದು ಧ್ವನಿವರ್ಧಕದ ಮೂಲಕ ನಾನು ಖಾಝಿಯಾಗಿ ಮುಂದುವರಿಯುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ್ದರು. ಈ ಕಾರಣದಿಂದ ದರ್ಗಾ ಸಮಿತಿ ಬೇರೆ ಖಾಝಿ ನೇಮಕ ಮಾಡುವ ನಿರ್ಧಾರ ಕೈಗೊಂಡಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರ.ಕಾರ್ಯದರ್ಶಿ ತ್ವಾಹಾ ಹಾಜಿ, ಉಪಾಧ್ಯಕ್ಷ ಮೋನು, ಫಾರೂಕ್ ಉಳ್ಳಾಲ್, ಇಲ್ಯಾಸ್ ಅಬ್ದುಲ್ ಖಾದರ್, ಹಮೀದ್, ಮುಸ್ತಫಾ, ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News