ಸಜಿಪನಡು: ತೀವ್ರ ವಿರೋಧ ವ್ಯಕ್ತವಾದ ನಂತರ 'ಹಿಂದೂ ರಾಷ್ಟ್ರ ಸ್ಥಾಪನೆ'ಯ ಬ್ಯಾನರ್ ತೆರವು

Update: 2019-12-12 14:49 GMT

ಬಂಟ್ವಾಳ, ಡಿ. 12: 'ಹಿಂದೂ ರಾಷ್ಟ್ರ ಸ್ಥಾಪನೆಗಾಗಿ' ಹಿಂದೂ ರಾಷ್ಟ್ರ ಜಾಗೃತಿ ಸಭೆ ಎಂಬ ಶೀರ್ಷಿಕೆಯ ಸಂವಿಧಾನ ವಿರೋಧಿ, ವಿವಾದಿತ ಬ್ಯಾನರ್ ಅಳವಡಿಸಿದ ಬಗ್ಗೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬ್ಯಾನರ್ ಅನ್ನು ತೆರವುಗೊಳಿಸಿದ ಘಟನೆ ಬಂಟ್ವಾಳ ತಾಲೂಕಿನ ಸಜಿಪನಡು ಎಂಬಲ್ಲಿ ಗುರುವಾರ ನಡೆದಿದೆ.

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಡಿ. 15ರಂದು ಸಜಿಪನಡು ಷಣ್ಮುಖಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಲಿರುವ ಹಿಂದೂ ರಾಷ್ಟ್ರದ ಜಾಗೃತಿ ಸಭೆಗೆ ಸಂಬಂಧಿಸಿ ಹಲವು ಕಡೆಗಳಲ್ಲಿ ಬ್ಯಾನರ್ ಗಳು ಹಾಗೂ ಕರಪತ್ರಗಳನ್ನು ಅಂಟಿಸಲಾಗಿದೆ. ಅದೇ ರೀತಿ ಸಜಿಪನಡು ಗ್ರಾಮದ ಕೋಟೆಕಣಿ ಸಾರ್ವಜನಿಕ ಸ್ಥಳದ ಕಂಬವೊಂದಕ್ಕೆ ಈ ಬ್ಯಾನರ್ ಅನ್ನು ಅಳವಡಿಸಲಾಗಿತ್ತು. ಈ ಬಗ್ಗೆ ಸಜಿಪನಡು, ಕೋಟೆಕಣಿ, ತಲೆಮೊಗರು, ಗೋಳಿಪಡ್ಪು ಹಾಗೂ ಇತರ ಸಂಘಟನೆಯ ಮುಖಂಡರು ಆಕ್ಷೇಪ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದ್ದು, ಬಳಿಕ ಬ್ಯಾನರ್ ಅನ್ನು ತೆರವುಗೊಳಿಸಿರುವುದಾಗಿ ಹೇಳಲಾಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ:
ಈ ವಿಚಾರವಾಗಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೊಳಗಾಗುತ್ತಿದೆ. ಅದಲ್ಲದೆ, ಸಾರ್ವಜನಿಕರ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಇದು ವಿವಾದಕ್ಕೆ ಎಡೆ ಮಾಡಿಕೊಟ್ಟಿವೆ. ಬ್ಯಾನರ್ ಅಳವಡಿಕೆಯ ಮೂಲಕ ಪ್ರಚಾರಕ್ಕಿಂತಲೂ ವಾಟ್ಸ್ ಆ್ಯಪ್ ಸಹಿತ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಗೊಳಗಾಗುವ ಮೂಲಕ ಪ್ರಚಾರ ಪಡೆಯುತ್ತಿವೆ.

'ಸಂವಿಧಾನ ವಿರೋಧಿ ಕಾರ್ಯಕ್ರಮಕ್ಕೆ ಅವಕಾಶ ನೀಡದಿರಿ'
ಸಜಿಪನಡುವಿನಲ್ಲಿ ಸಂವಿಧಾನ ವಿರೋಧಿ ಬ್ಯಾನರ್ ಅಳವಡಿಸಿದ ಹಾಗೂ ಪೋಸ್ಟರ್ ಮೂಲಕ ಸಾಮಾಜಿಕ ಸಾಮರಸ್ಯವನ್ನು ಕೆಡವಲು ಮುಂದಾಗಿರುವ ಕಿಡಿಗೇಡಿಗಳ ವಿರುಧ ದೇಶವಿರೋಧಿ ಪ್ರಕರಣ ದಾಖಲಿಸಬೇಕು. ಸಂವಿಧಾನ ವಿರೋಧಿ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸದಂತೆ ಸಾರ್ವಜನಿಕ ವಲಯಗಳಲ್ಲಿ ಒತ್ತಾಯವೂ ಕೇಳಿಬರುತ್ತಿದೆ. ಅಲ್ಲದೆ ಈ ಬಗ್ಗೆ ಪೊಲೀಸ್ ಇಲಾಖೆಯು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಜರುಗಿಸಬೇಕು ಎಂಬ ಒತ್ತಾಯವೂ ಕೇಳಿ ಬರುತ್ತಿವೆ.

ಕರಪತ್ರದಲ್ಲೇನಿದೆ?:
ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದೂ ರಾಷ್ಟ್ರ ಜಾಗೃತಿ ಸಭೆ ತಲೆಬರಹದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಇದರ ಜೊತೆಗೆ ಡಿ.15ಕ್ಕೆ ಕಾರ್ಯಕ್ರಮ ನಡೆಯಲಿದೆ ಎನ್ನುವ ಕರಪತ್ರವೊಂದು ವೈರಲ್ ಆಗಿದ್ದು, ಇದರಲ್ಲಿ ಭಾರತ ಸೆಕ್ಯುಲರ್ ಆಗಿರದೇ ಹಿಂದೂ ರಾಷ್ಟ್ರವೇ ಆಗಿದೆ. ಹಿಂದೂ ರಾಷ್ಟ್ರಕ್ಕೆ ಸಂವಿಧಾನಿಕ ಮನ್ನಣೆ ತರಲು ನಾವೆಲ್ಲಾ ಒಂದಾಗಬೇಕು, 64 ಲಕ್ಷ ಜ್ಯೂ ಧರ್ಮಿಯರ ಇಸ್ರೇಲ್ ದೇಶವೂ ಜ್ಯೂ ರಾಷ್ಟ್ರವಾಗಬಹುದಾದರೆ 100 ಕೋಟಿ ಹಿಂದುಗಳ ರಾಷ್ಟ್ರವು ಹಿಂದೂ ರಾಷ್ಟ್ರ ಯಾಕಾಗಬಾರದು? ಎಂದು ಕರಪತ್ರದಲ್ಲಿ ಬರೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News